ಸುಳ್ಯ: ದೇಶದ ಪ್ರಧಾನಿ ನರೇಂದ್ರ ಮೋದಿಯವರ ವಿನೂತನ ಕಾರ್ಯಕ್ರಮಗಳಲ್ಲಿ ಒಂದಾದ “ಪರೀಕ್ಷಾ ಪೇ ಚರ್ಚಾ-7” ಕಾರ್ಯಕ್ರಮದ ಸಂದರ್ಭದಲ್ಲಿ ವೈಜ್ಞಾನಿಕ ಮಾದರಿಯನ್ನು ಪ್ರದರ್ಶಿಸಲು ಜವಾಹರ್ ನವೋದಯ ವಿದ್ಯಾಲಯ ಮುಡಿಪು ಇಲ್ಲಿನ ಪ್ರಥಮ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿ ಸುಳ್ಯದ ಅಚಲ್ ಬಿಳಿನೆಲೆ ಆಯ್ಕೆಯಾಗಿದ್ದಾರೆ. ಜನವರಿ 29ರಂದು ನವದೆಹಲಿಯ ಭಾರತ್ ಮಂಟಪದಲ್ಲಿ ನಡೆಯುವ
“ಪರೀಕ್ಷಾ ಪೇ ಚರ್ಚಾ -7“ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿಯವರೊಂದಿಗೆ ದೇಶದ ಆಯ್ದ ವಿದ್ಯಾರ್ಥಿಗಳು ಪರೀಕ್ಷಾ ಒತ್ತಡ ನಿರ್ವಹಣೆಯ ಸಂವಾದದಲ್ಲಿ ಭಾಗವಹಿಸಲಿದ್ದು , ಇದೇ ಸಂದರ್ಭದಲ್ಲಿ “ಚಂದ್ರಯಾನ -3” ಇದರ ಕಾರ್ಯ ವೈಖರಿಯನ್ನು ಜನಸಾಮಾನ್ಯರಿಗೆ ಅರ್ಥವಾಗುವಂತೆ ತಯಾರಿಸಿದ ವೈಜ್ಞಾನಿಕ ಮಾದರಿಯನ್ನು ಅಚಲ್ ಬಿಳಿನೆಲೆ ಪ್ರಧಾನಿಯವರ ಮುಂದೆ ಪ್ರದರ್ಶಿಸಿ ವಿವರಿಸಲಿದ್ದಾರೆ.
ದೇಶದ 600ಕ್ಕೂ ಹೆಚ್ಚು ಜವಾಹರ್ ನವೋದಯ ವಿದ್ಯಾಲಯಗಳ ಪೈಕಿ ಎಂಟು ವಿದ್ಯಾಲಯಗಳಿಗೆ ಈ ಅವಕಾಶ ದೊರಕಿದ್ದು, ಇದರಲ್ಲಿ ಭಾಗವಹಿಸಲು ನವೋದಯ ವಿದ್ಯಾಲಯದ ಹೈದರಾಬಾದ್ ರೀಜನ್ ನ್ನು ಪ್ರತಿನಿಧಿಸುತ್ತಿರುವ ಅಚಲ್ ಬಿಳಿನೆಲೆಯವರು ಜನವರಿ 22ರಂದು ದೆಹಲಿ ತೆರಳಿದ್ದಾರೆ. ಅಚಲ್ ಬಿಳಿನೆಲೆಯವರು ಉಪನ್ಯಾಸಕರು ಹಾಗೂ ವ್ಯಕ್ತಿತ್ವ ವಿಕಸನ ತರಬೇತುದಾರಾದ ಚಂದ್ರಶೇಖರ ಬಿಳಿನೆಲೆ ಮತ್ತು ಡಾ. ಅನುರಾಧಾ ಕುರುಂಜಿಯರ ಪುತ್ರ.1999 ರಲ್ಲಿ ಎನ್ ಎಸ್ ಎಸ್ ಪ್ರತಿನಿಧಿಸಿ ಸುಳ್ಯದಿಂದ ನವದೆಹಲಿಯಲ್ಲಿ ನಡೆದ ರಾಷ್ಟ್ರಮಟ್ಟದ ಗಣರಾಜ್ಯೋತ್ಸವ ಪಥಸಂಚಲನದಲ್ಲಿ ಡಾ.ಅನುರಾಧಾ ಕುರುಂಜಿ ಭಾಗವಹಿಸಿದ್ದರು.










