ನವದೆಹಲಿ: ದೆಹಲಿ, ಪಂಜಾಬ್, ಜಮ್ಮು ಮತ್ತು ಕಾಶ್ಮೀರ, ಹಿಮಾಚಲಪ್ರದೇಶ ಸೇರಿ ಉತ್ತರ ಭಾರತದ ಹಲವೆಡೆ ಮಳೆಯ ಅಬ್ಬರ ಜೋರಾಗಿದ್ದು, ಹಲವೆಡೆ ನದಿಗಳು, ಕೆರೆ ಕಟ್ಟೆಗಳು ಉಕ್ಕಿ ಹರಿಯುತ್ತಿವೆ. ತಗ್ಗು ಪ್ರದೇಶಗಳು ಜಲಾವೃತಗೊಂಡಿದ್ದು, ಪ್ರವಾಹದಲ್ಲಿ ಸಿಲುಕಿದವರ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿವೆ. ಹಿಮಾಚಲ ಪ್ರದೇಶದ
ಕುಲು ಜಿಲ್ಲೆಯ ಚರುಡು ಗ್ರಾಮದಲ್ಲಿ ಬಿಯಾಸ್ ನದಿ ಉಕ್ಕಿ ಹರಿಯುತ್ತಿದ್ದು, ಜಲಾವೃತಗೊಂಡ ಮನೆಯಿಂದ ಜನರನ್ನು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ( ಎನ್ಡಿಆರ್ಎಫ್) ರಕ್ಷಿಸಿದೆ. ಇದೇವೇಳೆ, ಚಂದ್ರಾತಾಲ್, ಪಾಗಲ್ ನಾಲಾ, ಮಲಿಂಗ್ ನಾಲಾದಲ್ಲಿ ಸಿಲುಕಿದ್ದ ಜನರನ್ನು ರಕ್ಷಿಸಲಾಗಿದೆ ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದ್ದು, ಮುಂಬರುವ
ಅಪಾಯ ಎದುರಿಸಲು ಸಜ್ಜಾಗಿದ್ದೇವೆ. ನೆರೆ ಪೀಡಿತ ಪ್ರದೇಶಗಳ ಜನರಿಗೆ ಆಹಾರವನ್ನು ತಲುಪಿಸಲಾಗಿದೆ ಎಂದು ಎಂದು ಸರ್ಕಾರ ಮೂಲಗಳು ತಿಳಿಸಿದೆ. ಭಾರಿ ಮಳೆಯಿಂದ ಜಮ್ಮು ಮತ್ತು ಕಾಶ್ಮೀರದ ಗುಡ್ಡ ಕುಸಿತ ಉಂಟಾಗಿದೆ. ಭಾರಿ ಮಳೆಯ ಪರಿಣಾಮ ಹಿಮಾಚಲ ಪ್ರದೇಶದ ಬನಿಖೇಟ್ ಬಳಿ ರಸ್ತೆ ಬಿರುಕು ಬಿಟ್ಟಿದ್ದರಿಂದ ಛಂಬಾ–ಪಠಾಣ್ಕೋಟ್ ರಾಷ್ಟ್ರೀಯ ಹೆದ್ದಾರಿಯ ರಸ್ತೆ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.
ಹಿಮಾಚಲ ಪ್ರದೇಶದ ಬಿಯಾಸ್ ನದಿ ಉಕ್ಕಿ ಹರಿಯುತ್ತಿದೆ. ಉತ್ತರಾಖಂಡದ ಚಿಂಕಾ ಬಳಿ ಭೂಕುಸಿತದಿಂದಾಗಿ ಬದರಿನಾಥ ರಾಷ್ಟ್ರೀಯ ಹೆದ್ದಾರಿಯ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.