ಪಂಜ:ಪಂಜದ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ಜನವರಿ 17 ಮತ್ತು 18 ರಂದು ಸುಳ್ಯದ ಯುವಜನ ಸಂಯುಕ್ತ ಮಂಡಳಿ ನೇತೃತ್ವದಲ್ಲಿ ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟ ಬೆಂಗಳೂರು, ದ.ಕ. ಜಿಲ್ಲಾ ಯುವಜನ ಒಕ್ಕೂಟ ಮಂಗಳೂರು ಇದರ ಸಹಯೋಗದೊಂದಿಗೆ ರಾಜ್ಯ ಮಟ್ಟದ ಯುವ ಸಂಭ್ರಮ – 2926ಕಾರ್ಯಕ್ರಮ ನಡೆಯಲಿದೆ. ಎರಡು ದಿನ ನಡೆಯುವ ಈ
ಕಾರ್ಯಕ್ರಮದಲ್ಲಿ ಕೃಷಿ ಮೇಳ, ವಸ್ತು ಪ್ರದರ್ಶನ, ಆಹಾರ ಮೇಳ, ವಾಹನ ಸಾಲ ಮೇಳ,ಹಾಗೂ ಜಾನುವಾರು ಮೇಳಗಳನ್ನು ಆಯೋಜನೆ ಮಾಡಲಾಗಿದೆ. ಮೊದಲ ದಿನ ತಾಲೂಕಿನ ಡ್ಯಾನ್ಸ್ ತಂಡಗಳಿಂದ ಸಾಂಸ್ಕೃತಿಕ ಸಂಭ್ರಮ ನಡೆದರೆ, ಎರಡನೇ ದಿನ ಜ.18ರಂದು ಮಧ್ಯಾಹ್ನ ಬಳಿಕ ರಾಜ್ಯ ಮಟ್ಟದ ಆಹ್ವಾನಿತ ತಂಡಗಳಿಂದ ಜನಪದ ವೈವಿಧ್ಯ ಸ್ಪರ್ಧೆ ಆಯೋಜಿಸಲಾಗಿದೆ.
ಜ.17ಮಧ್ಯಾಹ್ನ ಮೇಳಗಳ ಉದ್ಘಾಟನೆ:
ಜ.17ರಂದು ಮಧ್ಯಾಹ್ನ ಅಪರಾಹ್ನ 2 ಗಂಟೆಗೆ ಯುವ ಸಂಭ್ರಮ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುತ್ತದೆ. ದೇವಸ್ಥಾನದ ಎದುರಿನ ವಿಸ್ತಾರವಾದ ಜಾಗದಲ್ಲಿ ಏರ್ಪಡಿಸಲಾಗುವ ಕೃಷಿ ಮೇಳ, ವಸ್ತು ಪ್ರದರ್ಶನ, ವಾಹನ ಮೇಳ, ಆಹಾರ ಮೇಳ, ವಾಹನ ಸಾಲ ಮೇಳಗಳ ಉದ್ಘಾಟನೆ ನಡೆಯುವುದು.
ಅಪರಾಹ್ನ 5 ರಿಂದ ಸಾಂಸ್ಕೃತಿಕ ಕಾರ್ಯಕ್ರಮದ ಉದ್ಘಾಟನೆ ನಡೆಯಲಿದ್ದು ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಸಾಂಸ್ಕೃತಿಕ ಸಂಭ್ರಮವನ್ನು ಉದ್ಘಾಟಿಸಲಿದ್ದಾರೆ. ಮರ್ಕಂಜ ಶ್ರೀ ಅನ್ನಪೂರ್ಣೇಶ್ವರಿ ಕ್ಷೇತ್ರ ಯೋಗೀಶ್ವರಿ ಸಿದ್ಧ ಮಠದ ಧರ್ಮದರ್ಶಿ ರಾಜೇಶ್ನಾಥ್ ಜೀ, ಮಾಜಿ ಸಚಿವ ಎಸ್. ಅಂಗಾರ, ಡಿಸಿಸಿ ಬ್ಯಾಂಕ್ ನಿರ್ದೇಶಕ ಎಸ್.ಎನ್.ಮನ್ಮಥ, ಅರೆಭಾಷೆ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ ಭಾಗವಹಿಸಲಿದ್ದಾರೆ.

ಬಳಿಕ ಕಲಾ ಮಂದಿರ್ ಡ್ಯಾನ್ಸ್ ಕ್ರೀವ್ ಬೆಳ್ಳಾರೆ ಮತ್ತು ಪಂಜ ಶಾಖೆಗಳ ವಿದ್ಯಾರ್ಥಿಗಳಿಂದ ಡ್ಯಾನ್ಸ್ ಧಮಾಕ, ವೀಶ್ವ ಕಲಾನಿಕೇತನ ಇನ್ಸ್ಟಿಟ್ಯೂಟ್ ಆಫ್ ಆರ್ಟ್ಸ್ ಮತ್ತು ಕಲ್ಚರ್ ಪುತ್ತೂರು, ಪಂಜ ಶಾಖೆ ಇದರ ವಿದ್ಯಾರ್ಥಿಗಳಿಂದ ನೃತ್ಯ ವೈಭವ, ಡ್ಯಾನ್ಸ್ ಆಂಡ್ ಬೀಟ್ಸ್ ಪಂಜ ಮತ್ತು ಇತರ ಶಾಖೆಗಳ ವಿದ್ಯಾರ್ಥಿಗಳಿಂದ ನೃತ್ಯ ವೈವಿಧ್ಯ ನಡೆಯುವುದು.
ಜ.18ರಂದು ಅದ್ದೂರಿ ಮೆರವಣಿಗೆ:
ಜ.18ರಂದು ಭಾನುವಾರ ಬೆಳಗ್ಗೆ ಸುಳ್ಯ ತಾಲೂಕಿನ ಸುಮಾರು 100ಕ್ಕೂ ಹೆಚ್ಚು ಯುವಕ – ಯುವತಿ ಮಂಡಲಗಳು, ಸಿಂಗಾರಿ ಮೇಳ, ನಾಸಿಕ್ ಬ್ಯಾಂಡ್ ಹಾಗೂ ವಿವಿಧ ವೇಷ ಭೂಷಣಗಳೊಂದಿಗೆ ಅದ್ದೂರಿಯಾಗಿ ಪಂಜ ಮುಖ್ಯಪೇಟೆಯಿಂದ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದವರೆಗೆ ಯುವ ಸಂಭ್ರಮ ಮೆರವಣಿಗೆ ನಡೆಯುವುದು. ರಾಜ್ಯ ಕನಿಷ್ಟ ವೇತನ ಸಲಹಾ ಮಂಡಳಿ ಅಧ್ಯಕ್ಷ ಟಿ.ಎಂ. ಶಹೀದ್ ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ. ಮೆರವಣಿಗೆಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಯುವಕ ಮತ್ತು ಯುವತಿ ಮಂಡಲಗಳಿಗೆ ನಗದು ಮತ್ತು ಶಾಶ್ವತ ಫಲಕ ನೀಡಿ ಗೌರವಿಸಲಾಗುತ್ತದೆ.
ರಾಜ್ಯ ಪ್ರಶಸ್ತಿ ಪ್ರದಾನ
ಮೆರವಣಿ ಸಭಾ ವೇದಿಕೆಗೆ ತಲುಪಿದ ಬಳಿಕ ನಡೆಯುವ ಸಭಾ ಕಾರ್ಯಕ್ರಮದಲ್ಲಿ ರಾಜ್ಯ ಯುವ ಪ್ರಶಸ್ತಿ ೨೦೨೫ – ೨೬, ಸಾಂಘಿಕ ಪ್ರಶಸ್ತಿ ೨೦೨೫ -೨೬ ಪ್ರದಾನ ಹಾಗೂ ಪಂಚ ಸಪ್ತತಿ ಪ್ರಯುಕ್ತ ೭೫ ದಿನಗಳ ಸ್ವಚ್ಛತಾ ಅಭಿಯಾನದ ಪ್ರಶಸ್ತಿ ವಿತರಣೆ ನಡೆಯುವುದು.
ಕಾರ್ಮಿಕ ಸಚಿವ ಸಂತೋಷ್ ಎಸ್ ಲಾಡ್ ಉದ್ಘಾಟನೆ ನೆರವೇರಿಸುವರು. ಶಾಸಕಿ ಭಾಗೀರಥಿ ಮುರುಳ್ಯ ಅಧ್ಯಕ್ಷತೆ ವಹಿಸಲಿದ್ದಾರೆ. ರಾಜ್ಯ ಯುವ ಪ್ರಶಸ್ತಿಯನ್ನು ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಪ್ರದಾನ ಮಾಡುವರು. ಸಾಂಘಿಕ ಪ್ರಶಸ್ತಿಯನ್ನು ಸಂಸದ ಕ್ಯಾ. ಬ್ರಿಜೇಶ್ ಚೌಟ ಪ್ರದಾನ ಮಾಡಲಿದ್ದಾರೆ. ಪಂಚಸಪ್ತತಿ ಪ್ರಶಸ್ತಿಯನ್ನು ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ನೆರವೇರಿಸುವರು. ಮೆರವಣಿಗೆ ಪ್ರಶಸ್ತಿಯನ್ನು ಉದ್ಯಮಿ ಕಿರಣ್ ಚಂದ್ರ ಡಿ ಪುಷ್ಪಗಿರಿ ಪ್ರದಾನ ಮಾಡಲಿದ್ದಾರೆ. ಅರೆಭಾಷೆ ಅಕಾಡೆಮಿ ಮಾಜಿ ಅಧ್ಯಕ್ಷ ಪಿ.ಸಿ.ಜಯರಾಮ್ ಜಾನುವಾರು ಪ್ರದರ್ಶನಕ್ಕೆ ಚಾಲನೆ ನೀಡಲಿದ್ದಾರೆ. ಸಮಾರಂಭದಲ್ಲಿ ಹಲವು ಗಣ್ಯರು ಭಾಗವಹಿಸಲಿದ್ದಾರೆ.
ರಾಜ್ಯದ ಸಚಿವರು, ಕ್ಷೇತ್ರದ ಶಾಸಕರು ಸಹಿತ ಹಲವು ಗಣ್ಯರು ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ಮಧ್ಯಾಹ್ನ ಬಳಿಕ ನಡೆಯುವ ರಾಜ್ಯ ಮಟ್ಟದ ಆಹ್ವಾನಿತ ತಂಡಗಳಿಂದ ಜನಪದ ವೈವಿಧ್ಯ ಸ್ಪರ್ಧೆ ನಡೆಯುವುದು. ಪ್ರಥಮ, ದ್ವಿತೀಯ, ತೃತೀಯ ಹಾಗೂ ಚತುರ್ಥ ಸ್ಥಾನ ಪಡೆದ ತಂಡಗಳಿಗೆ ನಗದು ಸಹಿತ ಶಾಶ್ವತ ಫಲಕ ಪ್ರದಾನ ನಡೆಯುವುದು ಎಂದು ಯುವ ಸಂಭ್ರಮ ಸಂಘಟನಾ ಸಮಿತಿ ಅಧ್ಯಕ್ಷ ದಿಲೀಪ್ ಬಾಬ್ಲು ಬೆಟ್ಟು ಹಾಗೂ ಯುವಜನ ಸಂಯುಕ್ತ ಮಂಡಳಿ ಅಧ್ಯಕ್ಷ ಪವನ್ ಪಲ್ಲತ್ತಡ್ಕ ತಿಳಿಸಿದ್ದಾರೆ.












