ಬೆಂಗಳೂರು: ರಾಜ್ಯ ಸರ್ಕಾರಿ ನೌಕರರ ವೇತನ ಶೇ.17ರಷ್ಟು ಹೆಚ್ಳಳ ಮಾಡಿ ಸರ್ಕಾರ ಆದೇಶ ಹೊರಡಿಸಿದ್ದು, ಇದರ ಬೆನ್ನಲ್ಲೇ ರಾಜ್ಯ ಸರಕಾರಿ ನೌಕರರು ಅನಿರ್ದಿಷ್ಟಾವಧಿ ಮುಷ್ಕರ ವಾಪಸ್ ಪಡೆದಿದ್ದಾರೆ. 2023ರ ಎಪ್ರಿಲ್ 1ರಿಂದ ಅನ್ವಯ ಆಗುವಂತೆ ಶೇ. 17 ವೇತನ ಹೆಚ್ಚಿಸಿ ಸರಕಾರ ಆದೇಶ ಮಾಡಿದೆ. ವೇತನ ಹೆಚ್ಚಳದ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಘೋಷಣೆ ಮಾಡಿದ್ದರು. ಈ ಕುರಿತು ಪದಾಧಿಕಾರಿಗಳ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ರಾಜ್ಯ ಸರಕಾರಿ ನೌಕರರ
ಸಂಘದ ಅಧ್ಯಕ್ಷ ಸಿ.ಎಸ್.ಷಡಕ್ಷರಿ,ನಿನ್ನೆ ಮುಖ್ಯಮಂತ್ರಿ ಹಾಗು ಸಚಿವರ ಜೊತೆ ಸಭೆ ನಡೆಸಿದ್ದೆವು. ಇಂದು ಸರಕಾರ 2 ಆದೇಶ ಹೊರಡಿಸಿದೆ. ಅದನ್ನು ನಾವು ಒಪ್ಪಿದ್ದೇವೆ. ಈ ಹಿನ್ನೆಲೆಯಲ್ಲಿ ನಮ್ಮ ಪದಾಧಿಕಾರಿಗಳ ಸಭೆಯಲ್ಲಿ ಮುಷ್ಕರ ವಾಪಸ್ ಪಡೆಯುವ ಬಗ್ಗೆ ಒಮ್ಮತದ ತೀರ್ಮಾನ ಕೈಗೊಂಡಿದ್ದೇವೆ’ ಎಂದು ತಿಳಿಸಿದರು.
ವೇತನವನ್ನು ಶೇ.17 ಹೆಚ್ಚಿಸಿ ಆದೇಶ ಮಾಡಲಾಗಿದೆ. ಅದರಂತೆ ಹೊಸ ಪಿಂಚಣಿ ಕ್ರಮವನ್ನು ರದ್ದು ಮಾಡಿ ಹಳೆಯ ಪಿಂಚಣಿ ಕ್ರಮ ಜಾರಿ ಮಾಡುವ ಬಗ್ಗೆ ಸಮಿತಿ ರಚನೆ ಮಾಡಿ ಸರಕಾರ ಆದೇಶ ಮಾಡಿದೆ. ಸುಳ್ಯ ತಾಲೂಕಿನಲ್ಲಿ ನಾಳೆಯಿಂದ ಎಲ್ಲಾ ನೌಕರರು ಕಚೇರಿಗೆ ಹಾಜರಾಗಲಿದ್ದಾರೆ ಎಂದು ಸರಕಾರಿ ನೌಕರರ ಸಂಘದ ರಾಜ್ಯ ಪರಿಷತ್ ಸದಸ್ಯ ಪ್ರಥ್ವಿಕುಮಾರ್ ಟಿ. ತಿಳಿಸಿದ್ದಾರೆ.