ಪಂಜ:ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ವರ್ಷಾವಧಿ ಜಾತ್ರೋತ್ಸವವು ಫೆ.1ರಿಂದ ಫೆ.9ರವರೆಗೆ ನಡೆಯಲಿದೆ. ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿ ಯವರ ನೇತೃತ್ವದಲ್ಲಿ ವಿವಿಧ ವೈದಿಕ ಕಾರ್ಯ ಕ್ರಮಗಳೊಂದಿಗೆ ವಿಜ್ರಂಭಣೆಯಿಂದ ವೈಭವದ ಜಾತ್ರೋತ್ಸವ ನಡೆಯಲಿದೆ.ಜ.24ರಂದು ಜಾತ್ರೋತ್ಸವದ ಗೊನೆಮುಹೂರ್ತ ನಡೆಯಿತು. ಫೆ.1 ರಂದು ಸಂಜೆ ತಂತ್ರಿ ಆಗಮನ. ತಂತ್ರಿಗಳಿಗೆ ಪೂರ್ಣಕುಂಭ ಸ್ವಾಗತ. ಬಳಿಕ
ರಾತ್ರಿ ಧ್ವಜಾರೋಹಣ ನಡೆಯಲಿದೆ. ಫೆ.2 ರಂದು ಬೆಳಿಗ್ಗೆ ಗಂಟೆ 7 ಕ್ಕೆ ನಾಗತೀರ್ಥದ ಮೂಲಸ್ಥಾನ ಬಂಟಮಲೆಯಿಂದ ದೇವಾಲಯಕ್ಕೆ
ತೀರ್ಥ ತರುವುದು. ಮಹಾಪೂಜೆ, ನಿತ್ಯ ಬಲಿ ನಡೆಯಲಿದೆ. ಫೆ.3ರಂದು ಮಹಾಪೂಜೆ, ನಿತ್ಯ ಬಲಿ ನಡೆಯಲಿದೆ.ಸಂಜೆ ಹಸಿರು ಕಾಣಿಕೆ ಮೆರವಣಿಗೆ ಪುತ್ಯ ಸತ್ಯಕಟ್ಟೆಯಿಂದ ಆರಂಭಗೊಂಡು ದೇವಳಕ್ಕೆ ಮೆರವಣಿಗೆಯ ಮೂಲಕ ಆಗಮಿಸಿ ಸಮರ್ಪಣೆಯಾಗಲಿದೆ. ರಾತ್ರಿ ಉಗ್ರಾಣ ತುಂಬಿಸುವುದು. ದಂಡಮಾಲೆ ಹಾಕಿ ಬಲಿ, ಬೇತಾಳಗಳು ಇಳಿಯುವುದು ನಡೆಯಲಿದೆ. ಫೆ.4ರಂದು ಹಗಲು ಬೈಗಿನ ಬಲಿ, ಮಧ್ಯಾಹ್ನ ಮಹಾಪೂಜೆ, ರಾತ್ರಿ ದೇವರ ಉತ್ಸವ ನಡೆಯಲಿದೆ.
ಫೆ.5 ರಂದು ಪೂರ್ವಾಹ್ನ ಶ್ರೀ ದೇವರ ದರ್ಶನ ಬಲಿ ಬಟ್ಟಲು ಕಾಣಿಕೆ, ರಾತ್ರಿ ದೀಪೋತ್ಸವ, ಮಹಾಪೂಜೆ ನಡೆಯಲಿದೆ. ಫೆ.6 ರಂದು ಮುಂಜಾನೆ ಶ್ರೀ ದೇವರ ಬಲಿ ಹೊರಟು ಉತ್ಸವ, ಮಹಾಪೂಜೆ, ರಾತ್ರಿ ಶ್ರೀ ದೇವರ ಬ್ರಹ್ಮರಥೋತ್ಸವ, ಶ್ರೀ ಕಾಚುಕುಜುಂಬ ದೈವದ ನರ್ತನ ಸೇವೆ, ಮಹಾಪೂಜೆ, ಶ್ರೀ ಭೂತಬಲಿ, ಶಯನೋತ್ಸವ, ಕವಾಟ ಬಂಧನ ಜರುಗಲಿದೆ.

ಫೆ.7.ರಂದು ಕವಾಟೋದ್ಘಾಟನೆ ದೇವರಿಗೆ ಅಭಿಷೇಕ, ಬೆಳಿಗ್ಗೆ ಗಂಟೆ 9 ರಿಂದ ಬಲಿ ಹೊರಟು ಅವಭೃತ ಸ್ನಾನ, ಧ್ವಜಾವರೋಹಣ, ಮಹಾಪೂಜೆ ಜರುಗಲಿದೆ. ಸಂಜೆ ದೇಗುಲದಿಂದ ಶ್ರೀ ಕಾಚುಕುಜುಂಬ, ಉಳ್ಳಾಕುಲು ದೈವಗಳ ಭಂಡಾರವನ್ನು ಮೆರವಣಿಗೆ ಮೂಲಕ ಮೂಲಸ್ಥಾನ ಗರಡಿ ಬೈಲಿಗೆ ಹೋಗಿ ಧ್ವಜಾರೋಹಣ, ಶ್ರೀ ಕಾಚುಕುಜುಂಬ ದೈವದ ನೇಮ ನಡೆಯಲಿದೆ.
ಫೆ.8 ರಂದು ಮುಂಜಾನೆ 6.30ಕ್ಕೆ ಗರಡಿ ಬೈಲಿನ ಮೂಲ ನಾಗನ ಕಟ್ಟೆಯಲ್ಲಿ ತಂಬಿಲ ಹಾಗೂ ಬೆಳಿಗ್ಗೆ 7.30ರಿಂದ ಶ್ರೀ ಉಳ್ಳಾಕುಲು ದೈವದ ನೇಮ, ದೇವಳದಲ್ಲಿ ಸಂಪ್ರೋಕ್ಷಣೆ ಮಹಾಪೂಜೆ ವೈದಿಕ ಮಂತ್ರಾಕ್ಷತೆ ಪ್ರಸಾದ ವಿತರಣೆ ಜರುಗಲಿದೆ. ರಾತ್ರಿ ಶಿರಾಡಿ ದೈವದ ಬಂಡಾರ ಬರುವುದು. ಫೆ.9.ರಂದು ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಪೂಜೆ ಹಾಗೂ ಶಿರಾಡಿ ದೈವದ ನೇಮ ಜರುಗಲಿದೆ.ಎಂದು ದೇವಸ್ಥಾನದ
ಆಡಳಿತಾಧಿಕಾರಿ ತಹಶೀಲ್ದಾರ್ ಜಿ.ಮಂಜುನಾಥ್ ಹಾಗೂ
ಉತ್ಸವ ಸಮಿತಿ ಅಧ್ಯಕ್ಷರಾದ ಡಾ.ದೇವಿಪ್ರಸಾದ್ ಕಾನತ್ತೂರ್ ಅವರು ತಿಳಿಸಿದ್ದಾರೆ.

ಸಾಂಸ್ಕೃತಿಕ ಸಂಭ್ರಮ: ವಿಶೇಷ ಆಕರ್ಷಣೆ
ಫೆ 3.ರಂದು ಹಸಿರು ಕಾಣಿಕೆ ಮೆರವಣಿಗೆಯಲ್ಲಿ ಮತ್ತು ಫೆ.6. ರಾತ್ರಿ ಬ್ರಹ್ಮ ರಥೋತ್ಸವದ ವೇಳೆ ರಾಜ್ಯ ಪ್ರಶಸ್ತಿ ವಿಜೇತ ರಮೇಶ್ ಕಲ್ಲಡ್ಕ ರವರ ಶಿಲ್ಪ ಗೊಂಬೆ ಬಳಗದಿಂದ ಕೀಲು ಕುದುರೆ, ಕರಗನೃತ್ಯ, ಗೊಂಬೆಯಾಟ ಮತ್ತು ದೇವಳದ ಮೈದಾನದಲ್ಲಿ ಅನೇಕ ಭಜನಾ ತಂಡಗಳಿಂದ ಕುಣಿತ ಭಜನೆ, ಭಜನಾ ಸಂಕೀರ್ತನೆ ವಿಶೇಷ ಆಕರ್ಷಣೆಯಾಗಲಿದೆ. ಫೆ.1 ರಂದು ರಾತ್ರಿ ಗಂಟೆ 9.30 ರಿಂದ ಯಕ್ಷ ಮಿತ್ರರು ಪಂಜ ಇದರ ಆಶ್ರಯದಲ್ಲಿ ಸಸಿಹಿತ್ತು ಶ್ರೀ ಭಗವತಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಸಸಿಹಿತ್ತು ಮಂಗಳೂರು ಇವರಿಂದ ಮುಗುರು ಮಲ್ಲಿಗೆ ಯಕ್ಷಗಾನ ಬಯಲಾಟ ಪ್ರದರ್ಶನ ಗೊಳ್ಳಲಿದೆ. ಫೆ.2 ರಂದು ರಾತ್ರಿ ಗಂಟೆ 7 ರಿಂದ ಪ್ರಣತಿ ಚೈತನ್ಯ ಪದ್ಯಾಣ ಮತ್ತು ಪದಯಾನ ತಂಡದವರಿಂದ ಭರತನಾಟ್ಯ ಪ್ರದರ್ಶನ ಗೊಳ್ಳಲಿದೆ. ಫೆ.3 ರಂದು ರಾತ್ರಿ ಗಂಟೆ 7 ರಿಂದ ಡಾನ್ಸ್ & ಬೀಟ್ಸ್ ಪಂಜ ಮತ್ತು ಇತರ ಶಾಖೆಯ ಇದರ ವಿದ್ಯಾರ್ಥಿಗಳಿಂದ ನೃತ್ಯ ಸಂಭ್ರಮ ಪ್ರದರ್ಶನ ಗೊಳ್ಳಲಿದೆ. ಫೆ.5 ರಂದು ರಾತ್ರಿ ಗಂಟೆ 7 ರಂದು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿ ಧರ್ಮಸ್ಥಳ ರವರಿಂದ ಕಾರುಣ್ಯಾಂಬುಧಿ ಶ್ರೀ ರಾಮ ಯಕ್ಷಗಾನ ಬಯಲಾಟ ಪ್ರದರ್ಶನ ಗೊಳ್ಳಲಿದೆ










