ಪಲ್ಲೆಕೆಲೆ: ಪಾಕಿಸ್ತಾನ ತಂಡವು ಶನಿವಾರ ಟಿ20 ವಿಶ್ವಕಪ್ನ ಸೂಪರ್ ಎಂಟರ ತನ್ನ ಕೊನೆಯ ಪಂದ್ಯದಲ್ಲಿ 5 ರನ್ಗಳಿಂದ ಶ್ರೀಲಂಕಾ ತಂಡವನ್ನು ಮಣಿಸಿತು. ಆದರೆ, ಈ ರೋಚಕ ಪಂದ್ಯದಲ್ಲಿ ಗೆದ್ದರೂ ಪಾಕ್ನ ಸೆಮಿಫೈನಲ್ ಕನಸು ಸಾಕಾರಗೊಳ್ಳಲಿಲ್ಲ.
ಪಾಕಿಸ್ತಾನ ತಂಡವು ಸೆಮಿಫೈನಲ್ಗೆ ಅರ್ಹತೆ ಪಡೆಯಲು ಆತಿಥೇಯ ತಂಡವನ್ನು 147 ರನ್ಗಳ ಒಳಗೆ ನಿಯಂತ್ರಿಸಬೇಕಿತ್ತು. ಆದರೆ,
213 ರನ್ಗಳ ಗುರಿ ಎದುರಿಸಿದ ಲಂಕಾ ತಂಡವು ಕೊನೆಯಲ್ಲಿ ತೀವ್ರ ಹೋರಾಟ ನಡೆಸಿದರೂ 20 ಓವರ್ಗಳಲ್ಲಿ 6 ವಿಕೆಟ್ಗೆ 207 ರನ್ ಗಳಿಸಲಷ್ಟೇ ಶಕ್ತವಾಯಿತು.
ಆತಿಥೇಯರ ಗೆಲುವಿಗೆ ಕೊನೆಯ ಓವರ್ನಲ್ಲಿ 28 ರನ್ ಬೇಕಿತ್ತು. ವೇಗಿ ಶಾಹೀನ್ ಶಾ ಅಫ್ರಿದಿ ಹಾಕಿದ ಓವರ್ನ ಮೊದಲ ನಾಲ್ಕು ಎಸೆತಗಳಲ್ಲಿ ನಾಯಕ ದಸೂನ್ ಶನಕ (ಔಟಾಗದೇ 76;31ಎ) ಅವರು ಹ್ಯಾಟ್ರಿಕ್ ಸಿಕ್ಸರ್ ಸೇರಿ 22 ರನ್ ಬಾಚಿದರು. ಆದರೆ, ನಂತರದ ಎರಡು ಎಸೆತಗಳಲ್ಲಿ ರನ್ ಬರಲಿಲ್ಲ. ಹೀಗಾಗಿ ಲಂಕಾ ನಿರಾಸೆಯೊಂದಿಗೆ ಅಭಿಯಾನ ಮುಗಿಸಿತು. ಎರಡನೇ ಗುಂಪಿನಲ್ಲಿ ನ್ಯೂಜಿಲೆಂಡ್ ತಂಡವು ನೆಟ್ ರನ್ರೇಟ್ ಆಧಾರದಲ್ಲಿ ಎರಡನೇ ಸ್ಥಾನ ಪಡೆದು ಸೆಮಿಫೈನಲ್ಗೆ ಮುನ್ನಡೆಯಿತು. ಇದೇ ಗುಂಪಿನಿಂದ ಇಂಗ್ಲೆಂಡ್ ತಂಡವು ಹ್ಯಾಟ್ರಿಕ್ ಗೆಲುವಿನೊಂದಿಗೆ ಈ ಮೊದಲೇ ನಾಕೌಟ್ ಪ್ರವೇಶಿಸಿದೆ. ಲಂಕಾ ಪರ ಪವನ್ ರಥನಾಯಕೆ (58;37ಎ, 4×4, 6×3) ಮತ್ತು ಕೆಳ ಕ್ರಮಾಂಕದಲ್ಲಿ ಶನಕ ದಿಟ್ಟ ಪ್ರತಿರೋಧ ತೋರಿದರು. ಎರಡು ಬೌಂಡರಿ ಮತ್ತು ಎಂಟು ಭರ್ಜರಿ ಸಿಕ್ಸರ್ ಬಾರಿಸಿದ ಶನಕ ಕೊನೆಯ 12 ಎಸೆತಗಳಲ್ಲಿ 40 ರನ್ ಸೂರೆಗೈದು, ಗೆಲುವಿನ ಆಸೆ ಚಿಗುರಿಸಿದ್ದರು. ಆದರೆ, ಅಲ್ಪ ಅಂತರದಿಂದ ಸೋತಿತು.
ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್ಗೆ ಇಳಿಸಲ್ಪಟ್ಟ ಪಾಕ್ ತಂಡವು ಭರ್ಜರಿ ಆರಂಭ ಪಡೆಯಿತು.
ಆರಂಭ ಆಟಗಾರರಾದ ಸಾಹಿಬ್ಝಾದಾ ಫರ್ಹಾನ್ (100) ಮತ್ತು ಫಖರ್ ಜಮಾನ್ (84) ಅವರ ದಾಖಲೆಯ ಜೊತೆಯಾಟದ ನೆರವಿನಿಂದ ಉತ್ತಮ ಮೊತ್ತ ಗಳಿಸಲು ಸಾಧ್ಯವಾಯಿತು. ಮೊದಲ ವಿಕೆಟ್ಗೆ ದಾಖಲೆಯ 176 ರನ್ ಸೇರಿಸಿದರು. ಅದರಿಂದಾಗಿ 8 ವಿಕೆಟ್ಗೆ 212 ರನ್ ಗಳಿಸಿತು. ಸಾಹಿಬ್ಝಾದಾ ಫರ್ಹಾನ್ ಜಮಾನ್ ನಿರ್ಗಮನದ ನಂತರ ವಿಕೆಟ್ಗಳು ಉದುರಿದವು. ಎಂಟು ವಿಕೆಟ್ಗಳು 36 ರನ್ ಅಂತರದಲ್ಲಿ ಉರುಳಿದವು. ಜಮಾನ್– ಫರ್ಹಾನ್ ಬಿಟ್ಟರೆ ಉಳಿದ ಯಾರೂ ಎರಡಂಕಿ ಮೊತ್ತ ಗಳಿಸಲಿಲ್ಲ. ಲಂಕಾ ಕಡೆ ಮಧುಶಂಕಾ 33 ರನ್ನಿಗೆ 3 ವಿಕೆಟ್ ಪಡೆದರು.
ಸ್ಕೋರುಗಳು:
ಪಾಕಿಸ್ತಾನ: 20 ಓವರುಗಳಲ್ಲಿ 8 ವಿಕೆಟ್ಗೆ 212 (ಸಾಹಿಬ್ಝಾದ ಫರ್ಹಾನ್ 100, ಫಖರ್ ಜಮಾನ್ 84; ಮಧುಶಂಕ 33ಕ್ಕೆ3, ಶನಕ 42ಕ್ಕೆ2). ಶ್ರೀಲಂಕಾ: 20 ಓವರ್ಗಳಲ್ಲಿ 6 ವಿಕೆಟ್ಗೆ 207 (ಪವನ್ ರಥನಾಯಕೆ 58, ದಸೂನ್ ಶನಕ ಔಟಾಗದೇ 76; ಅಬ್ರಾರ್ ಅಹ್ಮದ್ 23ಕ್ಕೆ 3). ಪಂದ್ಯದ ಆಟಗಾರ: ಸಾಹಿಬ್ಝಾದ ಫರ್ಹಾನ್.








