ಸಂಪಾಜೆ:ಸಂಪಾಜೆ ಗ್ರಾಮದ ಗೂನಡ್ಕ ಸಮೀಪದ ಪೇರಡ್ಕ ಭಾಗದಲ್ಲಿ ನಾಲ್ಕು ದಿನಗಳಿಂದ ವಿದ್ಯುತ್ ಕಡಿತಗೊಂಡಿದ್ದು ಜನರು ಕತ್ತಲಲ್ಲಿ ಕಳೆಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಶನಿವಾರ ಸಂಜೆ ಸುರಿದ ಮಳೆ ಮತ್ತು ಗಾಳಿಗೆ ಸುಳ್ಯ ತಾಲೂಕಿನಾದ್ಯಂತ ವಿದ್ಯುತ್ ಸಂಪರ್ಕ ಜಾಲ ಅಸ್ತವ್ಯಸ್ತವಾಗಿತ್ತು. ಪೇರಡ್ಕ ಭಾಗದಲ್ಲಿಯೂ ವಿದ್ಯುತ್ ಕಂಬ ಹಾಗೂ
ಲೈನ್ಗೆ ಹಾನಿಯಾಗಿ ವಿದ್ಯುತ್ ಕಡಿತವಾಗಿದೆ. ಇದನ್ನು ಇನ್ನೂ ಸರಿಪಡಿಸಲಾಗಿಲ್ಲ, ಇಲ್ಲಿನ ಸುಮಾರು 35ಕ್ಕೂ ಹೆಚ್ಚು ಕುಟುಂಬಗಳಿಗೆ ವಿದ್ಯುತ್ ಇಲ್ಲದೆ ಸಮಸ್ಯೆ ಉಂಟಾಗಿದೆ. ವಿದ್ಯುತ್ ಇಲ್ಲದೆ ನಾಲ್ಕು ದಿನಗಳಾದರೂ ಸರಿಪಡಿಸಿಲ್ಲ, ಜನರು ಕತ್ತಲಲ್ಲಿ ಕಳೆಯುವುದು ಮಾತ್ರವಲ್ಲದೆ ಕರೆಂಟ್ ಇಲ್ಲದೆ ಕುಡಿಯುವ ನೀರಿಗೂ ತತ್ವಾರ ಎದುರಾಗಿದೆ ಎನ್ನುತ್ತಾರೆ ಇಲ್ಲಿನ ಸ್ಥಳೀಯರು. ನಿರಂತರ ನಾಲ್ಕು ದಿನಗಳಿಂದ ಈ ಭಾಗದಲ್ಲಿ ವಿದ್ಯುತ್ ಕಡಿತ ಉಂಟಾದ ಕಾರಣ ಜನರು ರೋಸಿ ಹೋಗಿದ್ದಾರೆ. ಇನ್ವರ್ಟರ್ಗಳು ಖಾಲಿಯಾಗಿದ್ದು ಪ್ರದೇಶವಿಡೀ ಕತ್ತಲು ಆವರಿಸಿ, ನೀರು ಸರಬರಾಜಿಗೂ ಸಮಸ್ಯೆಯಾಗಿರುವುದು ಮಾತ್ರವಲ್ಲದೆ ಮೊಬೈಲ್ ಚಾರ್ಜ್ ಮಾಡಲು ಕೂಡ ಆಗದ ಸ್ಥಿತಿ ನಿರ್ಮಾಣ ಆಗಿದೆ ಎನ್ನುತ್ತಾರೆ ಈ ಭಾಗದ ಜನರು.
ಗಾಳಿ ಮಳೆಗೆ ತಾಲೂಕಿನಾದ್ಯಂತ ವಿದ್ಯುತ್ ಸರಬರಾಜು ಅಸ್ತವ್ಯಸ್ತವಾಗಿದೆ.ಇದನ್ನು ಸರಿ ಪಡಿಸುವ ಪ್ರಕ್ರಿಯೆ ಮುಂದುವರಿದಿದೆ ಎನ್ನುತ್ತಾರೆ ಸುಳ್ಯ ಮೆಸ್ಕಾಂ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಹರೀಶ್ ನಾಯ್ಕ್. 130 ಕ್ಕೂ ಹೆಚ್ಚು ಕಂಬಗಳಿಗೆ, ಲೈನ್ಗಳಿಗೆ ಹಾನಿ ಉಂಟಾಗಿದೆ. ಬಹುತೇಕ ಕಡೆ ಸಂಪರ್ಕ ಸರಿಪಡಿಸಲಾಗಿದೆ. ಪೇರಡ್ಕ ಸೇರಿದಂತೆ ಕೆಲವೆಡೆ ಇನ್ನೂ ಸರಿಪಡಿಸಲು ಬಾಕಿ ಇದೆ.ನಾಳೆ ಈ ಭಾಗಗಳಲ್ಲಿ ವಿದ್ಯುತ್ ಸಂಪರ್ಕ ಸರಿಪಡಿಸಲಾಗುವುದು ಎಂದು ಹರೀಶ್ ಅವರು ತಿಳಿಸಿದ್ದಾರೆ.










