ಸುಳ್ಯ: ಜ್ಞಾನ ಎಂಬುದು ಶಕ್ತಿ. ದಿವಂಗತ ಕೆವಿಜಿಯವರು ಈ ಭಾಗದಲ್ಲಿ ಮೊದಲಿಗೆ ಕಾಲೇಜು ಶಿಕ್ಷಣ ಸಂಸ್ಥೆಯನ್ನು ಕಟ್ಟಿ ಸುಳ್ಯದ ಜನತೆಗೆ ಜ್ಞಾನದ ಶಕ್ತಿ ತುಂಬಿದವರು. ಕೆವಿಜಿ ವಿದ್ಯಾಸಂಸ್ಥೆಗಳ ಬೆಳವಣಿಗೆಯ ಜೊತೆಗೆ ಸುಳ್ಯ ಕೂಡ ಬೆಳೆಯಿತು. ಕಾಲೇಜು ವಿದ್ಯಾರ್ಥಿ ಜೀವನ ಬಹಳ ಪ್ರಮುಖ ಹಂತ. ಇಲ್ಲಿಂದ ಸಮಾಜಕ್ಕೆ ಸಂಪೂರ್ಣ ಜವಾಬ್ದಾರಿಯುತ ನಾಗರಿಕರಾಗಿ
ಹೊರಹೊಮ್ಮುವ ನೀವು ಜೀವನವನ್ನು ಉತ್ತಮವಾಗಿ ರೂಪಿಸಿಕೊಳ್ಳಬೇಕು ಎಂದು ಲಯನ್ಸ್ ಜಿಲ್ಲೆಯ ಮಾಜಿ ಗವರ್ನರ್, ಎಂ.ಬಿ ಫೌಂಡೇಶನ್ ಅಧ್ಯಕ್ಷ ಎಂ.ಬಿ ಸದಾಶಿವ ಹೇಳಿದರು. ಅವರು ನೆಹರೂ ಮೆಮೋರಿಯಲ್ ಪದವಿ ಕಾಲೇಜಿನ ವಾರ್ಷಿಕ ದಿನಾಚರಣೆ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ ಪ್ರಧಾನ ಕಾರ್ಯದರ್ಶಿ ಅಕ್ಷಯ್ ಕೆ.ಸಿ ಶಿಜ್ಷಣ ಕ್ಷೇತ್ರದಲ್ಲಿ ವಿದ್ಯಾರ್ಥಿಗಳು ಮಾಡುವ ಸಾಧನೆಯು ಅವರು ಸಂಸ್ಥೆಗೆ ನೀಡುವ ಕೊಡುಗೆಯಾಗಿದೆ ಎಂದು ಹೇಳಿದರು.
ಕಾಲೇಜಿನ ಪ್ರಾಂಶಪಾಲರಾದ ಪ್ರೊ. ರುದ್ರಕುಮಾರ್ ವಾರ್ಷಿಕ ವರದಿಯನ್ನು ವಾಚಿಸಿದರು.
ವೇದಿಕೆಯಲ್ಲಿ ಕಾಲೇಜಿನ ಶೈಕ್ಷಣಿಕ ಸಲಹೆಗಾರರಾದ ನಿವೃತ್ತ ಪ್ರಾಂಶುಪಾಲ ಪ್ರೊ. ಬಾಲಚಂದ್ರ ಗೌಡ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಚಂದ್ರ ಕೋಲ್ಚಾರ್, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಚಿನ್ನಪ್ಪ ಗೌಡ, ಕಾಲೇಜಿನ ವಿದ್ಯಾರ್ಥಿ ಕ್ಷೇಮ ಪಾಲನಾಧಿಕಾರಿ ರತ್ನಾವತಿ ಉಪಸ್ಥಿತರಿದ್ದರು.
ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ನಿವೃತ್ತರಾದ ಡಾ. ಪೂವಪ್ಪ ಕಾಣಿಯೂರು ಅವರನ್ನು ಸನ್ಮಾನಿಸಲಾಯಿತು.
ಶೈಕ್ಷಣಿಕ ಹಾಗೂ ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದವರನ್ನು ಸನ್ಮಾನಿಸಲಾಯಿತು.
ಕಾಲೇಜಿನಲ್ಲಿ ಅತ್ಯಧಿಕ ಅಂಕಗಳಿಸಿದ ವಿದ್ಯಾರ್ಥಿಗಳಿಗೆ ವಿವಿಧ ದತ್ತಿನಿಧಿ ಪ್ರಶಸ್ತಿಗಳನ್ನು, ಕಾಲೇಜಿನ ವಿವಿಧ ಸಂಘಗಳಿಂದ ಆಯೋಜಿಸಿದ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಕಾಲೇಜು ವಿದ್ಯಾರ್ಥಿ ಸಂಘದ ಅಧ್ಯಕ್ಷ ರಜತ್ ಕುಮಾರ್ ಸ್ವಾಗತಿಸಿ, ಸಹ ಕಾರ್ಯದರ್ಶಿ ಹಿತಶ್ರೀ ಉದ್ಘಾಟಕರನ್ನು ಪರಿಚಯಿಸಿ, ಕಾರ್ಯದರ್ಶಿ ಅನ್ವಿತ್ ಸಂದೇಶ ವಾಚಿಸಿದರು. ಉಪಾಧ್ಯಕ್ಷೆ ಚೈತನ್ಯ ವಂದಿಸಿದರು. ಬಳಿಕ ವಿದ್ಯಾರ್ಥಿಗಳಿಂದ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.