ಸುರತ್ಕಲ್: ಕಾಂಗ್ರೆಸ್ ರೋಡ್ ಶೋ ಸೋಮವಾರ ಸುರತ್ಕಲ್, ಮುಕ್ಕಾ, ಕೃಷ್ಣಾಪುರ, ಚಿತ್ರಾಪುರ, ಕಾಟಿಪಳ್ಳ, ಚೊಕ್ಕಬೆಟ್ಟು, ಪಣಂಬೂರು, ಕೂಳೂರು, ಕಾವೂರು, ಕುಂಜತ್ತಬೈಲ್ ಮೊದಲಾದ ಪ್ರದೇಶಗಳಲ್ಲಿ ಸಂಚರಿಸಿತು.ಅಭ್ಯರ್ಥಿ ಪದ್ಮರಾಜ್ ಆರ್. ಪೂಜಾರಿ ಅವರ ಪರವಾಗಿ ನಡೆದ ರೋಡ್ ಶೋನಲ್ಲಿ ಅಭ್ಯರ್ಥಿ ತೆರೆದ ವಾಹನದಲ್ಲಿ ಸಾಗಿದರು. ಕೆಲ ಪ್ರದೇಶಗಳಲ್ಲಿ
ತೆರೆದ ವಾಹನದಿಂದ ಇಳಿದು, ನೇರವಾಗಿ ಮತದಾರರ ಬಳಿಗೆ ತೆರಳಿ ಮಾತನಾಡಿಸಿದರು. ಈ ಸಂದರ್ಭ ಮತದಾರರು, ಯುವಕ – ಯುವತಿಯರು ಕೈಕುಲುಕಿ ಶುಭಹಾರೈಸಿದರು. ಇನ್ನೂ ಕೆಲವರು ಸೆಲ್ಫಿ ಕ್ಲಿಕ್ಕಿಸಿಕೊಂಡು ಹರ್ಷಿಸಿದರು.
ಸೂರ್ಯ ನೆತ್ತಿ ಮೇಲೆ ಬರುತ್ತಿದ್ದಂತೆ ಸುಡುಸುಡುವ ಅನುಭವ. ಆದರೂ ಅಭ್ಯರ್ಥಿ ತಮ್ಮ ಊರಿಗೆ ಬಂದ ಸಂಭ್ರಮದಲ್ಲಿ ಕಾರ್ಯಕರ್ತರು ಬಿಸಿಲಿನ ಪ್ರಖರತೆಯನ್ನೇ ಮರೆತುಬಿಟ್ಟು, ರೋಡ್ ಶೋ ಜೊತೆ ಸೇರಿಕೊಂಡರು. ಹೆಚ್ಚಿನ ಪ್ರದೇಶಗಳಲ್ಲಿ ಅಭ್ಯರ್ಥಿಗೆ ಹೂ ಮಾಲೆ ಹಾಕಿ, ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಧಾರ್ಮಿಕ ಕ್ಷೇತ್ರಗಳ ಭೇಟಿ:
ಮುಕ್ಕ ಶ್ರೀ ರಾಮ ಮಂದಿರ, ಪಡ್ರೆ ಶ್ರೀ ಧೂಮಾವತಿ ಬಂಟರ ದೈವಸ್ಥಾನ ಭಂಡಾರ ಮನೆ, ಮುಕ್ಕ ಶ್ರೀ ಸತ್ಯಧರ್ಮ ದೇವಿ ದೇವಸ್ಥಾನ, ಕಾಟಿಪಳ್ಳ ಶ್ರೀ ಕ್ಷೇತ್ರ ಗಣೇಶಪುರ ಶ್ರೀ ಮಹಾಗಣಪತಿ ದೇವಸ್ಥಾನ, ಚಿತ್ರಾಪುರ ಪಣಂಬೂರು ಶ್ರೀ ಮಹಾವಿಷ್ಣು ಭಜನಾ ಮಂದಿರ, ಕುಂಜತ್ತಬೈಲ್ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನ ಸದ್ಭಾವನಾ ಸಮಿತಿ ಹಾಗೂ ಮುಕ್ಕ ಜುಮ್ಮಾ ಮಸೀದಿ, ಚೊಕ್ಕಬೆಟ್ಟು ಮುಹಿಯುದ್ದೀನ್ ಜುಮಾ ಮಸೀದಿಗೆ ಭೇಟಿ ನೀಡಿ, ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಕೆಪಿಸಿಸಿ ಪ್ರ. ಕಾರ್ಯದರ್ಶಿ ಇನಾಯತ್ ಅಲಿ, ಪ್ರತಿಭಾ ಕುಳಾಯಿ ಮತ್ತಿತರ ನಾಯಕರು ಉಪಸ್ಥಿತರಿದ್ದರು.