ಸುಳ್ಯ: ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ಪ್ರತ್ಯೇಕ ಪ್ರತ್ಯೇಕವಾಗಿ ನಡೆಸಲುದ್ದೇಶಿಸಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗಳ ಜಾತಿ ಕಾಲಂನಲ್ಲಿ GOWDA, ಉಪ ಜಾತಿ ಕಾಲಂನಲ್ಲಿ ಅರೆಭಾಷೆ ಗೌಡ, ಮಾತೃಭಾಷೆ ಕಾಲಂನಲ್ಲಿ ಅರೆಭಾಷೆ ಎಂದು ನಮೂದು ಮಾಡುವಂತೆ ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಕೊಡಗು ಗೌಡ ಸಮಾಜಗಳ ಒಕ್ಕೂಟದ ಸಭೆಯಲ್ಲಿ ಸರ್ವಾನುಮತದಿಂದ
ತೀರ್ಮಾನಿಸಲಾಯಿತು ಎಂದು ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಶ್ರೀ ಸದಾನಂದ ಮಾವಜಿ ತಿಳಿಸಿದ್ದಾರೆ.ಬೆಂಗಳೂರಿನ ಕೊಡಗು ಗೌಡ ಸಮಾಜ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಕರ್ನಾಟಕ ಭಾಗವಹಿಸಿದ್ದ ಸದಾನಂದ ಮಾವಜಿರ ಈ ವಿಷಯಗಳಿಗೆ ಸಹಮತ ವ್ಯಕ್ತಪಡಿಸಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೂ ಈ ರೀತಿಯಲ್ಲಿ ಗೌಡ ಸಮಾಜಗಳ ಸಭೆ ನಡೆಸಿ ಈ ಕುರಿತಂತೆ ಅಲ್ಲಿಯೂ ಒಮ್ಮತದ ತೀರ್ಮಾನ ಕೈಗೊಳ್ಳಬೇಕಾಗಿದೆ ಎಂದು ಹೇಳಿದರು. ಸುಳ್ಯ ಮತ್ತು ಮಡಿಕೇರಿಯಲ್ಲಿ ತಕ್ಷಣ ಸಭೆ ನಡೆಸಿ ಮಾಹಿತಿ ವಿನಿಮಯ ಮಾಡುವಂತೆ ಸಭೆ ತೀರ್ಮಾನಿಸಿತು. ಈ ದಿಸೆಯಲ್ಲಿ ಈ ವಿಚಾರವನ್ನು ಪ್ರಚುರ ಪಡಿಸಿ ಜನಾಂಗದ ವ್ಯಕ್ತಿಗಳಿಗೆ ತಲುಪಿಸಲು ಎಲ್ಲ ಗೌಡ ಸಮಾಜಗಳ ಅಧ್ಯಕ್ಷರ ಸಮಿತಿ ಮಾಡಿ ಅವರಿಗೆ ಜವಾಬ್ದಾರಿ ವಹಿಸುವಂತೆ ಸಭೆ ತೀರ್ಮಾನಿಸಿದೆ ಎಂದು ಸದಾನಂದ ಮಾವಜಿ ಹೇಳಿದ್ದಾರೆ.

ಸಭೆಯನ್ನು ಉದ್ದೇಶಿಸಿ ರಾಜ್ಯದ ಮಾಜಿ ಮುಖ್ಯಮಂತ್ರಿ ಡಿ ವಿ ಸದಾನಂದ ಗೌಡರು ಮಾತನಾಡಿ ಕೇಂದ್ರ ಮತ್ತು ರಾಜ್ಯ ಸರಕಾರದ ಜಾತಿ ಗಣತಿ ಮತ್ತು ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸಮೀಕ್ಷೆಯ ಜಾಗೃತಿ ಅಭಿಯಾನದ ಸಮೀಕ್ಷೆಯಲ್ಲಿ ಎಲ್ಲರೂ ಭಾಗಿಯಾಗಬೇಕು ಮತ್ತು ಸೂಕ್ತವಾಗಿ ಆಲೋಚಿಸಿ ನೋಂದಾವಣೆ ಮಾಡಬೇಕೆಂದು ಕರೆ ನೀಡಿದರು. ನಮ್ಮ ಜನಾಂಗಕ್ಕೆ ಹಿಂದಿನಿಂದ ಸಿಗುತ್ತಿರುವ ಸೌಲಭ್ಯವನ್ನು ಉಳಿಸಿಕೊಳ್ಳಬೇಕು ಮತ್ತು ಮುಂದೆ ಯಾವುದೇ ತೊಂದರೆಗೆ ಒಳಪಡದಂತೆ ನಿರ್ಣಯ ಆಗಬೇಕೆಂಬ ಅಭಿಪ್ರಾಯ ವ್ಯಕ್ತಪಡಿಸಿದರು.
ಮಾಜಿ ವಿಧಾನಸಭಾ ಅದ್ಯಕ್ಷ ಕೆ ಜಿ ಬೋಪಯ್ಯ , ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಒಕ್ಕೂಟದ ಉಪಾಧ್ಯಕ್ಷ ಡಾ. ತೇನನ ರಾಜೇಶ್, ಪಟ್ಟಡ ಶಿವಕುಮಾರ ಮಾತನಾಡಿದರು.
ಎಲ್ಲಾ ಸಲಹಾ ಸಮಿತಿ ಸದಸ್ಯರು, ಸಮಾಜ ಚಿಂತಕರು, ಸಮಾಜಗಳ ಅದ್ಯಕ್ಷ ಮತ್ತು ಪದಾಧಿಕಾರಿಗಳು ಒಳಗೊಂಡ ಸಭೆಯ ಅಧ್ಯಕ್ಷತೆಯನ್ನು ಕೊಡಗು ಗೌಡ ಸಮಾಜಗಳ ಒಕ್ಕೂಟದ ಅಧ್ಯಕ್ಷ ಆನಂದ ಕರಂದ್ಲಾಜೆ ವಹಿಸಿದ್ದರು. ಬೆಂಗಳೂರಿನ ಕೊಡಗು ಗೌಡ ಸಮಾಜದ ಅಧ್ಯಕ್ಷ ಕೇಕಡ ನಾಣಯ್ಯ ಸ್ವಾಗತಿಸಿದರು. ಕೊಡಗು ಗೌಡ ಸಮಾಜ ಬೆಂಗಳೂರು ಇದರ ಕಾರ್ಯದರ್ಶಿ ಬಿಪಿನ್ ಬೇಕಲ್ ವಂದಿಸಿದರು.












