ಸುಳ್ಯ:ಬಹು ಉಪಯೋಗಿ ರಸ್ತೆಯಾದ ಸುಳ್ಯ-ಪೈಚಾರ್- ಬೆಳ್ಳಾರೆ- ನಿಂತಿಕಲ್ಲು ರಸ್ತೆಯ ಅಭಿವೃದ್ಧಿಗೆ ಒಟ್ಟು 16 ಕೋಟಿ ರೂ.ಅನುದಾನ ಮಂಜೂರಾಗಿದೆ. ಕೇಂದ್ರ ರಸ್ತೆ ಅಭಿವೃದ್ಧಿ ನಿಧಿಯಿಂದ (ಸಿಆರ್ಐಎಫ್) 6 ಕೋಟಿ ಹಾಗೂ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ (ಎಸ್ಎಚ್ಡಿಪಿ)ಯಡಿಯಲ್ಲಿ 10 ಕೋಟಿ ಅನುದಾನ ಮಂಜೂರಾಗಿದ್ದು ಟೆಂಡರ್ ಹಂತದಲ್ಲಿದೆ ಎಂದು ಇಂಜಿನಿಯರ್ಗಳು ಮಾಹಿತಿ ನೀಡಿದ್ದಾರೆ. ಸುಳ್ಯ-ಪೈಚಾರ್- ಬೆಳ್ಳಾರೆ- ನಿಂತಿಕಲ್ಲು- ದಿಡುಪೆ ರಾಜ್ಯ ಹೆದ್ದಾರಿಯಲ್ಲಿ
ಸಿಆರ್ಐಎಫ್ 3.72 ಕೋಟಿ ಅನುದಾನದಲ್ಲಿ ನಿಂತಿಕಲ್ಲು ಜಂಕ್ಷನ್ನಿಂದ ಬೆಳ್ಳಾರೆ ತನಕ 6.2 ಕಿ.ಮಿ.ಸಂಪೂರ್ಣ ಮರು ಡಾಮರೀಕರಣ ಆಗಲಿದೆ. ಸಿಆರ್ಎಫ್ 2.28 ಕೋಟಿ ಅನುದಾನದಲ್ಲಿ ದರ್ಖಾಸ್ ನಿಂದ ಬೇಂಗಮಲೆ ಮಧ್ಯೆ 3.8 ಕಿ.ಮಿ.ರಸ್ತೆ ಅಭಿವೃದ್ಧಿ ಆಗಲಿದೆ. 5.5 ಮೀ.ಅಗಲದಲ್ಲಿ ರಸ್ತೆ ಮರು ಡಾಮರೀಕರಣ ನಡೆಯಲಿದೆ. ಕಾಮಗಾರಿಯ ಟೆಂಡರ್ ಕರೆಯಲಾಗಿದೆ ಎಂದು ರಾಷ್ಟ್ರೀಯ ಹೆದ್ದಾರಿ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಜಿತೇಂದ್ರ ಹಾಗೂ ಸಹಾಯಕ ಇಂಜಿನಿಯರ್ ಗುರುಪ್ರಸಾದ್ ಮಾಹಿತಿ ನೀಡಿದ್ದಾರೆ.
ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ (ಎಸ್ಎಚ್ಡಿಪಿ)ಯಡಿಯಲ್ಲಿ 10 ಕೋಟಿ ಅನುದಾನ ಮಂಜೂರಾಗಿದ್ದು ಬೆಳ್ಳಾರೆಯಿಂದ ದರ್ಖಾಸ್ ತನಕ 3.5 ಕಿ.ಮಿ. ರಸ್ತೆ ಸಂಪೂರ್ಣ ಮರು ನಿರ್ಮಾಣ ಆಗಲಿದೆ. 7 ಮೀಟರ್ ಅಗಲದಲ್ಲಿ ದ್ವಿಪಥ ರಸ್ತೆ ನಿರ್ಮಾಣ ಆಗಲಿದೆ. ಮೋರಿಗಳ ನಿರ್ಮಾಣ, ಆಯ್ದ ಭಾಗದಲ್ಲಿ ಚರಂಡಿ ನಿರ್ಮಾಣ, ರಸ್ತೆ ಸುರಕ್ಷಾ ಕಾಮಗಾರಿಗಳು ನಡೆಯಲಿದೆ. ಕಾಮಗಾರಿ ಟೆಂಡರ್ ಹಂತದಲ್ಲಿ ಇದೆ ಎಂದು ಲೋಕೋಪಯೋಗಿ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಗೋಪಾಲ್ ಮಾಹಿತಿ ನೀಡಿದ್ದಾರೆ.ಡಿ.15ರ ಬಳಿಕ ಕಾಮಗಾರಿ ಆರಂಭಗೊಳ್ಳಲಿದೆ.