ಕೋಲ್ಕತ್ತಾ: ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಪಾಕಿಸ್ತಾನ 7 ವಿಕೆಟ್ ಗಳಿಂದ ಜಯ ಸಾಧಿಸಿದೆ. ಸತತ ನಾಲ್ಕು ಸೋಲಿನ ಬಳಿಕ ಗೆಲುವಿನ ಟ್ರಾಕ್ಗೆ ಮರಳಿದ ಪಾಕಿಸ್ತಾನ ಸೆಮಿ ಆಸೆ ಜೀವಂತವಾಗಿರಿಸಿತು. ಫಖರ್ ಝಮಾನ್ ಹಾಗೂ ಅಬ್ದುಲ್ಲಾ ಶಫೀಕ್ ಆಕರ್ಷಕ ಅರ್ಧಶತಕ ನೆರವಿಂದ ಪಾಕ್ ತಂಡ ಭರ್ಜರಿ ಜಯ ದಾಖಲಿಸಿತು. ಮೊದಲು ಬ್ಯಾಟ್ ಮಾಡಿದ ಬಾಂಗ್ಲಾದೇಶ 204 ರನ್ಗೆ
ಆಲ್ ಔಟ್ ಆಯಿತು. ಗುರಿ ಬೆನ್ನಟ್ಟಿದ ಪಾಕಿಸ್ತಾನ 33.3 ಓವರ್ ನಲ್ಲಿಯೇ 3 ವಿಕೆಟ್ ಕಳೆದುಕೊಂಡು ಗುರಿ ತಲುಪಿತು. ಬಾಂಗ್ಲಾದೇಶ ತಾನಾಡಿದ 7 ಪಂದ್ಯಗಳಲ್ಲಿ 6 ಸೋತು ಬಹುತೇಕ ಟೂರ್ನಿಯಿಂದ ಹೊರಬಿದ್ದಿದೆ. ಸಾಧಾರಣ ಗುರಿ ಬೆನ್ನಟ್ಟಿದ ಪಾಕಿಸ್ತಾನ ತಂಡಕ್ಕೆ ಆರಂಭಿಕರು ಭರ್ಜರಿ ಆರಂಭ ಒದಗಿಸಿದರು. ಅಬ್ದುಲ್ಲಾ ಶಫೀಕ್ ಹಾಗೂ ಫಖರ್ ಝಮಾನ್ ಜೋಡಿ ಮೊದಲ ವಿಕೆಟ್ ಪತನಕ್ಕೆ 128 ರನ್ ಜೊತೆಯಾಟ ನೀಡಿದರು. 9 ಬೌಂಡರಿ 2 ಸಿಕ್ಸರ್ ಸಹಿತ 68 ರನ್ ಬಾರಿಸಿ ಅಬ್ದುಲ್ಲಾ ಶಫೀಕ್, 7 ಭರ್ಜರಿ ಸಿಕ್ಸರ್ 3 ಬೌಂಡರಿ ಸಹಿತ ಸ್ಟೋಟಕ ಬ್ಯಾಟಿಂಗ್ ಪ್ರದರ್ಶಿಸಿದ ಫಖರ್ ಝಮಾನ್ 81 ರನ್ ಬಾರಿಸಿ ಗೆಲುವಿನ ರುವಾರಿ ಎನಿಸಿದರು. ಮುಹಮ್ಮದ್ ರಿಝ್ವಾನ್ 26 ರನ್ ಗಳಿಸಿದರೆ ಇಫ್ತಿಕಾರ್ ಅಹ್ಮದ್ 17 ರನ್ ಗಳಿಸಿ ಗುರಿ ಮುಟ್ಟಿದರು
ಬಾಂಗ್ಲಾದೇಶ ಪರ ಮೆಹಿದಿ ಹಸನ್ ಮಿರಾಝ್ 3 ವಿಕೆಟ್ ಪಡೆದರು. ಮೊದಲು ಬ್ಯಾಟ್ ಮಾಡಿದ ಬಾಂಗ್ಲಾ ಪರ ಲಿಟನ್ ದಾಸ್ 45, ಮುಹಮ್ಮದುಲ್ಲಾ 56 ರನ್, ನಾಯಕ ಶಾಕಿಬ್ ಉಲ್ ಹಸನ್ 43 ರನ್ ಗಳಿಸಿದರು. ತೌಹೀದ್ ಹೃದೋಯ್ 7 ,ಮೆಹಿದಿ ಹಸನ್ 25 ,ತಸ್ಕಿನ್ ಅಹ್ಮದ್ 6 ರನ್ ಗಳಿಸಿದರು.
ಪಾಕಿಸ್ತಾನ ಪರ ಶಾಹೀನ್ ಅಫ್ರಿದಿ, ಮುಹಮ್ಮದ್ ವಾಸಿಮ್ ತಲಾ 3 ವಿಕೆಟ್, ಹಾರೀಸ್ ರವೂಫ್ 2 ವಿಕೆಟ್ ಹಾಗೂ ಇಫ್ತಿಕಾರ್ ಅಹ್ಮದ್, ಉಸಾಮ ಮಿರ್ ತಲಾ ಒಂದು ವಿಕೆಟ್ ಪಡೆದುಕೊಂಡರು.









