ಸುಳ್ಯ: ವಾಣಿಜ್ಯ ಚಟುವಟಿಕೆಗಳಿಗೆ ಟ್ಯಾಲಿ ಕೋರ್ಸ್ ಕಲಿಯುವುದು ಬಹಳ ಮುಖ್ಯ. ಅರ್ಥ ವ್ಯವಸ್ಥೆಯಲ್ಲಿ ತೆರಿಗೆ ಸುಧಾರಣೆಯ ಮುಖ್ಯ ಭಾಗವಾಗಿ ಜಿ ಎಸ್ ಟಿ ಯನ್ನು ಜಾರಿಗೊಳಿಸಲಾಯಿತು. ಜಿ ಎಸ್ ಟಿ ಯನ್ನು ಅನುಷ್ಠಾನಗೊಳಿಸುವ ಮೂಲಕವಾಗಿ ತೆರಿಗೆ ಕಳ್ಳತನ, ತೆರಿಗೆ ಸಂಗ್ರಹ ವೃದ್ಧಿ, ಹಳೆಯ ತೆರಿಗೆ ಪದ್ಧತಿಯ ಲೋಪದೋಷ ಸರಿಪಡಿಸುವುದು, ಏಕ ರೂಪ ತೆರಿಗೆ ವ್ಯವಸ್ಥೆಯನ್ನು ಅನುಷ್ಠಾನಗೊಳಿಸುವುದು
ಮೂಲ ಉದ್ದೇಶವಾಗಿತ್ತು. ಜಿ ಎಸ್ ಟಿ ಬಂದ ಮೇಲೆ ಬಹಳಷ್ಟು ಸುಧಾರಣೆಯಾಗಿದೆ ಎಂದು ನೆಹರು ಮೆಮೋರಿಯಲ್ ಕಾಲೇಜಿನ ಪ್ರಾoಶುಪಾಲರಾದ ಪ್ರೊ ರುದ್ರ ಕುಮಾರ್ ಎಂ ಎಂ ಅವರು ಹೇಳಿದರು. ಅವರು ಸುಳ್ಯ ನೆಹರು ಮೆಮೋರಿಯಲ್ ಪಪೂ ಕಾಲೇಜಿನಲ್ಲಿ ವಾಣಿಜ್ಯ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಟ್ಯಾಲಿ ಸರ್ಟಿಫಿಕೇಟ್ ಕೋರ್ಸ್ ಉದ್ಘಾಟನೆ ಮತ್ತು ಜಿ ಎಸ್ ಟಿ ಕುರಿತು ಉಪನ್ಯಾಸ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡುತ್ತಾ ಮಾತನಾಡುತ್ತಿದ್ದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾoಶುಪಾಲರಾದ ಹರಿಣಿ ಪುತ್ತೂರಾಯ ಅವರು ಬದಲಾಗುತ್ತಿರುವ ಜಗತ್ತಿನಲ್ಲಿ ಉದ್ಯೋಗ ಅವಕಾಶಕ್ಕಾಗಿ ಟ್ಯಾಲಿ ಕೋರ್ಸ್ ಕಲಿಯುವುದು ಪ್ರಯೋಜನಕಾರಿ,ಹೊಸದನ್ನು ಅರಿತುಕೊಂಡು ಮೌಲ್ಯ, ಕೌಶಲ್ಯ ಹೆಚ್ಚಿಸಿಕೊಂಡಾಗ ಉತ್ತಮ ಉದ್ಯೋಗ ಗಳಿಸಲು ಸಹಾಯಕವಾಗುತ್ತದೆ. ಜ್ಞಾನ ಸಂಪಾದನೆಯ ನಿಟ್ಟಿನಲ್ಲಿ ಟ್ಯಾಲಿ ಕೋರ್ಸ್ ನ ಸದುಪಯೋಗವನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಿ ಎಂದರು. ವೇದಿಕೆಯಲ್ಲಿ ವಾಣಿಜ್ಯ ಸಂಘದ ಸಂಚಾಲಕಿ,ಉಪನ್ಯಾಸಕಿ ಸಾವಿತ್ರಿ ಕೆ, ಕಾರ್ಯಕ್ರಮ ಸಂಯೋಜಕರಾದ ವಿನಯ ನಿಡ್ಯಮಲೆ, ಟ್ಯಾಲಿ ಕೋರ್ಸ್ ತರಬೇತುದಾರರಾದ ಸಂಖ್ಯಾ ಶಾಸ್ತ್ರ ಉಪನ್ಯಾಸಕಿ ಹರ್ಷಿತಾ ಎ.ಬಿ.ಉಪಸ್ಥಿತರಿದ್ದರು.
ವಿದ್ಯಾರ್ಥಿನಿಯರಾದ ಅಂಬಿಕಾ ಪ್ರಾರ್ಥಿಸಿ, ಸಂಜನಾ ಕೆ ಸ್ವಾಗತಿಸಿದರು. ಅನ್ವಿತಾ ಆರ್ ಭಟ್ ವಂದಿಸಿದರು. ಸಮೃದ್ಧಿ ನಿರೂಪಿಸಿದರು.