ಸುಳ್ಯ: ಸುಳ್ಯ ನಗರದ ಓಡಬಾಯಿ ಭಾಗದಿಂದ ಅಜ್ಜಾವರ ಗ್ರಾಮದ ದೊಡ್ಡೇರಿ ಭಾಗವನ್ನು ಸಂಪರ್ಕಿಸಲು ಪಯಸ್ವಿನಿ ನದಿಗೆ ನಿರ್ಮಿಸಲಾಗಿರುವ ತೂಗುಸೇತುವೆಯ ದುರಸ್ತಿ ಕಾರ್ಯ ಮಂಗಳವಾರದಿಂದ ಆರಂಭಗೊಂಡಿದ್ದು, ಈ ಹಿನ್ನಲೆಯಲ್ಲಿ ಸೆ.3ರಿಂದ ಜನರ ಸಂಚಾರವನ್ನು ಸಂಪೂರ್ಣವಾಗಿ ಸ್ಥಗಿತ ಮಾಡಲು ಸೂಚಿಸಲಾಗಿದೆ.
ಪಯಸ್ವಿನಿ ನದಿಯನ್ನು ಸುಳ್ಯದ ಓಡಬಾಯಿ ಭಾಗದಿಂದ ದೊಡ್ಡೇರಿ ಭಾಗವನ್ನು ಸಂಪರ್ಕಿಸಲು ತೂಗುಸೇತುವೆಯನ್ನು
2006 ರಲ್ಲಿ ಇನ್ಫೋಸಿಸ್ ಮತ್ತು ರೋಟರಿ ವತಿಯಿಂದ ನಿರ್ಮಿಸಲಾಗಿದ್ದು ಬಳಿಕ ತೂಗುಸೇತುವೆ ನಿರ್ವಹಣೆ ಕೊರತೆಯಿಂದ ತೂಗುಸೇತುವೆಯ ಉಪಕರಣಗಳು ತುಕ್ಕು ಹಿಡಿದು ಶಿಥಿಲಾವಸ್ಥೆಗೊಂಡಿತ್ತು. ಇತ್ತೀಚೆಗೆ ಬಾರೀ ಮಳೆಯ ಸಂದರ್ಭದಲ್ಲಿ ತೂಗು ಸೇತುವೆ ಶಿಥಿಲಗೊಂಡ ಹಿನ್ನಲೆಯಲ್ಲಿ ತೂಗುಸೇತುವೆಯ ದುರಸ್ತಿಗೆ 10 ಲಕ್ಷ ಅನುದಾನ ಮಂಜೂರುಗೊಂಡಿತ್ತು. ಅದರಂತೆ ಮಂಗಳವಾರದಿಂದ ತೂಗುಸೇತುವೆಯ ದುರಸ್ತಿ ಕಾರ್ಯ ಆರಂಭಗೊಂಡಿದೆ. ತೂಗುಸೇತುವೆಯ

ಎರಡೂ ಬದಿಯಲ್ಲಿ ಕಿತ್ತು ಹೋಗಿರುವ ಮೆಷ್ (ಸೈಡ್ ನೆಟ್) ನ್ನು ತೆರವು ಮಾಡಿ ಹೊಸ ಮೆಷ್ ಅಳವಡಿಕೆ, ತುಕ್ಕು ಹಿಡಿದ ನೆಟ್, ಬೋಲ್ಟ್ ಬದಲಾವಣೆ, ಪೈಂಟ್ ಅಳವಡಿಕೆ, ದೊಡ್ಡೇರಿ ಭಾಗದಲ್ಲಿ ತೂಗುಸೇತುವೆ ಕೊನೆ ಭಾಗದಲ್ಲಿ ಇಂಟರ್ಲಾಕ್ ಅಳವಡಿಕೆ ಕಾರ್ಯ ನಡೆಯಲಿದೆ.
ತಹಶೀಲ್ದಾರ್ ಭೇಟಿ ಪರಿಶೀಲನೆ.
ತೂಗುಸೇತುವೆ ದುರಸ್ತಿ ಕಾರ್ಯ ನಡೆಯುತ್ತಿರುವ ಸ್ಥಳಕ್ಕೆ ಸುಳ್ಯ ತಹಶೀಲ್ದಾರ್ ಮಂಜುಳಾ ಎಂ.ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಹಾಗೂ ಕಾರ್ಮಿಕರಿಂದ ಮಾಹಿತಿ ಪಡೆದರು. ತೂಗುಸೇತುವೆ ಶಿಥಿಲಗೊಂಡಿರುವುದರಿಂದ ಈಗಾಗಲೇ ಮುಂಜಾಗ್ರತೆ ಕ್ರಮವಾಗಿ ಸಂಚಾರ ನಿರ್ಬಂಧಿಸಲಾಗಿದೆ. ಇದೀಗ ದುರಸ್ತಿ ಕಾರ್ಯ ಆರಂಭಗೊಂಡಿರುವುದರಿಂದ ಕೆಲಸ ಸರಾಗವಾಗಿ ನಡೆಯಲು ಜನ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಲಾಗುವುದು, ಸಾರ್ವಜನಿಕರು ಸಹಕರಿಸಬೇಕು ಎಂದು ಮನವಿ ಮಾಡಿದರು.
ಅಜ್ಜಾವರ ಗ್ರಾ.ಪಂ. ಮಾಜಿ ಅಧ್ಯಕ್ಷೆ ಹಾಲಿ ಸದಸ್ಯೆ ಸತ್ಯಾವತಿ ಬಸವನಪಾದೆ, ಸಣ್ಣ ನೀರಾವರಿ ಇಲಾಖೆಯ ನಿವೃತ್ತ ನೌಕರ ವಾಸುದೇವಾ ನಾಯಕ್, ಗ್ರಾಮಸ್ಥರಾದ ತಿಮ್ಮಣ್ಣ, ಜಗನ್ನಾಥ್, ಚಿದಾನಂದ, ಮತ್ತಿತರರು ಉಪಸ್ಥಿತರಿದ್ದರು.
ತೂಗುಸೇತುವೆ ದುರಸ್ತಿ ಕಾರ್ಯ ನಡೆಯುತ್ತಿರುವುದರಿಂದ ಮುಂಜಾಗ್ರತೆ ಹಾಗೂ ದುರಸ್ತಿ ಕಾರ್ಯವನ್ನು ಉತ್ತಮ ರೀತಿಯಲ್ಲಿ ನಡೆಸಲು ತೂಗುಸೇತುವೆಯಲ್ಲಿ ಮುಂದಿನ ಒಂದು ವಾರದಿಂದ 10 ದಿನಗಳ ವರೆಗೆ (ಕೆಲಸ ಮುಗಿಯುವವರೆಗೆ) ಸಾರ್ವಜನಿಕರ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಲು ತಹಶೀಲ್ದಾರ್ ಸ್ಥಳೀಯ ಗ್ರಾಮ ಆಡಳಿತಾಧಿಕಾರಿ ಶ್ರೀಕಲಾ ಹಾಗೂ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚನೆ ಬೆನ್ನಲ್ಲೆ ಅಧಿಕಾರಿಗಳು ಆಗಮಿಸಿ ಬಂದ್ ಮಾಡಲು ಬೇಕಾದ ಪೂರ್ವ ತಯಾರಿಗಳನ್ನು ನಡೆಸಿದರು.












