ಸುಳ್ಯ: ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಘೋಷಣೆ ಮಾಡಿದ 5 ಗ್ಯಾರಂಟಿ ಯೋಜನೆಗಳನ್ನು ಸರಕಾರ ಜಾರಿ ಮಾಡಿದೆ. ಈ ರಿತಿಯ ಜನಪರ ಯೋಜನೆಗಳನ್ನು ಕಾಂಗ್ರೆಸ್ನಿಂದ ಮಾತ್ರ ಅನುಷ್ಠಾನ ಮಾಡಲು ಸಾಧ್ಯ ಎಂದು ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ.ಜಯರಾಮ ಹೇಳಿದ್ದಾರೆ. ಸುಳ್ಯ ಪ್ರೆಸ್ ಕ್ಲಬ್ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು 5 ಗ್ಯಾರಂಟಿಗಳನ್ನು ಜಾತಿ, ಧರ್ಮ ಭೇಧ ಭಾವ ಇಲ್ಲದೆ ಎಲ್ಲರಿಗೂ ನೀಡಲಾಗುತಿದೆ. ಸರಕಾರದ ಯೋಜನೆಗಳು ರಾಜ್ಯದ ಪ್ರತಿ ಮನೆಗೆ
ತಲುಪಲಿದೆ. ಇಚ್ಛಾಶಕ್ತಿ ಇದ್ದ ನಾಯಕತ್ವದಿಂದ ಮಾತ್ರ ಈ ರೀತಿಯ ಯೋಜನೆಗಳನ್ನು ಅನುಷ್ಠಾನ ಮಾಡಲು ಸಾಧ್ಯ. ರಾಜ್ಯದಲ್ಲಿ ಇಚ್ಛಾಶಕ್ತಿಯ ಸರಕಾರ ಇದೆ. ಕಾಂಗ್ರೆಸ್ ಘೋಷಣೆ ಮಾಡಿದ ಗೃಹ ಜ್ಯೋತಿ, ಗೃಹಲಕ್ಷ್ಮಿ, ಅನ್ನಭಾಗ್ಯ, ಶಕ್ತಿ ಯೋಜನೆ, ಯುವ ನಿಧಿ ಯೋಜನೆಗಳನ್ನು ಸರಕಾರ ಅನುಷ್ಠಾನ ಮಾಡಲು ನಿರ್ಧರಿಸಿದೆ. ಇದಕ್ಕೆ ಸರಕಾರವನ್ನು ಅಭಿನಂದಿಸುತ್ತೇವೆ. ರಾಜ್ಯದ ಜನತೆಯೂ ಸಂತೋಷಗೊಂಡಿದ್ದಾರೆ. ಆದರೆ ವಿರೋಧ ಪಕ್ಷಗಳು ಮಾತ್ರ ಧ್ವಂಧ್ವ ನಿಲುವನ್ನು ತಳೆದಿದೆ ಎಂದು ಅವರು ಹೇಳಿದರು. ಸರಕಾರ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನ
ಮಾಡಿ ಎಂದು ಒತ್ತಾಯಿಸುತ್ತಿದ್ದ ವಿರೋಧ ಪಕ್ಷಗಳು ಇದೀಗ ಯೋಜನೆ ಅನುಷ್ಠಾನಗೊಂಡಾಗ ರಾಜ್ಯ ಆರ್ಥಿಕವಾಗಿ ದೀವಾಳಿ ಆಗಲಿದೆ ಎಂದು ಹೇಳುವುದು ದ್ವಂಧ್ವ ನೀತಿಗೆ ಉದಾಹರಣೆ ಎಂದರು. ಈ ದೇಶದ ಜನರಿಗೆ ಸ್ವಾವಲಂಬಿ ಬದುಕು ನೀಡಿರುವುದು ಕಾಂಗ್ರೆಸ್. ಕಾಂಗ್ರೆಸ್ ದೇಶದ ಬಡತನವನ್ನು ತೊಲಗಿಸಿದೆ ಎಂದರು. ಸುಳ್ಯ ಕ್ಷೇತ್ರದಲ್ಲಿ ಚುನಾವಣಾ ಸಂದರ್ಭದಲ್ಲಿ ಪ್ರತಿ ಮನೆಗೆ ಭೇಟಿ ನೀಡಿದಾಗ ಕಾಂಗ್ರೆಸ್ ಗ್ಯಾರಂಟಿಗಳ ಬಗ್ಗೆ ಭರವಸೆ ನೀಡಿದ್ದೆವು. ಕ್ಷೇತ್ರದ ಪ್ರತಿ ಮನೆಗಳಿಗೂ ಗ್ಯಾರಂಟಿ ಯೋಜನೆಗನ್ನು ತಲುಪಿಸುವ ಕೆಲಸ ಕಾರ್ಯಕರ್ತರ ಮೂಲಕ ಮಾಡಲಿದ್ದೇವೆ ಎಂದು ಅವರು ಹೇಳಿದರು.
ಸರಕಾರ ನುಡಿದಂತೆ ನಡೆದಿದೆ-ಟಿ.ಎಂ.ಶಹೀದ್:
ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನ ಮಾಡುವ ಮೂಲಕ ಸರಕಾರ ನುಡಿದಂತೆ ನಡೆದಿದೆ ಎಂದು ಕೆಪಿಸಿಸಿ ವಕ್ತಾರ ಟಿ.ಎಂ.ಶಹೀದ್ ತೆಕ್ಕಿಲ್ ಹೇಳಿದರು.ಬಿಜೆಪಿಯ ಕೇಂದ್ರ ಹಾಗೂ ರಾಜ್ಯ ಸರಕಾರ ನೀಡಿದ ಯಾವುದೇ ಭರವಸೆ ಈಡೇರಿಸಿಲ್ಲ ಎಂದರು. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ದಿಟ್ಟೆ ಹೆಜ್ಜೆ ಇರಿಸಿದೆ ಎಂದು ಹೇಳಿದ ಅವರು 34 ಸಚಿವರನ್ನೊಳಗೊಂಡ ಪೂರ್ಣ ಸಚಿವ ಸಂಪುಟವನ್ನು ರಚಿಸಿ ಸಿದ್ದರಾಮಯ್ಯ ಸರಾಕಾರ ಮಾದರಿಯಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಸುಳ್ಯ ಕ್ಷೇತ್ರದ ಕಾಂಗ್ರೆಸ್ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ ಸದಾನಂದ ಮಾವಜಿ, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪಿ.ಎಸ್.ಗಂಗಾಧರ, ಸುರೇಶ್ ಎಂ.ಎಚ್, ನಗರ ಪಂಚಾಯತ್ ಸದಸ್ಯ ಶರೀಫ್ ಕಂಠಿ, ಬ್ಲಾಕ್ ಉಪಾಧ್ಯಕ್ಷ ಸಿದ್ದಿಕ್ ಕೊಕ್ಕೊ, ಎನ್ಎಸ್ಯುಐ ಅಧ್ಯಕ್ಷ ಕೀರ್ತನ್ ಕೊಡಪಾಲ, ಶಾಝ್ ತೆಕ್ಕಿಲ್ ಉಪಸ್ಥಿತರಿದ್ದರು .