ಚೆನ್ನೈ:ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯ ನಿರ್ಣಾಯಕ ಪಂದ್ಯದಲ್ಲಿ ಪಾಕಿಸ್ತಾನ ತಂಡ ದಕ್ಷಿಣ ಆಫ್ರಿಕಾಗೆ 271 ರನ್ಗಳ ಗುರಿ ನೀಡಿದೆ. ಸೆಮಿಫೈನಲ್ ಪ್ರವೇಶಿಸಲು ಗೆಲ್ಲಲೇಬೇಕಾದ ಒತ್ತಡ ಪಾಕ್ ಪಡೆಯ ಮೇಲಿದೆ.ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ 46.2 ಓವರ್ಗಳಲ್ಲಿ
270 ರನ್ ಗಳಿಸಿ ಆಲ್ ಔಟ್ ಆದರು. ನಾಯಕ ಬಾಬರ್ ಅಜಂ (50), ಸೌದ್ ಶಕೀಲ್ (52) ಬಲ ತುಂಬಿದರು. ಶದಾಬ್ ಖಾನ್ (43) ಉತ್ತಮ ಪ್ರದರ್ಶನ ನೀಡಿದರು.ದಕ್ಷಿಣ ಆಫ್ರಿಕಾ ಪರ ಸ್ಪಿನ್ನರ್ ತಬ್ರೇಜ್ ಶಂಸಿ 4 ವಿಕೆಟ್ ಉರುಳಿಸಿದರೆ, ಮಾರ್ಕೊ ಜಾನ್ಸೆನ್ 3 ವಿಕೆಟ್ ಪಡೆದರು. ಜೆರಾಲ್ಡ್ ಕೊಯೆಟ್ಜಿ ಎರಡು ಹಾಗೂ ಲುಂಗಿ ಎನ್ಗಿಡಿ ಒಂದು ವಿಕೆಟ್ ಕಿತ್ತರು. ಈ ಪಂದ್ಯ ಗೆದ್ದು ಸೆಮಿಫೈನಲ್ ಪ್ರವೇಶದ ಸಾಧ್ಯತೆಯನ್ನು ಜೀವಂತವಾಗಿರಿಸಿಕೊಳ್ಳಲು ಪಾಕಿಸ್ತಾನ ಹೋರಾಟ ನಡೆಸುತ್ತಿದೆ.ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಲು ದಕ್ಷಿಣ ಆಫ್ರಿಕಾ ಹವಣಿಸುತ್ತಿದೆ. ಆಡಿರುವ 5 ಪಂದ್ಯಗಳಲ್ಲಿ 4 ರಲ್ಲಿ ಗೆದ್ದಿರುವ ಈ ತಂಡ ಸದ್ಯ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ. ಈ ಪಂದ್ಯ ಜಯಿಸಿದರೆ, ರನ್ರೇಟ್ ಆಧಾರದಲ್ಲಿ ಭಾರತವನ್ನು ಹಿಂದಿಕ್ಕುವ ಅವಕಾಶವಿದೆ.ಮೊದಲೆರಡು ಪಂದ್ಯಗಳಲ್ಲಿ ನೆದರ್ಲೆಂಡ್ಸ್ ಹಾಗೂ ಶ್ರೀಲಂಕಾ ವಿರುದ್ಧ ಗೆದ್ದಿದ್ದ ಪಾಕ್, ನಂತರ ಹ್ಯಾಟ್ರಿಕ್ ಸೋಲು ಕಂಡು ಪಾಯಿಂಟ್ ಪಟ್ಟಿಯಲ್ಲಿ 6ನೇ ಸ್ಥಾನದಲ್ಲಿ ಉಳಿದಿದೆ.