ಪಂಜ::ಕಬಡ್ಡಿ ದೈಹಿಕ ಸಾಮರ್ಥ್ಯವನ್ನು ವೃದ್ಧಿಸಿ, ಚುರುಕತನವನ್ನು ಹೆಚ್ಚಿಸಿ, ಮನುಷ್ಯನಲ್ಲಿರುವ ಆಲಸ್ಯ ಮತ್ತು ಉದಾಸಿನತೆಯನ್ನು ಹೋಗಲಾಡಿಸುತ್ತದೆ. ವಿದ್ಯಾರ್ಥಿಗಳು ತರಗತಿಯಲ್ಲಿ ಪಾಠ ಕೇಳುವುದರ ಜೊತೆಗೆ ಕ್ರೀಡೆಯಲ್ಲಿ ಪಾಲ್ಗೊಂಡರೆ ಅದು ಅವರ ಓದಿಗೆ ಪೂರಕವಾದ ಮಾನಸಿಕತೆಯನ್ನು ಒದಗಿಸಿ ಕೊಡುತ್ತದೆ ಎಂದು ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್‌ನ ಪ್ರಧಾನ ಕಾರ್ಯದರ್ಶಿ ಹಾಗು ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷ ಡಾ. ರೇಣುಕಾ ಪ್ರಸಾದ್ ಕೆ. ವಿ ಆಶಯ
ವ್ಯಕ್ತಪಡಿಸಿದರು. ಅವರು ಪಂಜದ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಮೈಸೂರು ವಿಭಾಗ ಮಟ್ಟದ ಕಬಡ್ಡಿ ಪಂದ್ಯಾಟದ ಮುಖ್ಯ ಅತಿಥಿಯಾಗಿ ಮಾತನಾಡುತ್ತಿದ್ದರು.
ಮನುಷ್ಯಆರೋಗ್ಯದಿಂದಿರಬೇಕಾದರೆ ಕ್ರೀಡೆ ಅತಿ ಮುಖ್ಯ ಅದರಲ್ಲೂ ಕಬಡ್ಡಿ ಅತ್ಯಂತ ಜನಪ್ರಿಯ ಆಟ. ಕಬಡ್ಡಿ ಎನ್ನುವುದು ಈ ಭಾಗದ ಜನರ ನೆಚ್ಚಿನ ಆಟ. ಇದು ಶೌರ್ಯ, ಶಕ್ತಿ, ಜಾಣ್ಮೆ, ಬುದ್ಧಿವಂತಿಕೆಯನ್ನು ಒಳಗೊಂಡ ಒಂದು ದೈಹಿಕ ಸಾಮರ್ಥ್ಯವನ್ನು ಪ್ರದರ್ಶಿಸುವ ಒಂದು ಆಟ. ಕರಾವಳಿಯ ನೆಚ್ಚಿನ ಆಟವಾದ ಕಬಡ್ಡಿಗೆ ಈಗ ವಿಶ್ವ ಮಾನ್ಯತೆ ದೊರೆತಿರುವುದು ಹೆಮ್ಮೆಯ ಸಂಗತಿ. ಇವತ್ತು ಕಬಡ್ಡಿ ಆಟವೂ ಜಗತ್ತಿನಾದ್ಯಂತ ಹೆಣ್ಣು ಗಂಡು ಭೇದವಿಲ್ಲದೆ ಎಲ್ಲರೂ ಆಡುವಂತಾಗಿದೆ ಎಂದರು. ಕಾರ್ಯಕ್ರಮವನ್ನು ಬಂದರು ಮೀನುಗಾರಿಕೆ ಮತ್ತು ಒಳನಾಡು ಜಲಸಾರಿಗೆ ಸಚಿವರಾದ ಎಸ್. ಅಂಗಾರರವರು ಉದ್ಘಾಟಿಸಿದರು. ವೇದಿಕೆಯಲ್ಲಿ ಮೀನುಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಎ.ವಿ. ತೀರ್ಥರಾಮ, ಸವಣೂರು ವಿದ್ಯಾರಶ್ಮಿ ವಿದ್ಯಾಲಯದ ಅಧ್ಯಕ್ಷರಾದ ಸೀತಾರಾಮ ರೈ, ನಗರ ಪಂಚಾಯತ್‌ನ ಮಾಜಿ ಅಧ್ಯಕ್ಷ ಎನ್.ಎ ರಾಮಚಂದ್ರ, ಕ್ಷೇತ್ರ ಶಿಕ್ಷಣಾಧಿಕಾರಿ ಮಹದೇವ, ಅಮೆಚೂರ್ ಕಬಡ್ಡಿ ಅಸೋಸಿಯೇಷನ್‌ನ ಅ ಅಧ್ಯಕ್ಷ ಮಾಧವ ಬಿ.ಕೆ, ಸಮೂಹ ಸಂಪನ್ಮೂಲ ಕೇಂದ್ರದ ಸಮನ್ವಯ ಅಧಿಕಾರಿ ಶೀತಲ್ ಯು.ಕೆ ಮತ್ತು ಇತರ ಗಣ್ಯರು ಉಪಸ್ಥಿತರಿದ್ದರು.