ಸುಳ್ಯ:ಮುಂದಿನ ನ.26ರಂದು ನಡೆಯುವ ಸಂವಿಧಾನ ದಿನಾಚರಣೆಯ ಮೊದಲು ಸುಳ್ಯದ ಅಂಬೇಡ್ಕರ್ ಭವನದ ಕಾಮಗಾರಿ ಪೂರ್ತಿ ಮಾಡಿ ಸಂವಿಧಾನ ದಿನಾಚರಣೆಯಂದು ಉದ್ಘಾಟನೆಯಾಗಬೇಕು ಎಂದು ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಪಲ್ಲವಿ ಜಿ. ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.ಜ.7ರಂದು ಬೆಳಿಗ್ಗೆ ಅಂಬೇಡ್ಕರ್ ಭವನ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಒಳ್ಳೆಯ ಉದ್ದೇಶದಿಂದ ದೊಡ್ಡ
ಮಟ್ಟದಲ್ಲಿ ಅಂಬೇಡ್ಕರ್ ಭವನ ನಿರ್ಮಾಣ ಮಾಡುವ ದೃಷ್ಠಿಯಿಂದ ಕಾಮಗಾರಿ ಪ್ರಾರಂಭ ಮಾಡಿದ್ದಾರೆ. ಎರಡು ಕೋಟಿಯಲ್ಲಿ ನಿರ್ಮಾಣ ಕಾಮಗಾರಿ ನಡೆದಿದೆ. ಬಳಿಕ ಅನುದಾನದ ಕೊರತೆಯಿಂದ ಕಾಮಗಾರಿ ಸ್ಥಗಿತ ಆಗಿದೆ. ಇದೀಗ ಮುಂದುವರಿದ ಕಾಮಗಾರಿಗೆ 3.1ಕೋಟಿ ಅನುದಾನ ಮಂಜೂರಾಗಿದೆ. ಈ ಅನುದಾನದ ಕಾಮಗಾರಿ ಶೀಘ್ರದಲ್ಲಿ ಮಾಡಬೇಕು. ಇದು ಮುಗಿದ ಮೇಲೆ ಹೆಚ್ಚುವರಿ ಅನುದಾನ ಅಗತ್ಯ ಬಿದ್ದರೆ ದೊರಕಿಸುವ ಪ್ರಯತ್ನ ನಡೆಸಲಾಗುವುದು ಎಂದು ಪಲ್ಲವಿ ಅವರು ತಿಳಿಸಿದ್ದಾರೆ.

ಅಂಬೇಡ್ಕರ್ ಭವನ ವೀಕ್ಷಣೆ:
ಅಂಬೇಡ್ಕರ್ ಭವನ ಕಾಮಗಾರಿಯನ್ನು ಅವರು ಪೂರ್ತಿ ವೀಕ್ಷಿಸಿದರು. ಡಿ.6ರಂದು ಸಂಜೆ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಂಬೇಡ್ಕರ್ ಭವನ ಕಾಮಗಾರಿ ಅರ್ಧಕ್ಕೆ ನಿಂತಿರುವ ಬಗ್ಗೆ ಗಂಭೀರ ಚರ್ಚೆ ನಡೆದಿತ್ತು. ಈ ಹಿನ್ನಲೆಯಲ್ಲಿ ಅಂಬೇಡ್ಕರ್ ಭವನ ವೀಕ್ಷಣೆ ಮಾಡಲೆಂದೇ ಅಧ್ಯಕ್ಷೆ ಪಲ್ಲವಿ ಅವರು ತಮ್ಮ ಸುಬ್ರಹ್ಮಣ್ಯ ಪ್ರಯಾಣವನ್ನು ಮುಂದೂಡಿ ಸುಳ್ಯದಲ್ಲಿ ತಂಗಿದ್ದರು. ಇಂದು ಬೆಳಿಗ್ಗೆ ಅಧಿಕಾರಿಗಳೊಂದಿಗೆ ಅಂಬೇಡ್ಕರ್ ಭವನ ವೀಕ್ಷಣೆ ಮಾಡಿದರು.
ಈ ಸಂದರ್ಭದಲ್ಲಿ ವಿಮುಕ್ತ ಬುಡಕಟ್ಟು ಒಕ್ಕೂಟದ ರಾಜ್ಯ ಜಂಟಿ ಕಾರ್ಯದರ್ಶಿ ಆನಂದ್ ಕುಮಾರ್, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಕೃಷ್ಣ.ಬಿ, ಜಿಲ್ಲಾ ಪಂಚಾಯತ್ ಉಪವಿಭಾಗದ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಫಯಾಝ್, ಕರ್ನಾಟಕ ಪ.ಜಾ, ಪ.ಪಂ. ಅಲೆಮಾರಿ ಅಭಿವೃದ್ಧಿ ನಿಗಮದ ಜಿಲ್ಲಾ ಸಮಿತಿ ಸದಸ್ಯ ಮಹೇಶ್ ಬೆಳ್ಳಾಳ್ಕರ್, ಪ್ರಮುಖರಾದ ನಂದರಾಜ ಸಂಕೇಶ, ಕೇಶವ ಮೊರಂಗಲ್ಲು ಮತ್ತಿತರರು ಇದ್ದರು.












