ಸುಳ್ಯ:ಮಧ್ಯಮಗಳು ಸದಾ ಜಾಗೃತರಾಗಿ ಕಾರ್ಯನಿರ್ವಹಿಸುವ ಕಾರಣ ದೇಶದ ಪ್ರಜಾಪ್ರಭುತ್ವ, ಸ್ವಾತಂತ್ರ್ಯ ಮತ್ತು ಈ ಸಮಾಜ ಉಳಿದಿದೆ ಎಂದು ಹಿರಿಯ ಪತ್ರಕರ್ತ ಸುಧಾಕರ ಸುವರ್ಣ ತಿಂಗಳಾಡಿ ಅಭಿಪ್ರಾಯಪಟ್ಟಿದ್ದಾರೆ.ಸುಳ್ಯ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಶ್ರೀ ಶಾರದಾ ಮಹಿಳಾ ಪದವಿ ಪೂರ್ವ ಕಾಲೇಜಿನ ಸಹಕಾರದಲ್ಲಿ ಕಾಲೇಜಿನ ಸಭಾಂಗಣದಲ್ಲಿ ನಡೆದ ಪತ್ರಿಕೋದ್ಯಮ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸಮಾಜದ

ಪ್ರತಿಬಿಂಬವಾದ ಮಾಧ್ಯಮಗಳು ಸಮಾಜದ ಕನ್ನಡಿ. ಸಮಾಜದ ಅಂಕು ಡೊಂಕನ್ನು ತಿದ್ದುವ ಸಂದರ್ಭದಲ್ಲಿ ಕೆಲವೊಮ್ಮೆ ಮಾಧ್ಯಮಗಳ ನಿಲುವು ಕಠೋರ ಅನ್ನಿಸಿದರೂ ಸದಾ ಸಮಾಜವನ್ನು ಜಾಗೃತವಾಗಿರಿಸುವ ಅನಿವಾರ್ಯತೆ ಮಾಧ್ಯಮಗಳಿಗಿವೆ. ಅದಕ್ಕಾಗಿ ಪತ್ರಕರ್ತರು, ಮಾಧ್ಯಮಗಳು ಸದಾ ಜಾಗೃತರಾಗಿ ಕೆಲಸ ಮಾಡುತ್ತಾರೆ ಎಂದು ಅವರು ಹೇಳಿದರು. ಮಾಧ್ಯಮ ಕ್ಷೇತ್ರವು ವಿಫುಲ ಉದ್ಯೋಗ ಅವಕಾಶವನ್ನು ಸೃಷ್ಠಿಸುತ್ತದೆ ಎಂದ ಅವರು ವಿದ್ಯಾರ್ಥಿಗಳಿಗೆ ಪತ್ರಿಕೋದ್ಯಮ ಅಧ್ಯಯನಕ್ಕೆ ಮತ್ತು ಉದ್ಯೋಗಾವಕಾಶಗಳ ಬಗ್ಗೆ ಮಾಹಿತಿ ನೀಡಿದರು.
ಶ್ರೀ ಶಾರದಾ ಮಹಿಳಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ದಯಾಮಣಿ.ಕೆ ಕಾರ್ಯಕ್ರಮವನ್ನು ಉದ್ಘಾಟಿಸಿದರು. ದ.ಕ.ಗೌಡ ವಿದ್ಯಾ ಸಂಘದ ಪ್ರಧಾನ ಕಾರ್ಯದರ್ಶಿ ಡಾ.ರೇವತಿ ನಂದನ್ ಅಧ್ಯಕ್ಷತೆ ವಹಿಸಿದ್ದರು.

ಸುಳ್ಯ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ದಯಾನಂದ ಕಲ್ನಾರ್ ಸ್ವಾಗತಿಸಿ, ಮಾಜಿ ಅಧ್ಯಕ್ಷ ದುರ್ಗಾಕುಮಾರ್ ನಾಯರ್ಕೆರೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯದರ್ಶಿ ತೇಜೇಶ್ವರ ಕುಂದಲ್ಪಾಡಿ ವಂದಿಸಿದರು. ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಕಾರ್ಯದರ್ಶಿ ಗಂಗಾಧರ ಕಲ್ಲಪಳ್ಳಿ ಕಾರ್ಯಕ್ರಮ ನಿರೂಪಿಸಿದರು. ಪತ್ರಕರ್ತರು, ಕಾಲೇಜಿನ ಉಪನ್ಯಾಸಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.










