ಪಂಜ;ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಳದ ಜಾತ್ರೋತ್ಸವದ ಪ್ರಯುಕ್ತ ಮಂಗಳವಾರ ರಾತ್ರಿ ಭಕ್ತಿ ಸಂಭ್ರಮದ ಬ್ರಹ್ಮ ರಥೋತ್ಸವ ನಡೆಯಿತು. ಸಾವಿರಾರು ಮಂದಿ ಭಕ್ತರು ರಥೋತ್ಸವವನ್ನು ಕಣ್ತುಂಬಿಕೊಂಡರು.ಬ್ರಹ್ಮ ಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ವಿವಿಧ ವೈದಿಕ ಕಾರ್ಯಕ್ರಮಗಳ ಬಳಿಕ ಬ್ರಹ್ಮ ರಥೋತ್ಸವ ನಡೆಯಿತು.
ಇದೇ ವೇಳೆ
ಶ್ರೀ ಕಾಚು ಕುಜುಂಬ ದೈವದ ನರ್ತನ ಸೇವೆ, ಮಹಾಪೂಜೆ ಶ್ರೀ ಭೂತಬಲಿ , ಶಯನೋತ್ಸವ, ಕವಾಟ ಬಂಧನ ಜರುಗಿತು.
ಪೂರ್ವ ಸಂಪ್ರದಾಯದಂತೆ ಐವತ್ತೊಕ್ಲು ಪಟೇಲ್ ಮನೆಯವರನ್ನು ಹಾಗೂ ಪುತ್ಯ ,ಕುದ್ವ ಮನೆಯ ಪೈಯೋಳಿ ಮಕ್ಕಳನ್ನು ರಥೋತ್ಸವಕ್ಕೆ ಸ್ವಾಗತಿಸಲಾಯಿತು.

ಈ ಸಂದರ್ಭದಲ್ಲಿ ನಡೆದ ಸಿಡಿಮದ್ದು ಪ್ರದರ್ಶನ ಬಾನಂಗಳದಲ್ಲಿ ಆಕರ್ಷಕ ವರ್ಣ ಚಿತ್ತಾರ ಬಿಡಿಸಿತು. ಸಾವಿರಾರು ಮಂದಿ ರಥೋತ್ಸವ ಕಣ್ತುಂಬಿಕೊಂಡರು.ದೇವಳದ ಮೈದಾನದಲ್ಲಿ ಭಜನಾ ತಂಡಗಳ ಕುಣಿತ ಭಜನೆ, ಕಲ್ಲಡ್ಕ ಶಿಲ್ಪಾ ಗೊಂಬೆ ಬಳಗದಿಂದ ಕೀಲು ಕುದುರೆ, ಕರಗನೃತ್ಯ,ಗೊಂಬೆಯಾಟ ಹಾಗೂ ಬೇತಾಳಗಳು, ಚೆಂಡೆ ವಾದನ ಕೊಂಬು ಕಹಳೆ ವಿಶೇಷ ಆಕರ್ಷಣೆಯಾಗಿತ್ತು.
ಉತ್ಸವ ಸಮಿತಿ ಅಧ್ಯಕ್ಷ ಡಾ.ದೇವಿಪ್ರಸಾದ್ ಕಾನತ್ತೂರ್ ಅವರು ಜಾತ್ರೋತ್ಸವದ ನೇತೃತ್ವ ವಹಿಸಿದ್ದರು. ದೇವಳದ ಆಡಳಿತಾಧಿಕಾರಿ, ತಹಶೀಲ್ದಾರ್ ಜಿ. ಮಂಜುನಾಥ್, ರಾಜ್ಯ ಧಾರ್ಮಿಕ ಪರಿಷತ್ ಸದಸ್ಯೆ ಮಲ್ಲಿಕಾ ಪಕ್ಕಳ, ದೇವಳದ ವ್ಯವಸ್ಥಾಪನಾ ಸಮಿತಿ ನಿಕಟಪೂರ್ವಾಧ್ಯಕ್ಷ ಪದ್ಮನಾಭ ರೈ ಅಗೋಳಿಬೈಲುಗುತ್ತು, ಉಪತಹಶೀಲ್ದಾರ್ ಚಂದ್ರಕಾಂತ್ ಎಂ. ಆರ್, ಪಂಜ ಗ್ರಾಮ ಪಂಚಾಯತ್ ಅಧ್ಯಕ್ಷೆ ವಿಜಯಲಕ್ಷ್ಮೀ, ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಗಣೇಶ್ ಪೈ, ಪುತ್ತಿಲ ಪರಿವಾರದ ಅರುಣ್ ಕುಮಾರ್ ಪುತ್ತಿಲ, ಉತ್ಸವ ಸಮಿತಿ ಸದಸ್ಯರು,ಸಂಚಾಲಕರು, ಸದಸ್ಯರು ಉಪಸ್ಥಿತರಿದ್ದರು.







