ಸುಳ್ಯ:ಸುಳ್ಯದಲ್ಲಿ ಅಂಬೇಡ್ಕರ್ ಭವನದ ಕಾಮಗಾರಿ ದಶಕದಿಂದ ಸ್ಥಗಿತವಾಗಿ ನೆನೆಗುದಿಗೆ ಬಿದ್ದಿರುವುದು ಆಶ್ಚರ್ಯ ತಂದಿದೆ ಮತ್ತು ಇದು ಅತ್ಯಂತ ನೋವಿನ ವಿಚಾರ ಎಂದು ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಪಲ್ಲವಿ ಜಿ. ಹೇಳಿದ್ದಾರೆ. ಜ.6ರಂದು ಸುಳ್ಯ ತಾಲೂಕಿಗೆ ಭೇಟಿ ನೀಡಿದ ಅವರು ಸುಳ್ಯ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆದ
ಪಂಬದ, ಮೈಲ, ಬಾಕುಡ, ನಲಿಕೆ, ನಲ್ಕದಾಯ, ಅಜಿಲ, ಭೈರ,ಚೆನ್ನದಾಸರ್, ಮಲೆಕುಡಿಯ, ಪರವನ್, ಕೊರಗ ಹಾಗೂ ಇತರ ಅಲೆಮಾರಿ ಸಮುದಾಯಗಳ ಕುಂದುಕೊರತೆ ಮತ್ತು ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. 12 ವರ್ಷದಿಂದ ಅಂಬೇಡ್ಕರ್ ಭವನ ಕಾಮಗಾರಿ ನೆನೆಗುದಿಗೆ ಬಿದ್ದಿದೆ ಎಂಬುದು ನಿರ್ಲಕ್ಷ್ಯಕ್ಕೆ ಸಾಕ್ಷಿ. ಈ ರೀತಿಯ ನಿರ್ಲಕ್ಷ್ಯವನ್ನು ಯಾಕೆ ಸಹಿಸಿಕೊಂಡಿದ್ದೀರಿ, ಇದರ ಬಗ್ಗೆ ಯಾಕೆ ಎಚ್ಚೆತ್ತುಕೊಂಡಿಲ್ಲ ಎಂದು ಪ್ರಶ್ನಿಸಿದ ಅವರು ಸಚಿವರ ಹಾಗು ಸರಕಾರದ ಗಮನಕ್ಕೆ ತಂದು ಅಂಬೇಡ್ಕರ್ ಭವನವನ್ನು ಪೂರ್ತಿ ಮಾಡುವುದಾಗಿ ತಿಳಿಸಿದರು. ಅಂಬೇಡ್ಕರ್ ಭವನ ನೆನೆಗುದಿಗೆ ಬಿದ್ದಿರುವ ಬಗ್ಗೆ

ಅಧಿಕಾರಿಗಳನ್ನು ಖಾರವಾಗಿ ಪ್ರಶ್ನಿಸಿದ ಅವರು ಜ.8ರಂದು ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿಗಳ ಉಪಸ್ಥಿತಿಯಲ್ಲಿ ನಡೆಯುವ ಪ್ರಗತಿ ಪರಿಶೀಲನಾ ಸಭೆಯಲ್ಲಿ ಈ ಕುರಿತು ಚರ್ಚೆ ನಡೆಸಲಾಗುವುದು. ಅಂದು ಸಂಪೂರ್ಣ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಅನುದಾನದ ಕೊರತೆಯಿಂದ ಕಾಮಗಾರಿ ವಿಳಂಬ ಆಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. 2 ಕೋಟಿ ಅನುದಾನದಲ್ಲಿ ಕಾಮಗಾರಿ ನಡೆದಿದೆ.ಬಳಿಕ ಅನುದಾನದ ಕೊರತೆಯಿಂದ ಕಾಮಗಾರಿ ನೆನೆಗುದಿಗೆ ಬಿದ್ದಿತು. ಇದೀಗ ಸರಕಾರ ಮುಂದುವರಿದ ಕಾಮಗಾರಿಗೆ 3.1ಕೋಟಿ ಅನುದಾನ ಮಂಜೂರು ಮಾಡಿದೆ, ಪರಿಷ್ಕೃತ ಯೋಜನಾ ವರದಿ ಸಲ್ಲಿಸಲು ಸೂಚಿಸಲಾಗಿದೆ ಎಂದು ಮಾಹಿತಿ ನೀಡಿದರು. ಅಂಬೇಡ್ಕರ್ ಭವನ ಎಲ್ಲಾ ಸಮುದಾಯಗಳಿಗೂ ಕಾರ್ಯಕ್ರಮ ನಡೆಸಲು ಇರುವ ಕೇಂದ್ರ. ಈ ರೀತಿಯ ನಿರ್ಲಕ್ಷ್ಯ ಸಹಿಸಲು ಸಾಧ್ಯವಿಲ್ಲ. ಇದನ್ನು ಆದಷ್ಟು ಬೇಗ ಪೂರ್ತಿ ಮಾಡಲು ಪ್ರಯತ್ನ ನಡೆಸಲಾಗುವುದು ಎಂದು ಅಧ್ಯಕ್ಷರು ಹೇಳಿದರು.
2017ರಲ್ಲಿ ಸುಳ್ಯ ತಾಲೂಕಿನ ಪೆರುವಾಜೆ, ಅಜ್ಜಾವರ, ಉಬರಡ್ಕ ಮಿತ್ತೂರು, ನೆಲ್ಲೂರು ಕೆಮ್ರಾಜೆ ಮತ್ತಿತರ ಕಡೆ ಅಂಬೇಡ್ಕರ್ ಭವನ ನಿರ್ಮಾಣ ಮಾಡುವುದಾಗಿ ಶಂಕುಸ್ಥಾಪನೆ ನೆರವೇರಿಸಲಾಗಿತ್ತು. ಆದರೆ ಎಲ್ಲಿಯೂ ಅಂಬೇಡ್ಕರ್ ಭವನ ನಿರ್ಮಾಣ ಆಗಿಲ್ಲ. ಶಂಕುಸ್ಥಾಪನೆಯ ಫಲಕಗಳು ಮಾತ್ರ ಇದೆ ಎಂದು ಸಭೆಯಲ್ಲಿದ್ದ ಯುವ ಕಾಂಗ್ರೆಸ್ ಅಧ್ಯಕ್ಷ ಚೇತನ್ ಕಜೆಗದ್ದೆ, ನಂದರಾಜ ಸಂಕೇಶ್ ಮತ್ತಿತರರು ಅಧ್ಯಕ್ಷರ ಗಮನಕ್ಕೆ ತಂದರು. ಈ ಬಗ್ಗೆ ಚರ್ಚೆ ನಡೆದು ಈ ಬಗ್ಗೆ ಪರಿಶೀಲನೆ ನಡೆಸಿ ವರದಿ ಸಲ್ಲಿಸುವಂತೆ ಅಧ್ಯಕ್ಷೆ ಪಲ್ಲವಿ ಅವರು ತಹಶೀಲ್ದಾರ್, ಇಓ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗೆ ಸೂಚಿಸಿದರು.
ಸಭೆಯಲ್ಲಿ ವಿಮುಕ್ತ ಬುಡಕಟ್ಟು ಒಕ್ಕೂಟದ ರಾಜ್ಯ ಜಂಟಿ ಕಾರ್ಯದರ್ಶಿ ಆನಂದ್ ಕುಮಾರ್, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಭರತ್ ಮುಂಡೋಡಿ, ತಾಲೂಕು ಅಧ್ಯಕ್ಷ ಶಾಹುಲ್ ಹಮೀದ್ ಕುತ್ತಮೊಟ್ಟೆ, ತಹಶೀಲ್ದಾರ್ ಎಂ.ಮಂಜುಳ, ತಾ.ಪಂ.ಕಾರ್ಯನಿರ್ವಹಣಾಧಿಕಾರಿ ರಾಜಣ್ಣ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಕೃಷ್ಣ ಬಿ, ಕರ್ನಾಟಕ ಪ.ಜಾ, ಪ.ಪಂ. ಅಲೆಮಾರಿ ಅಭಿವೃದ್ಧಿ ನಿಗಮದ ಜಿಲ್ಲಾ ಸಮಿತಿ ಸದಸ್ಯ ಮಹೇಶ್ ಬೆಳ್ಳಾರ್ಕರ್ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.












