ಕೊಲಂಬೊ: ನ್ಯೂಜಿಲೆಂಡ್ ತಂಡ ಟಿ20 ವಿಶ್ವಕಪ್ನ ಸೂಪರ್ ಎಂಟರ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ 61 ರನ್ಗಳ ಸುಲಭ ಜಯಗಳಿಸಿ ಸೆಮಿಫೈನಲ್ನತ್ತ ಹೆಜ್ಜೆಯಿಟ್ಟಿತು.ಆತಿಥೇಯ ಶ್ರೀಲಂಕಾಕ್ಕೆ ಇನ್ನೊಂದು ಪಂದ್ಯ ಉಳಿದಿದ್ದರೂ, ಸತತ ಎರಡನೇ ಸೋಲಿನಿಂದಾಗಿ
ನಾಲ್ಕರ ಘಟ್ಟದ ರೇಸ್ನಿಂದ ಹೊರಬಿತ್ತು. ನ್ಯೂಜಿಲೆಂಡ್ ತಂಡ ಮೂರು ಪಾಯಿಂಟ್ಸ್ ಗಳಿಸಿದ್ದು, ಇಂಗ್ಲೆಂಡ್ ವಿರುದ್ಧ ಕೊನೆಯ ಪಂದ್ಯ ಆಡಲಿದೆ. ಎರಡು ಪಂದ್ಯ ಗೆದ್ದಿರುವ ಇಂಗ್ಲೆಂಡ್ ಈ ಮೊದಲೇ ಸೆಮಿಫೈನಲ್ ತಲುಪಿದೆ.
ಗೆಲುವಿಗೆ 169 ರನ್ಗಳ ಸವಾಲಿನ ಗುರಿ ಎದುರಿಸಿದ್ದ ಶ್ರೀಲಂಕಾ ತಂಡ 107 ರನ್ ಗಳಿಸಲಷ್ಟೇ ಶಕ್ತವಾಯಿತು.
ಇದಕ್ಕೆ ಮೊದಲು ಮಿಚೆಲ್ ಸ್ಯಾಂಟ್ನರ್ (47, 26 ಎ) ಮತ್ತು ಕೋಲ್ ಮೆಕ್ಕೊಂಚಿ (ಅಜೇಯ 31, 23ಎ) ಅವರ ಅಮೋಘ ಪ್ರತಿ ಹೋರಾಟದಿಂದಾಗಿ ನ್ಯೂಜಿಲೆಂಡ್ ತಂಡ 7 ವಿಕೆಟ್ಗೆ 168 ರನ್ಗಳ ಸ್ಪರ್ಧಾತ್ಮಕ ಮೊತ್ತ ಗಳಿಸಿತ್ತು.









