ರಾಂಚಿ: ಭಾರತ ತಂಡವು ಶನಿವಾರ ನಡೆಯಲಿರುವ ದಕ್ಷಿಣ ಆಫ್ರಿಕಾ ಎದುರಿನ ಸರಣಿಯ ಮೊದಲ ಪಂದ್ಯದಲ್ಲಿ ಕಣಕ್ಕಿಳಿಯಲಿದೆ. ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರು ಆಡಲಿರುವುದು ತಂಡದ ಬಲ ಹೆಚ್ಚಿದೆ.2027ರಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿಗಾಗಿ ತಂಡದ ಪೂರ್ವಸಿದ್ಧತೆಯ ಭಾಗವಾಗಿ ಈ ಟೂರ್ನಿಯನ್ನು
ನೋಡಲಾಗುತ್ತಿದೆ. ಮುಂದಿನ ಎರಡು ತಿಂಗಳುಗಳ ಅವಧಿಯಲ್ಲಿ ಭಾರತ ತಂಡವು ಒಟ್ಟು ಆರು ಏಕದಿನ ಪಂದ್ಯಗಳಲ್ಲಿ ಆಡಲಿದೆ. ದಕ್ಷಿಣ ಆಫ್ರಿಕಾ ಎದುರಿನ ಸರಣಿ ಮತ್ತು ನ್ಯೂಜಿಲೆಂಡ್ ವಿರುದ್ಧ ಮೂರು ಪಂದ್ಯಗಳನ್ನು ಜನವರಿಯಲ್ಲಿ ಆಡಲಿದೆ.ಟೆಸ್ಟ್ ಕ್ರಿಕೆಟ್ ಸರಣಿಯಲ್ಲಿ ತೆಂಬಾ ಬವುಮಾ ಬಳಗದ ಎದುರು ಆತಿಥೇಯ ತಂಡವು ಹೀನಾಯ ಸೋಲು ಅನುಭವಿಸಿತ್ತು. ಗಾಯದಿಂದಾಗಿ ಶುಭಮನ್ ಗಿಲ್ ಅವರು ಕ್ರಿಕೆಟ್ ಸರಣಿಯ ಮಧ್ಯದಲ್ಲಿಯೇ ನಿರ್ಗಮಿಸಿದ್ದರು.ಈ ಸರಣಿಯಲ್ಲಿಯೂ ಆಡುತ್ತಿಲ್ಲ. ಆದ್ದರಿಂದ ನಾಯಕತ್ವದ ಹೊಣೆ ಕೆ.ಎಲ್.ರಾಹುಲ್ ಅವರ ಹೆಗಲಿಗೇರಿದೆ. ಅವರು ತಮ್ಮ ಬ್ಯಾಟಿಂಗ್ ಲಯವನ್ನೂ ಕಂಡುಕೊಳ್ಳುವ ಸವಾಲು ಇದೆ.
ಗಿಲ್ ಮತ್ತು ಶ್ರೇಯಸ್ ಅಯ್ಯರ್ ಅವರಿಬ್ಬರೂ ಇಲ್ಲದ ಕಾರಣ ಸ್ಪಿನ್ ಆಲ್ರೌಂಡರ್ ವಾಷಿಂಗ್ಟನ್ ಸುಂದರ್, ಮಧ್ಯಮವೇಗ–ಆಲ್ರೌಂಡರ್ ನಿತಿನ್ ಕುಮಾರ್ ರೆಡ್ಡಿ ಅವರು ಮಧ್ಯಮ ಕ್ರಮಾಂಕಕ್ಕೆ ಬಲ ತುಂಬುವ ಭರವಸೆ ಇದೆ. ತಿಲಕ್ ವರ್ಮಾ, ರಿಷಭ್ ಪಂತ್ ಮತ್ತು ನಾಯಕ ರಾಹುಲ್ ಅವರ ಆಟವೂ ಮುಖ್ಯವಾಗಲಿದೆ. ರೋಹಿತ್ ಮತ್ತು ಜೈಸ್ವಾಲ್ ಅವರು ಇನಿಂಗ್ಸ್ ಆರಂಭಿಸುವುದು ಖಚಿತ. ಮೂರನೇ ಕ್ರಮಾಂಕದಲ್ಲಿ ವಿರಾಟ್ ಕೊಹ್ಲಿ ಆಟ ನೋಡುವ ಅವಕಾಶ ಅಭಿಮಾನಿಗಳಿಗೆ ಸಿಗಲಿದೆ.
ಬೌಲಿಂಗ್ ವಿಭಾಗವು ವೇಗಿಗಳಾದ ಪ್ರಸಿದ್ಧ ಕೃಷ್ಣ, ಅರ್ಷದೀಪ್ ಸಿಂಗ್,ಹರ್ಷಿತ್ ರಾಣಾ ಮತ್ತು ಸ್ಪಿನ್ನರ್ ಕುಲದೀಪ್ ಯಾದವ್ ಅವರ ಮೇಲೆ ಅವಲಂಬಿತವಾಗಿದೆ. ಜಸ್ಪ್ರೀತ್ ಬೂಮ್ರಾ ಮತ್ತು ಮೊಹಮ್ಮದ್ ಸಿರಾಜ್ ಅವರ ಗೈರಿನಲ್ಲಿ ಉಳಿದ ಬೌಲರ್ಗಳ ಹೊಣೆ ಹೆಚ್ಚಿದೆ.ಟೆಸ್ಟ್ ಸರಣಿ ಗೆದ್ದು ಆತ್ಮವಿಶ್ವಾಸದಲ್ಲಿರುವ ಪ್ರವಾಸಿ ಬಳಗವು ಇನ್ನೊಂದು ಜಯದ ಛಲದಲ್ಲಿದೆ. ಏಡನ್ ಮರ್ಕರಂ, ಕ್ವಿಂಟನ್ ಡಿಕಾಕ್, ತೆಂಬಾ ಹಾಗೂ ಡೆವಾಲ್ಡ್ ಬ್ರೆವಿಸ್ ಅವರು ಬ್ಯಾಟಿಂಗ್ ಶಕ್ತಿಯಾಗಿದ್ದಾರೆ. ಮಾರ್ಕೊ ಯಾನ್ಸೆನ್, ಲುಂಗಿ ಎನ್ಗಿಡಿ ಮತ್ತು ಕಗಿಸೊ ರಬಾಡ ಅವರಿಗೆ ಭಾರತದ ಪಿಚ್ಗಳ ಪರಿಚಯ ಇರುವುದರಿಂದ ಕಠಿಣ ಸವಾಲೊಡ್ಡುವ ಸಾಧ್ಯತೆಗಳು ಹೆಚ್ಚಿವೆ.
ತಂಡಗಳು
ಭಾರತ: ಕೆ.ಎಲ್. ರಾಹುಲ್ (ನಾಯಕ) ರೋಹಿತ್ ಶರ್ಮಾ ಯಶಸ್ವಿ ಜೈಸ್ವಾಲ್ ವಿರಾಟ್ ಕೊಹ್ಲಿ ತಿಲಕ್ ವರ್ಮಾ ರಿಷಭ್ ಪಂತ್ (ವಿಕೆಟ್ಕೀಪರ್) ವಾಷಿಂಗ್ಟನ್ ಸುಂದರ್ ರವೀಂದ್ರ ಜಡೇಜ ಕುಲದೀಪ್ ಯಾದವ್ ನಿತೀಶ್ ಕುಮಾರ್ ರೆಡ್ಡಿ ಹರ್ಷಿತ್ ರಾಣಾ ಋತುರಾಜ್ ಗಾಯಕವಾಡ ಪ್ರಸಿದ್ಧ ಕೃಷ್ಣ ಅರ್ಷದೀಪ್ ಸಿಂಗ್ ಧ್ರುವ ಜುರೇಲ್.
ದಕ್ಷಿಣ ಆಫ್ರಿಕಾ: ತೆಂಬಾ ಬವುಮಾ (ನಾಯಕ) ಏಡನ್ ಮರ್ಕರಂ ಡಿವಾಲ್ಡ್ ಬ್ರೆವಿಸ್ ನಾಂದ್ರೆ ಬರ್ಗರ್ ಕ್ವಿಂಟನ್ ಡಿ ಕಾಕ್ ಮಾರ್ಕೊ ಯಾನ್ಸೆನ್ ಟೋನಿ ಡಿ ಝಾರ್ಜಿ ರುಬಿನ್ ಹರ್ಮನ್ ಒಟ್ನೀಲ್ ಬಾರ್ಟ್ಮನ್ ಕಾರ್ಬಿನ್ ಬಾಷ್ ಮ್ಯಾಥ್ಯೂ ಬ್ರೀಜ್ ಕೇಶವ್ ಮಹಾರಾಜ್ ಲುಂಗಿ ಎನ್ಗಿಡಿ ರಿಯಾನ್ ರಿಕೆಲ್ಟನ್ ಪ್ರೆನೆಲನ್ ಸುಬ್ರಾಯನ್.
ಪಂದ್ಯ ಆರಂಭ: ಮಧ್ಯಾಹ್ನ 1.30.













