ಮಂಗಳೂರು: ಗ್ರಾಮ ಪಂಚಾಯತ್ ದೂರದೃಷ್ಟಿ ಯೋಜನೆಗೆ ಇಂಧನ, ಕನ್ನಡ ಮತ್ತು ಸಂಸ್ಕøತಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ವಿ. ಸುನಿಲ್ ಕುಮಾರ್ ಅವರು ಚಾಲನೆ ನೀಡಿದರು. ಅ.18ರ ಮಂಗಳವಾರ ನಗರದ ಜಿಲ್ಲಾ ಪಂಚಾಯತ್ ನ ನೇತ್ರಾವತಿ ಸಭಾಂಗಣದಲ್ಲಿ ಚಾಲನೆ ನೀಡಿ ಮಾತನಾಡಿದ ಸಚಿವರು, ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ 3090 ರನ್ವಯ ಪ್ರತಿಯೊಂದು ಗ್ರಾಮ ಪಂಚಾಯತ್ ಸಮರ್ಪಕವಾಗಿ ದೂರದೃಷ್ಟಿ ಯೋಜನೆಯನ್ನು ಸಿದ್ಧಪಡಿಸಬೇಕಾಗುತ್ತದೆ. ದೂರದೃಷ್ಟಿ ಯೋಜನೆ ಎಂದರೆ ಗ್ರಾಮೀಣ ಪ್ರದೇಶದ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ಮುಂದಿನ ದಿನಗಳಲ್ಲಿ ಸಾಧಿಸಬೇಕಾಗಿರುವ
ಗುರಿಗಳನ್ನು ನಿಗಧಿಪಡಿಸಿ ಅವುಗಳನ್ನು ಸಮುದಾಯ ಸಹಭಾಗಿತ್ವದೊಂದಿಗೆ ಯೋಜನೆ ಸಿದ್ಧಪಡಿಸುವುದು. ಗ್ರಾಮ ಪಂಚಾಯತಿಯ ವಾಸ್ತವ ಸ್ಥಿತಿ ಆಧರಿಸಿ 5 ವರ್ಷಗಳ ಅವಧಿಗೆ ದೂರದೃಷ್ಟಿ ಯೋಜನೆಯನ್ನು ಸಿದ್ಧಪಡಿಸಬೇಕಾಗುತ್ತದೆ. ಹಾಗೂ ಸ್ಥಳೀಯ ಸಮಸ್ಯೆಗಳ ಆಧಾರದ ಮೇಲೆ ಮತ್ತು ಲಭ್ಯ ಸಂಪನ್ಮೂಲಗಳನ್ನು ಪರಿಗಣನೆಗೆ ತೆಗೆದುಕೊಂಡು ಈ ಯೋಜನೆ ಸಿದ್ಧಪಡಿಸಬೇಕಾಗುತ್ತದೆ ಎಂದರು. ಚಾಲನೆ ನೀಡಿದ ನಂತರ ಪ್ರತಿಯೊಂದು ಗ್ರಾಮ ಪಂಚಾಯತ್‍ಗಳು ಮುಂದಿನ 5 ವರ್ಷ ಅವರಿಗೆ ಗುರುತಿಸಿರುವ ವಲಯಗಳನ್ನು ಆಧರಿಸಿ ದೂರದೃಷ್ಟಿ ಯೋಜನೆಯನ್ನು ತಯಾರಿಸಬೇಕಾಗುತ್ತದೆ ಎಂದು ಹೇಳಿದರು. ಈಗಾಗಲೇ ಗ್ರಾಮ ಪಂಚಾಯತ್ ಮಟ್ಟದಲ್ಲಿ ಗ್ರಾಮ ಪಂಚಾಯತಿಯ ತಂಡವನ್ನು ರಚಿಸಲಾಗಿದೆ. ಜಿಲ್ಲಾ ಮಟ್ಟದಲ್ಲಿ ಹಾಗೂ ತಾಲೂಕು ಮಟ್ಟದಲ್ಲಿ ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದೆ. ಜಿಲ್ಲಾ ಮಟ್ಟ ಹಾಗೂ ತಾಲೂಕು ಮಟ್ಟದಲ್ಲಿ ಸಂಬಂಧಪಟ್ಟ ಅಧಿಕಾರಿಗಳಿಗೆ ಈಗಾಗಲೇ ತರಬೇತಿ ಕಾರ್ಯಕ್ರಮಗಳನ್ನು ನಡೆಸಲಾಗಿದ್ದು, ಗ್ರಾಮ ಪಂಚಾಯತ್ ಮಟ್ಟದಲ್ಲಿ ಸದಸ್ಯರುಗಳಿಗೆ ವಿವಿಧ ಹಂತದಲ್ಲಿ ತರಬೇತಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ ಎಂದರು. ಗುರುತಿಸಲಾದ ವಲಯಗಳಲ್ಲಿ ಪ್ರಮುಖವಾಗಿ ಆರೋಗ್ಯ ವಲಯದಿಂದ ಶಿಶು ಹಾಗೂ ತಾಯಂದಿರ ಮರಣವನ್ನು ತಡೆಗಟ್ಟಲು, ಸಾಂಕ್ರಾಮಿಕ ರೋಗಗಳ ಮುನ್ನೆಚ್ಚರಿಕೆ ಹಾಗೂ ಆರೋಗ್ಯ ಇಲಾಖೆಯ ಉಪಕೇಂದ್ರಗಳು, ಪ್ರಾಥಮಿಕ ಕೇಂದ್ರಗಳನ್ನು ಬಲಪಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ಶಿಕ್ಷಣ ವಲಯದಿಂದ ಉಚಿತ ಮತ್ತು ಕಡ್ಡಾಯ ಶಿಕ್ಷಣಕ್ಕೆ ಒತ್ತು ನೀಡಲು ಗುಣಮಟ್ಟದ ಶಿಕ್ಷಣಕ್ಕಾಗಿ ಹಾಗೂ ಶಿಕ್ಷಣ ಸಂಸ್ಥೆಗಳ ಮೂಲ ಸೌಕರ್ಯ, ಗ್ರಂಥಾಲಯ, ಶೌಚಾಲಯ, ಕುಡಿಯುವ ನೀರು, ಸ್ಮಾರ್ಟ್ ಶಾಲೆ ಮುಂತಾದ ಅಂಶಗಳನ್ನು ಯೋಜನೆಯಲ್ಲಿ ಆಳವಡಿಸಲಾಗುವುದು. ಮಹಿಳಾ ಮತ್ತು ಮಕ್ಕಳ ವಲಯ ಪ್ರಸವ ಪೂರ್ವ ಆರೈಕೆ, ಪೌಷ್ಟಿಕಾಂಶದ ಪೂರಕ ಅಂಶಗಳ ಒದಗಣೆ, ಅಪೌಷ್ಠಿಕ ಮಕ್ಕಳ ಆರೋಗ್ಯದ ಬಗ್ಗೆ ವಿವಿಧ ಕಾರ್ಯಕ್ರಮ ಆಳವಡಿಸಲಾಗುವುದು ಹಾಗೂ ಮಹಿಳೆಯರಿಗೆ ಸ್ವ ಉದ್ಯೋಗ ತರಬೇತಿಯಂತಹಾ ಬೆಂಬಲ ಕಾರ್ಯಕ್ರಮಗಳನ್ನು ಅಳವಡಿಸಿ ಸುಸಜ್ಜಿತವಾದ ಅಂಗನವಾಡಿಗಳ ನಿರ್ಮಾಣಕ್ಕೆ ಒತ್ತು ನೀಡಿ ಯೋಜನೆಯನ್ನು ರೂಪಿಸಲಾಗುವುದು ಎಂದು ಹೇಳಿದರು. ಸಾಮಾಜಿಕ ನ್ಯಾಯ ಮತ್ತು ಭದ್ರತೆಯಡಿ ಸಾಮಾಜಿಕ ಭದ್ರತಾ ಯೋಜನೆಯ ಪಿಂಚಣಿ ಸೌಲಭ್ಯವನ್ನು ಗ್ರಾಮ ಪಂಚಾಯತ್ ಮಟ್ಟದಲ್ಲಿ
ಕಂದಾಯ ಇಲಾಖೆಯೊಂದಿಗೆ ಸಮನ್ವಯ ಸಾಧಿಸಿ ಅರ್ಹ ಫಲಾನುಭವಿಗಳಿಗೆ ದೊರಕುವ ರೀತಿಯಲ್ಲಿ ಕಾರ್ಯಕ್ರಮ ಆಯೋಜಿಸುವುದು, ವಸತಿ ಸೌಲಭ್ಯಕ್ಕೆ ಒತ್ತು ನೀಡುವುದು, ಪ್ರತಿಯೊಬ್ಬರು ಬ್ಯಾಂಕ್ ಖಾತೆ, ಆರೋಗ್ಯ ವಿಮಾ, ಆಧಾರ್ ಕಾರ್ಡ್ ಪಡೆಯುವ ಬಗ್ಗೆ ಕಾರ್ಯಕ್ರಮ ರೂಪಿಸಿ ಪ.ಜಾತಿ/ಪ.ವರ್ಗಗಳ ಕಲ್ಯಾಣ ಕಾರ್ಯಕ್ರಮಗಳ ಪ್ರಸ್ತಾವನೆಗಳನ್ನು ಅಳವಡಿಸಲಾಗುವುದು ಎಂದು ತಿಳಿಸಿದರು. ಪರಿಸರ ಮತ್ತು ನೈಸರ್ಗಿಕ ಸಂಪನ್ಮೂಲಗಳಡಿ ಅರಣ್ಯ ಪ್ರದೇಶವನ್ನು ಹೆಚ್ಚಿಸುವುದು, ನೆಡುತೋಪುಗಳಿಗೆ ಪ್ರಾದಾನ್ಯತೆ, ಅಂತರ್ಜಲ ಕುಸಿತ ತಡೆಹಿಡಿಯುವಲ್ಲಿ ಕ್ರಮ, ಮಳೆ ನೀರು ಕೊಯ್ದುಗೆ ಆದ್ಯತೆ ನೀಡಲಾಗುವುದು. 2030ರೊಳಗೆ ಬಡತನ ಮುಕ್ತ ಜೀವನೋಪಾಯ ಮತ್ತು ಕೌಶಲ್ಯ ಅಭಿವೃದ್ಧಿ ಗ್ರಾಮವನ್ನಾಗಿಸಲು ಗ್ರಾಮೀಣ ಪ್ರದೇಶದಲ್ಲಿ ಬಡತನದಲ್ಲಿರುವವರನ್ನು ಗುರುತಿಸಿ ಅವರ ಉನ್ನತೀಕರಣದ ಕಾರ್ಯಕ್ರಮಗಳನ್ನು ಅಳವಡಿಸಲಾಗುವುದು. ಜನರ ಬೇಡಿಕೆಗೆ ಅನುಗುಣವಾಗಿ ಮೂಲಭೂತ ಸೌಕರ್ಯಗಳನ್ನು ಹಾಗೂ ಸ್ವಾವಲಂಬಿ ಔದ್ಯೋಗಿಕ ಕಾರ್ಯಕ್ರಮಗಳನ್ನು ಯೋಜನೆಯಲ್ಲಿ ಅಳವಡಿಸಲಾಗುವುದು. ಗ್ರಾಮ ಪಂಚಾಯತ್‍ಗಳಲ್ಲಿ ಪಾರದರ್ಶಕ ವ್ಯವಸ್ಥೆಯ ರೀತಿಯಲ್ಲಿ ಆಡಳಿತ ವ್ಯವಸ್ಥೆ ಹಾಗೂ ಇ-ತಂತ್ರಜ್ಞಾನ ಅಳವಡಿಕೆಗೆ ಒತ್ತು ನೀಡಲಾಗುವುದು ಎಂದು ಮಾಹಿತಿ ನೀಡಿದರು.
ಶಾಸಕರಾದ ಉಮನಾಥ್ ಕೋಟ್ಯಾನ್, ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕುಮಾರ್, ಅಪರ ಜಿಲ್ಲಾಧಿಕಾರಿ ಕೃಷ್ಣಮೂರ್ತಿ ವೇದಿಕೆಯಲ್ಲಿದ್ದರು. ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳಿದ್ದರು.