ಸುಳ್ಯ:ಆಧುನಿಕ ಯುಗದಲ್ಲಿ ಸೇತುವೆ, ತೂಗು ಸೇತುವೆ ನಿರ್ಮಾಣಗೊಂಡು ಸಂಚಾರ ಸಂಪರ್ಕ ಕ್ರಾಂತಿ ನಡೆದರೂ ಗ್ರಾಮೀಣ ಭಾಗದಲ್ಲಿ ಇನ್ನೂ ಕೆಲವೆಡೆ ದೋಣಿ, ತೆಪ್ಪ, ಪಿಂಡಿಯ ಪ್ರಯಾಣ ಇದ್ದೇ ಇದೆ. ಸುಳ್ಯ ನಗರ ಸಮೀಪ ಓಡಬಾಯಿಯಲ್ಲಿ ಸುಮಾರು 20 ವರ್ಷಗಳ ಹಿಂದೆ ಪಯಸ್ವಿನಿ ನದಿಗೆ ಅಡ್ಡಲಾಗಿ ತೂಗು ಸೇತುವೆ ನಿರ್ಮಾಣ ಆದ ಹಿನ್ನಲೆಯಲ್ಲಿ ಪಿಂಡಿಯ ಪ್ರಯಾಣಕ್ಕೆ ಮುಕ್ತಿ ದೊರಕಿತ್ತು. ಇದೀಗ ಮತ್ತೆ
ಪಯಸ್ವಿನಿ ನದಿಯಲ್ಲಿ ಬಿದಿರಿನ ಪಿಂಡಿಯ ಮೂಲಕ ನದಿ ದಾಟುವ ಪ್ರಮೇಯ ಮತ್ತೆ ಬಂದಿದೆ. ಈ ಮೂಲಕ 20 ವರ್ಷದ ಬಳಿಕ ಸುಳ್ಯದ ಜನತೆಗೆ ಬಿದಿರಿನ ಪಿಂಡಿಯಲ್ಲಿ ನದಿ ದಾಟುವ ಅನಿವಾರ್ಯತೆ ಒದಗಿ ಬಂದಿದೆ.ಪ್ರಸ್ತುತ ತೂಗುಸೇತುವೆ ದುರಸ್ತಿ, ನಿರ್ವಹಣೆ ಕಾಮಗಾರಿ ನಡೆಯುತ್ತಿರುವುದರಿಂದ ತೂಗುಸೇತುವೆ ಮೇಲೆ ಸಂಚಾರ ನಿಷೇಧಿಸಲಾಗಿದೆ. ಈ ಹಿನ್ನಲೆಯಲ್ಲಿ ಓಡಬಾಯಿ ಭಾಗದಿಂದ ದೊಡ್ಡೇರಿ ಭಾಗಕ್ಕೆ ತೆರಳಲು ಬಿದಿರಿನ ಪಿಂಡಿ ವ್ಯವಸ್ಥೆಯನ್ನು ಸ್ಥಳೀಯರು ಮಾಡಿಕೊಂಡಿದ್ದಾರೆ.

ಸುಳ್ಯದ ಓಡಬಾಯಿ ಎಂಬಲ್ಲಿ ಸುಳ್ಯ ನದಿಗೆ 20 ವರ್ಷದ ಮೊದಲು ತೂಗುಸೇತುವೆ ನಿರ್ಮಿಸಲಾಗಿತ್ತು. ತೂಗುಸೇತುವೆ ಸಂಚಾರ ನಿಷೇಧಿಸಲಾಗಿರುವ ಹಿನ್ನಲೆಯಲ್ಲಿ ದೊಡ್ಡೇರಿ ಭಾಗದ ಜನರು ಸುತ್ತು ಬಳಸಿ ಸುಳ್ಯಕ್ಕೆ ಬರಬೇಕಾಗುತ್ತದೆ. ಅದಕ್ಕಾಗಿ ಪರ್ಯಾಯವಾಗಿ ತಾತ್ಕಾಲಿಕ ಬಿದಿರಿನ ಪಿಂಡಿ ವ್ಯವಸ್ಥೆ ಮಾಡಲಾಗಿದೆ. ದೊಡ್ಡೇರಿಯ ಪ್ರೇಮಾನಂದ ಅವರು ಪಿಂಡಿಯನ್ನು ಸಿದ್ಧಪಡಿಸಿದ್ದು, ಸಂಚಾರಕ್ಕೆ ವ್ಯವಸ್ಥೆ ಮಾಡಿದ್ದಾರೆ. ಇದನ್ನು ರಾಧಾಕೃಷ್ಣ ದೊಡ್ಡೇರಿ ಅವರು ಚಲಾಯಿಸುತ್ತಿದ್ದಾರೆ. ಪ್ರತಿದಿನ ಬೆಳಗ್ಗೆ 7ರಿಂದ ಮಧ್ಯಾಹ್ನ 1ರ ವರೆಗೆ ಮಧ್ಯಾಹ್ನ 2ರಿಂದ ರಾತ್ರಿ 8 ಗಂಟೆಯವರೆಗೆ ಪಿಂಡಿ ಬಿದಿರು ಸೇವೆ ನೀಡಲಾಗುತ್ತಿದೆ.

ಸುಳ್ಯ ನಗರ ಸಮೀಪ ಓಡಬಾಯಿಯಲ್ಲಿ ಸುಮಾರು 20 ವರ್ಷಗಳ ಹಿಂದೆ ಪಿಂಡಿಯಲ್ಲಿ ಪಯಸ್ವಿನಿ ನದಿ ದಾಟುವ ಸ್ಥಿತಿ ಇತ್ತು. ಸುಳ್ಯ ನಗರ ಮತ್ತು ದೊಡ್ಡೇರಿ ಸಂಪರ್ಕಿಸಲು ಓಡಬಾಯಿಯಿಂದ ಮಳೆಗಾಲದಲ್ಲಿ ಉಕ್ಕಿ ಹರಿಯುವ ಪಯಸ್ವಿನಿ ನದಿಯನ್ನು ಪಿಂಡಿಯಲ್ಲಿ ದಾಟಿ ದೊಡ್ಡೇರಿ ಭಾಗಕ್ಕೆ ಹೋಗಬೇಕಾಗಿತ್ತು. ಪಿಂಡಿಯಲ್ಲಿ ನದಿ ದಾಟುವ ಬವಣೆಯ ಬಗ್ಗೆ ಅಂದು ಪತ್ರಿಕಾ ಮಾಧ್ಯಮಗಳು ನಿರಂತರ ವರದಿ ಮಾಡಿದ್ದವು.
ಈ ಹಿನ್ನಲೆಯಲ್ಲಿ ಅಂದು ರೋಟರಿ ಅಧ್ಯಕ್ಷರಾಗಿದ್ದ ಡಾ.ಪ್ರಭಾಕರ ಶಿಶಿಲ ಅವರು ಮಾಧ್ಯಮ ವರದಿಗಳ ಸಮೇತ ಇನ್ಪೋಸಿಸ್ ಫೌಂಡೇಶನ್ನ ಸುಧಾ ಮೂರ್ತಿ ಅವರ ಗಮನಕ್ಕೆ ತಂದಿದ್ದರು. ಈ ಹಿನ್ನಲೆಯಲ್ಲಿ ಇನ್ಫೋಸಿಸ್ ಧನ ಸಹಾಯದಲ್ಲಿ 2006ರಲ್ಲಿ ರೋಟರಿ-ಇನ್ಫೋಸಿಸ್ ಸೇತುವೆ ಸೇತುವೆ ನಿರ್ಮಾಣಗೊಂಡಿತು. ತೂಗು ಸೇತುವೆಗಳ ಸರದಾರ ಡಾ.ಗಿರೀಶ್ ಭಾರದ್ವಾಜ್ ಅವರು ತೂಗು ಸೇತುವೆ ನಿರ್ಮಿಸಿದ್ದರು.
ಬಳಿಕ ಇಲ್ಲಿನ ಪಿಂಡಿ ಪ್ರಯಾಣಕ್ಕೆ ಬೈ ಹೇಳಲಾಗಿತ್ತು. ಇದೀಗ ಮತ್ತೆ ಪಿಂಡಿ ಕಾಣಿಸಿಕೊಂಡಿದೆ.

ಬಿದಿರಿನಿಂದ ತಯಾರಿಸಲಾಗಿರುವ ಈ ಪಿಂಡಿಯನ್ನು ಒಂದು ಭಾಗದಿಂದ ಇನ್ನೊಂದು ಭಾಗಕ್ಕೆ ಕಟ್ಟಲಾಗಿರುವ ಹಗ್ಗದ ಸಹಾಯವನ್ನು ಪಡೆದು ಚಲಾಯಿಸಲಾಗುತ್ತಿದೆ. ಜನರ ಸುರಕ್ಷತೆಗೂ ಆದ್ಯತೆ ನೀಡಲಾಗಿದ್ದು, ಎರಡು ಟ್ಯೂಬ್ನ್ನು ಜೊತೆಗಿರಿಸಲಾಗಿದೆ. ಒಂದು ಬಾರಿಗೆ 8 ಮಂದಿ ಪ್ರಯಾಣಿಸಬಹುದಾಗಿದೆ. ಇದಲ್ಲದೇ ಪ್ರಸ್ತುತ ನದಿಯಲ್ಲಿ ನೀರಿನ ಮಟ್ಟ ವೂ ಕಡಿಮೆಯಾಗಿದೆ.ಒಂದೊಮ್ಮೆ ಸಂಪರ್ಕ ಸೇತುವೆಗಳು ಇಲ್ಲದ ಸಂದರ್ಭದಲ್ಲಿ ಅನಿವಾರ್ಯವಾಗಿ ಜನತೆ ಬಿದಿರಿನ ಪಿಂಡಿಯಲ್ಲಿ ಸಂಚರಿಸುತ್ತಿದ್ದರು. ಆದರೆ ಸುಳ್ಯದಲ್ಲಿ ಸದ್ಯ ಎಲ್ಲೂ ಪಿಂಡಿ ಪ್ರಯಾಣ ಇಲ್ಲ. ಹೆಚ್ಚಿನ ಕಡೆಗಳಲ್ಲ ಸೇತುವೆ, ತೂಗುಸೇತುವೆ ನಿರ್ಮಾಣಗೊಂಡಿದೆ. ಇದೀಗ ಪಯಸ್ವಿನಿ ನದಿಯಲ್ಲಿ ಪಿಂಡಿ ಪ್ರಯಾಣ ಹೊಸ ತಲೆಮಾರಿನಲ್ಲಿ ಕೂತೂಹಲ ಉಂಟು ಮಾಡಿದೆ.
ದೊಡ್ಡೇರಿ ಭಾಗದಿಂದ ನಗರಕ್ಕೆ ಬರುವವರು ಮಾತ್ರವಲ್ಲದೇ ಯುವಕರು, ಇತರೆ ಜನರು ಪಿಂಡಿಯಲ್ಲಿ ಸಂಚರಿಸುವ ಅನುಭವ ಪಡೆಯಲು ಆಗಮಿಸುತ್ತಿದ್ದಾರೆ.





