ಸುಳ್ಯ: ಜೆಸಿಐ ಸುಳ್ಯ ಪಯಸ್ವಿನಿ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಜ.20ರಂದು ಸುಳ್ಯದ ಹೋಟೆಲ್ ರಸಪಾಕ ಗ್ರಾಂಡ್ನ ಸಭಾಂಗಣದಲ್ಲಿ ನಡೆಯಲಿದೆ ಎಂದು ಜೆಸಿಐ ಸುಳ್ಯ ಪಯಸ್ವಿನಿ ನೂತನ ಅಧ್ಯಕ್ಷೆ ಲತಾಶ್ರೀ ಸುಪ್ರೀತ್ ಮೋಂಟಡ್ಕ ತಿಳಿಸಿದ್ದಾರೆ. ಸುಳ್ಯ ಪ್ರೆಸ್ ಕ್ಲಬ್ನಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ವಿವರ ನೀಡಿದರು. ಲತಾಶ್ರೀ ಸುಪ್ರೀತ್ ಮೋಂಟಡ್ಕ ನೇತೃತ್ವದ
ನೂತನ ಪದಾಧಿಕಾರಿಗಳ ತಂಡ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮಡಿಕೇರಿ ಶಾಸಕ ಡಾ.ಮಂಥರ್ ಗೌಡ, ಜೆಸಿಐ ಝೋನ್ 15ರ ಅಧ್ಯಕ್ಷ ಅಭಿಲಾಷ್ ಬಿ.ಎ, ಅಕಾಡೆಮಿ ಅಫ್ ಲಿಬರಲ್ ಎಜ್ಯುಕೇಷನ್ನ ಪ್ರಧಾನ ಕಾರ್ಯದರ್ಶಿ ಅಕ್ಷಯ್.ಕೆ.ಸಿ, ಮಾಜಿ ಎಂಎಲ್ಸಿ ಗಣೇಶ್ ಕಾರ್ಣಿಕ್ ಭಾಗವಹಿಸಲಿದ್ದಾರೆ. ವಲಯ ಉಪಾಧ್ಯಕ್ಷ ಜಿತೇಶ್ ಪಿರೇರಾ ಪದಗ್ರಹಣ ನೆರವೇರಿಸಲಿದ್ದಾರೆ ಎಂದು ಹೇಳಿದರು.
ಸುಮಾರು 43 ವರ್ಷಗಳ ಇತಿಹಾಸವಿರುವ ಸುಳ್ಯ ಪಯಸ್ವಿಯಲ್ಲಿ 44ನೇ ಸಾಲಿಗೆ ಮೊದಲ ಮಹಿಳಾ ಅಧ್ಯಕ್ಷೆಯಾಗಿ ನಿಯೋಜನೆ ಗೊಂಡಿದ್ದು ಮುಂದಿನ ಒಂದು ವರ್ಷಗಳ ಕಾಲ ಜೇಸಿಐ ಸುಳ್ಯ ಪಯಸ್ವಿನಿಯನ್ನು ಒಳ್ಳೆಯ ರೀತಿಯಿಂದ ಮುನ್ನಡೆಸಿಕೊಂಡು ಹೋಗುವ ಆಶಯ ಇದೆ. ಈ ಅವಧಿಯಲ್ಲಿ ಯುವಜನತೆಗೆ, ವಿದ್ಯಾರ್ಥಿಗಳಿಗೆ ಮತ್ತು ಸುತ್ತಮುತ್ತಲಿನ ಸಮಾಜಕ್ಕೆ ಮಾದರಿ ಕಾರ್ಯಗಳನ್ನು ಮಾಡುವ ಯೋಜನೆ ಇದೆ. ಜೇಸಿ ಭವನ ನಿರ್ಮಾಣ ಪೂರ್ತಿ ಮಾಡುವ ಯೋಜನೆ ಇದೆ, ವಿವಿಧ ತರಬೇತಿ ಕಾರ್ಯಕ್ರಮ ಆಯೋಜನೆ ಮಾಡಲಾಗುವುದು ಎಂದು ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಜೆಸಿಐ ಸುಳ್ಯ ಪಯಸ್ವಿನಿ ನಿರ್ಗಮನ ಅಧ್ಯಕ್ಷ ಸುರೇಶ್ ಕಾಮತ್, ಮಾಜಿ ಅಧ್ಯಕ್ಷ ಅಶೋಕ್ ಚೂಂತಾರು, ಸುಳ್ಯ ಪಯಸ್ವಿನಿ ಜೆಸಿ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಜಯಪ್ರಕಾಶ್ ಕೆ, ನೂತನ ಕೋಶಾಧಿಕಾರಿ ಪ್ರಸನ್ನ ಎಂ.ಎಂ. ಉಪಸ್ಥಿತರಿದ್ದರು.












