ಮುಂಬೈ: ಅಲ್ಪ ಮೊತ್ತ ಬೆನ್ನಟ್ಟಿದರೂ ಮತ್ತೊಮ್ಮೆ ಬ್ಯಾಟಿಂಗ್ ವೈಫಲ್ಯ ಕಂಡ ಟೀಂ ಇಂಡಿಯಾ ನ್ಯೂಜಿಲೆಂಡ್ ವಿರುದ್ಧದ ಮೂರನೇ ಟೆಸ್ಟ್ನಲ್ಲಿಯೂ ಹೀನಾಯ ಸೋಲನುಭವಿಸಿದೆ. ಈ ಮೂಲಕ ಭಾರತದ ವಿರುದ್ಧದ ಟೆಸ್ಟ್ ಸರಣಿಯನ್ನು ನ್ಯೂಝಿಲೆಂಡ್ 3–0 ಅಂತರದಿಂದ ಕ್ಲೀನ್ ಸ್ವೀಪ್ ಮಾಡಿದೆ. ಇಲ್ಲಿನ ವಾಂಖೆಡೆ ಕ್ರೀಡಾಂಗಣದಲ್ಲಿ 147 ರನ್ಗಳ ಸಾಧಾರಣ ಗುರಿ ಬೆನ್ನತ್ತಿದ ಭಾರತ, ಎರಡನೇ ಇನಿಂಗ್ಸ್ನಲ್ಲಿ ಕೇವಲ 121 ರನ್ ಗಳಿಸಿ ಸರ್ವಪತನ ಕಂಡು, 25 ರನ್ ಅಂತರದ ಸೋಲೊಪ್ಪಿಕೊಂಡಿತು.
ಮೊದಲ ಇನಿಂಗ್ಸ್ನಲ್ಲಿ
28 ರನ್ಗಳ ಅಲ್ಪ ಹಿನ್ನಡೆಯೊಂದಿಗೆ ಮತ್ತೆ ಬ್ಯಾಟಿಂಗ್ ಆರಂಭಿಸಿದ ನ್ಯೂಜಿಲೆಂಡ್, ಎರಡನೇ ದಿನದಾಟದ ಅಂತ್ಯಕ್ಕೆ 43.3 ಓವರ್ಗಳಲ್ಲಿ 9 ವಿಕೆಟ್ಗಳನ್ನು ಕಳೆದುಕೊಂಡು 171 ರನ್ ಗಳಿಸಿತ್ತು. ಇಂದು ಆ ಮೊತ್ತಕ್ಕೆ ಮೂರು ರನ್ ಸೇರಿಸುವುದರೊಳಗೆ ಉಳಿದಿದ್ದ ಒಂದು ವಿಕೆಟ್ ಸಹ ಪತನಗೊಂಡಿತು. ಬಳಿಕ, ಗುರಿ ಬೆನ್ನತ್ತಿದ ಭಾರತದ ಬ್ಯಾಟರ್ಗಳು ಪ್ರವಾಸಿ ಬಳಗದ ಸ್ಪಿನ್ನರ್ಗಳ ಎದುರು ತರಗೆಲೆಗಳಂತೆ ಉದುರಿ ತವರಿನಲ್ಲಿಯೇ ಹೀನಾಯ ಸೋಲು ಕಂಡರು.
ವಿಕೆಟ್ ಕೀಪರ್ ರಿಷಭ್ ಪಂತ್ (57 ಎಸೆತಗಳಲ್ಲಿ 64 ರನ್) ಅರ್ಧಶತಕ ಗಳಿಸಿದ್ದು ಬಿಟ್ಟರೆ, ಉಳಿದ ಯಾರೊಬ್ಬರ ಬ್ಯಾಟ್ ಸದ್ದು ಮಾಡಲಿಲ್ಲ. ನಾಯಕ ರೋಹಿತ್ ಶರ್ಮಾ (11 ರನ್), ವಾಷಿಂಗ್ಟನ್ ಸುಂದರ್ (12 ರನ್) ಹೊರತುಪಡಿಸಿ, ಇನ್ಯಾರೂ ಎರಡಂಕಿಯನ್ನೇ ತಲುಪಲಿಲ್ಲ. ಇದರಿಂದಾಗಿ, ಭಾರತ ತಂಡವು 150ಕ್ಕಿಂತ ಕಡಿಮೆ ಮೊತ್ತವನ್ನು ಬೆನ್ನತ್ತಿ ಗೆಲ್ಲುವಲ್ಲಿ ಎರಡನೇ ಬಾರಿಗೆ ವಿಫಲವಾಯಿತು. 1997ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 120 ರನ್ ಗುರಿ ಮುಟ್ಟಲು ಸಾಧ್ಯವಾಗಿರಲಿಲ್ಲ. ಇತ್ತ ನ್ಯೂಜಿಲೆಂಡ್ ಎರಡನೇ ಬಾರಿ 150ಕ್ಕಿಂತ ಕಡಿಮೆ ಗುರಿ ನೀಡಿಯೂ
ಗೆಲುವಿನ ನಗೆ ಬೀರಿತು. 1978ರಲ್ಲಿ ಇಂಗ್ಲೆಂಡ್ಗೆ ಕೇವಲ 137 ರನ್ ಗುರಿಯೊಡ್ಡಿ ಗೆದ್ದಿತ್ತು.
ಮೊದಲ ಇನಿಂಗ್ಸ್ನಲ್ಲಿ ಐದು ವಿಕೆಟ್ ಪಡೆದು ಮಿಂಚಿದ್ದ ಎಜಾಜ್ ಪಟೇಲ್, ಈ ಬಾರಿ ಆರು ವಿಕೆಟ್ ಪಡೆದು ಆತಿಥೇಯರ ಎಡೆಮುರಿ ಕಟ್ಟಿದರು. ಭಾರತದಲ್ಲಿ ನಡೆದ ಮೂರು ಅಥವಾ ಅದಕ್ಕಿಂತ ಹೆಚ್ಚು ಪಂದ್ಯಗಳ ಟೆಸ್ಟ್ ಸರಣಿಯನ್ನು ಪ್ರವಾಸಿ ಪಡೆ ಕ್ಲೀನ್ ಸ್ವೀಪ್ ಮಾಡಿದ್ದು ಇದೇ ಮೊದಲು.