ಸುಳ್ಯ:ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದ ನಂತರ ರಾಜ್ಯದಲ್ಲಿ, ಜಿಲ್ಲೆಯಲ್ಲಿ ಹಾಗು ತಾಲೂಕುಗಳಲ್ಲಿ ಕೆಎಸ್ಆರ್ಟಿಸಿ ಬಸ್ ವ್ಯವಸ್ಥೆಯಲ್ಲಿ ಸಾಕಷ್ಟು ಪ್ರಗತಿ ಆಗಿದೆ. ಬಸ್ ವ್ಯವಸ್ಥೆ ವಿರುದ್ಧ ಎಬಿವಿಪಿ ನಡೆಸಿದ ಪ್ರತಿಭಟನೆ ಹುರುಳಿಲ್ಲದ್ದು ಎಂದು ಎನ್ಎಸ್ಯುಐ ಸುಳ್ಯ ತಾಲೂಕು ಅಧ್ಯಕ್ಷ ಧನುಷ್ ಕುಕ್ಕೆಟ್ಟಿ ಹೇಳಿದ್ದಾರೆ. ಸುಳ್ಯ ತಾಲೂಕು ಗ್ಯಾರಂಟಿ ಸಮಿತಿಯ ಶಿಪಾರಸ್ಸಿನ
ಮೇರೆಗೆ ಸುಳ್ಯ ತಾಲೂಕಿನ ಹಲವು ಭಾಗಗಳಿಗೆ ಬಸ್ಸನ್ನು ಕಲ್ಪಿಸಲಾಗಿದೆ. ಬೆಳಗ್ಗೆ ಮತ್ತು ಸಂಜೆ ಸುಳ್ಯ- ಪುತ್ತೂರು ನಡುವೆ ಹೆಚ್ಚುವರಿ 10 ಬಸ್ಸು ಕಲ್ಪಿಸಲಾಗಿದೆ. ಹಾಗು ಬೇಡಿಕೆಗಳಿದ್ದ ಮಡಪ್ಪಾಡಿಯಲ್ಲಿ ತಂಗುವ ಬಸ್ಸು ಈ ಹಿಂದೆ ಸ್ಥಗಿತಗೊಂಡಿರುವುದನ್ನು ಮತ್ತೆ ಪುನರಾರಂಭಿಸಲಾಗಿದೆ. ಮಾರ್ಗ ವಿಸ್ತರಣೆಯಲ್ಲಿ ಸುಳ್ಯ-ಪೇರಾಲು ಬಸ್ಸನ್ನು ಅಡ್ಪಂಗಾಯ ತನಕ ಹಾಗು ಕಲ್ಪನೆ ತನಕ ಇದ್ದ ಬಸ್ಸನ್ನು ಪೊಟ್ರೆ ತನಕ ವಿಸ್ತರಿಸಲಾಗಿದೆ. 30 ವರ್ಷಗಳಿಂದ ಬೇಡಿಕೆ ಇದ್ದ ಆಲೆಟ್ಟಿ ಗ್ರಾಮದ ಬಡ್ಡಡ್ಕಕ್ಕೆ ಬಸ್ಸು ಚಾಲನೆ ನೀಡಲಾಗಿದೆ. ಸಂಜೆ ಕಂದ್ರಪ್ಪಾಡಿಗೆ ಸ್ಥಗಿತವಾಗಿದ್ದ ಬಸ್ಸನ್ನು ಪುನರಾರಂಭಿಸಲಾಗಿದೆ. ಕಲ್ಮಡ್ಕಕ್ಕೆ ಬಸ್ಸು ಸಂಚಾರ ಪ್ರಾರಂಭಿಸಲಾಗಿದೆ. ಬೆಳಿಗ್ಗೆ ಕೊಯನಾಡಿನಿಂದ ಕೇರಳದ ಕಾಸರಗೋಡಿಗೆ ಬಸ್ಸು ಪ್ರಾರಂಭ ಗೊಂಡಿರುತ್ತದೆ. ಸುಳ್ಯ-ಕೊಡಿಯಾಲಬೈಲು – ದುಗ್ಗಲಡ್ಕ ಮಾರ್ಗವಾಗಿ ಸುಬ್ರಹ್ಮಣ್ಯಕ್ಕೆ ಸಂಚರಿಸುವ ಬಸ್ಸಿಗೆ ಚಾಲನೆ ನೀಡಿದ್ದು ರಸ್ತೆ ಸಮಸ್ಯೆಯಿಂದ ತಾತ್ಕಾಲಿಕವಾಗಿ ಸ್ಥಗಿತ ಗೊಳಿಸಲಾಗಿದೆ ಎಂದು ಧನುಷ್ ಕುಕ್ಕೇಟಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.












