ಸಿಡ್ನಿ: ಇಲ್ಲಿ ನಡೆದ ಟಿ–20 ವಿಶ್ವಕಪ್ನ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು 7 ವಿಕೆಟ್ಗಳಿಂದ ಮಣಿಸಿದ ಪಾಕಿಸ್ತಾನ ಫೈನಲ್ಗೆ ಲಗ್ಗೆಯಿಟ್ಟಿದೆ. ಗೆಲ್ಲಲು 153 ರನ್ ಗುರಿ ಪಡೆದ ಪಾಕಿಸ್ತಾನ 19.1 ಓವರ್ಗಳಲ್ಲಿ 3 ವಿಕೆಟ್ ನಷ್ಟಕ್ಕೆ ಗುರಿ ತಲುಪಿ ಫೈನಲ್ ಪ್ರವೇಶಿಸಿತು. ಗುರುವಾರ ಭಾರತ ಮತ್ತು ಇಂಗ್ಲೆಂಡ್ ಮಧ್ಯೆ
ನಡೆಯುವ ಎರಡನೇ ಸೆಮಿ ಫೈನಲ್ನಲ್ಲಿ ವಿಜೇತ ತಂಡವನ್ನು ಫೈನಲ್ನಲ್ಲಿ ಪಾಕಿಸ್ಥಾನ ಎದುರಿಸಲಿದೆ.ಪಾಕಿಸ್ಥಾನ ಪರ ಆರಂಭಿಕರಾದ ನಾಯಕ ಬಾಬರ್ ಅಜಂ 42 ಎಸೆತಗಳಲ್ಲಿ 53 ರನ್ ಹಾಗು ಮಹಮ್ಮದ್ ರಿಜ್ವಾನ್ 43 ಎಸೆತಗಳಲ್ಲಿ 57 ರನ್ ಸಿಡಿಸಿ ಭದ್ರ ಬುನಾದಿ ಹಾಕಿದರು.
ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ಗೆ ಶಾಹಿನ್ ಅಫ್ರಿದಿ ಆರಂಭದಲ್ಲೇ ಆಘಾತ ನೀಡಿದರು. 4 ರನ್ ಗಳಿಸಿದ್ದ ಆರಂಭಿಕ ಫಿನ್ ಅಲೆನ್ಗೆ ಪೆವಿಲಿಯನ್ ಹಾದಿ ತೋರಿಸಿದರು. ದಿವೋನ್ ಕಾನ್ವೆ ಸಹ 21 ರನ್ಗೆ ರನೌಟ್ ಆಗಿ ನಿರ್ಗಮಿಸಿದರು. ಬಳಿಕ ಎಚ್ಚರಿಕೆಯ ಆಟವಾಡಿದ ನಾಯಕ ಕೇನ್ ವಿಲಿಯಮ್ಸನ್ 46 ರನ್ ಗಳಿಸಿದರೆ, ಅಂತ್ಯದವರೆಗೂ ಆಡಿದ ಮಿಶೆಲ್ 53 ರನ್ ಗಳಿಸಿ ತಂಡದ ಗೌರವಾನ್ವಿತ ಮೊತ್ತ ಪೇರಿಸಲು ನೆರವಾದರು.ಪಾಕಿಸ್ತಾನದ ಪರ ಶಹೀನ್ ಶಾ ಅಫ್ರಿದಿ 4 ಓವರ್ಗಳಲ್ಲಿ 24 ರನ್ ನೀಡಿ 2 ವಿಕೆಟ್ ಉರುಳಿಸಿದರು. ಮಹಮ್ಮದ್ ಸವಾಜ್ 1 ವಿಕೆಟ್ ಪಡೆದರು.