ಚೆನ್ನೈ:ಐಪಿಎಲ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಪಂಜಾಬ್ ಕಿಂಗ್ಸ್ ಬೃಹತ್ ಗುರಿ ಬೆನ್ನಟ್ಟಿ ರೋಚಕ ಗೆಲುವು ದಾಖಲಿಸಿದೆ. ಮೊದಲು ಬ್ಯಾಟ್ ಮಾಡಿದ ಸಿಎಸ್ಕೆ 20 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 209 ರನ್ ಕಲೆ ಹಾಕಿತು.ಗುರಿ ಬೆನ್ನಟ್ಟಿದ ಪಂಜಾಬ್ 18.4 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 210 ರನ್ ಗಳಿಸಿ 5 ವಿಕೆಟ್ ಗೆಲುವು ದಾಖಲಿಸಿತು. ಪಂಜಾಬ್ ಪರ
ನಾಯಕ ಶ್ರೇಯಸ್ ಅಯ್ಯರ್, ಪ್ರಿಯಾಂಶ್ ಆರ್ಯ ಸ್ಪೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಅಯ್ಯರ್ 29 ಎಸೆತಗಳಲ್ಲಿ 4 ಬೌಂಡರಿ ಹಾಗೂ 3 ಸಿಕ್ಸರ್ ನೆರವಿನಿಂದ 50 ರನ್ ಗಳಿಸಿದರೆ, ಪ್ರಿಯಾಂಶ್ ಆರ್ಯ ಕೇವಲ 11ಎಸೆತಗಳಲ್ಲಿ 3 ಬೌಂಡರಿ ಹಾಗೂ 4 ಸಿಕ್ಸರ್ ನೆರವಿನಿಂದ 39 ರನ್ ಗಳಿಸಿದರು. ಪ್ರಭ್ಮಾನ್ ಸಿಂಗ್ 34 ಎಸೆತಗಳಲ್ಲಿ 6 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ 43 ರನ್ ಬಾರಿಸಿದರೆ, ಕೂಪರ್ ಕನೋಲಿ 22
ಎಸೆತಗಳಲ್ಲಿ 6 ಬೌಂಡರಿ ನೆರವಿನಿಂದ 36 ರನ್ ಗಳಿಸಿ ತಂಡದ ಗೆಲುವಿಗೆ ಕೊಡುಗೆ ನೀಡಿದರು.
ಮೊದಲು ಬ್ಯಾಟ್ ಮಾಡಿದ ಚೆನ್ನೈ ಪರ ಯುವ ಬ್ಯಾಟರ್ ಆಯುಷ್ ಮ್ಹಾತ್ರೆ ಅರ್ಧಶತಕ, ಸರ್ಫರಾಜ್ ಖಾನ್ ಹಾಗೂ ಶಿವಂ ದುಬೆ ಅವರ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದರು. ಅನುಭವಿ ಬ್ಯಾಟರ್ ಸಂಜು ಸ್ಯಾಮ್ಸನ್ (7 ರನ್) ಬೇಗನೆ ವಿಕೆಟ್ ಒಪ್ಪಿಸಿದರು. ಆದರೆ, ನಂತರ ಜೊತೆಯಾದ ನಾಯಕ ಋತುರಾಜ್ ಗಾಯಕವಾಡ್ (28) ಹಾಗೂ ಆಯುಷ್ ಮ್ಹಾತ್ರೆ (73) ಗಳಿಸುವ ಮೂಲಕ 96 ರನ್ಗಳ ಜೊತೆಯಾಟ ಆಡಿದರು.
ಮಧ್ಯಮ ಕ್ರಮಾಂಕದಲ್ಲಿ ಸರ್ಫರಾಜ್ ಖಾನ್ ಕೇವಲ 12 ಎಸೆತಗಳಲ್ಲಿ 32 ರನ್ ಕಲೆಹಾಕುವ ಮೂಲಕ ತಂಡದ ಮೊತ್ತವನ್ನು 160ರ ಗಡಿ ದಾಟಿಸಿದರು. ಕೊನೆ ಓವರ್ಗಳಲ್ಲಿ ಅಬ್ಬರಿಸಿದ ಶಿವಂ ದುಬೆ (ಅಜೇಯ 45) ಕಲೆಹಾಕಿದರು.
ಪಂಜಾಬ್ ಎರಡನೇ ಗೆಲುವು ದಾಖಳಿಸಿದರೆ, ಚೆನ್ನೈ ಆಡಿದ ಎರಡೂ ಪಂದ್ಯದಲ್ಲಿ ಸೋಲನುಭವಿಸಿತು.









