ನವದೆಹಲಿ:ಉಪರಾಷ್ಟ್ರಪತಿ ಹುದ್ದೆಗೆ ಮಂಗಳವಾರ ನಡೆದ ಚುನಾವಣೆಯಲ್ಲಿ ಆಡಳಿತಾರೂಢ ಎನ್ಡಿಎ ಅಭ್ಯರ್ಥಿ ಸಿ.ಪಿ.ರಾಧಾಕೃಷ್ಣನ್ ಅವರು ಗೆಲುವು ಸಾಧಿಸಿದರು. ಅವರು, ವಿರೋಧ ಪಕ್ಷಗಳ ಒಮ್ಮತದ ಅಭ್ಯರ್ಥಿ ಬಿ.ಸುದರ್ಶನ ರೆಡ್ಡಿ ಅವರಿಗಿಂತ 152 ಹೆಚ್ಚು ಮತಗಳನ್ನು ಪಡೆದು ದೇಶದ 15ನೇ ಉಪ ರಾಷ್ಟ್ರಪತಿಯಾಗಿ ಚುನಾಯಿತರಾದರು.ಇಬ್ಬರೂ ಅಭ್ಯರ್ಥಿಗಳ ನಡುವೆ ಬಿರುಸಿನ ಸ್ಪರ್ಧೆ ಏರ್ಪಟ್ಟಿತ್ತು.ಎನ್ಡಿಎ ಮೈತ್ರಿಕೂಟದ
ಬಳಿ ಬಹುಮತ ಇದ್ದ ಕಾರಣ ರಾಧಾಕೃಷ್ಣನ್ ಗೆಲುವು ಬಹುತೇಕ ಖಚಿತವಾಗಿತ್ತು.ರಾಧಾಕೃಷ್ಣನ್ ಅವರ ಪರವಾಗಿ ಒಟ್ಟು 452 ಮತಗಳು ಚಲಾವಣೆಯಾಗಿದ್ದರೆ, ಪ್ರತಿಸ್ಪರ್ಧಿ ಸುದರ್ಶನ ರೆಡ್ಡಿ ಅವರಿಗೆ 300 ಮತಗಳು ಬಂದಿವೆ ಎಂದು ಚುನಾವಣಾ ಅಧಿಕಾರಿ ಪಿ.ಸಿ. ಮೋದಿ ಅವರು ಪ್ರಕಟಿಸಿದರು.
ಒಟ್ಟು 767 ಸಂಸದರು (ಶೇ 98.2) ಮತಚಲಾಯಿಸಿದ್ದು, ಅವುಗಳಲ್ಲಿ 752 ಮತಗಳು ಮಾನ್ಯಗೊಂಡಿವೆ ಮತ್ತು 15 ಮತಗಳು ಅಮಾನ್ಯಗೊಂಡಿವೆ. ಅಂಚೆ ಮತಪತ್ರ ಸಲ್ಲಿಸಿದ್ದ ಸಂಸದರೊಬ್ಬರು‘ಅದನ್ನು ಪರಿಗಣಿಸಬೇಡಿ’ ಎಂದು ಆನಂತರ ಹೇಳಿದ್ದರಿಂದ ಅದನ್ನು ಪರಿಗಣಿಸಿಲ್ಲ’ ಎಂದು ಅವರು ವಿವರಿಸಿದರು.
‘ರಾಧಾಕೃಷ್ಣನ್ ಅವರು ಭಾರತದ ಉಪರಾಷ್ಟ್ರಪತಿ ಹುದ್ದೆಗೆ ಚುನಾಯಿತರಾಗಿದ್ದಾರೆ ಎಂದು ನಾನು ಪ್ರಕಟಿಸುತ್ತಿದ್ದೇನೆ. ಈ ಫಲಿತಾಂಶವನ್ನು ಚುನಾವಣಾ ಆಯೋಗದ ಜತೆ ಹಂಚಿಕೊಳ್ಳುತ್ತೇನೆ’ ಎಂದು ಅವರು ಹೇಳಿದರು.ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಮತದಾನ ನಡೆಯಿತು. ಹೊಸ ಸಂಸತ್ ಭವನದಲ್ಲಿ ಸಂಸದರು ಸರಣಿಯಲ್ಲಿ ನಿಂತು ಮತಚಲಾಯಿಸಿದರು.
ಉಪರಾಷ್ಟ್ರಪತಿ ಚುನಾವಣೆಯಲ್ಲಿ ಬಿಜು ಜನತಾದಳ (ಬಿಜೆಡಿ), ಭಾರತ ರಾಷ್ಟ್ರ ಸಮಿತಿ (ಬಿಆರ್ಎಸ್) ಮತ್ತು ಶಿರೋಮಣಿ ಅಕಾಲಿದಳ ಪಕ್ಷಗಳ ಸದಸ್ಯರು ಮತ ಚಲಾವಣೆಯಿಂದ ದೂರ ಉಳಿದು, ತಟಸ್ಥ ನಿಲುವು ತಾಳಿದರು. ಸಂಸತ್ತಿನಲ್ಲಿ ಬಿಜೆಡಿ ಏಳು, ಬಿಆರ್ಎಸ್ ನಾಲ್ಕು, ಅಕಾಲಿದಳ ಒಬ್ಬ ಸದಸ್ಯರನ್ನು ಹೊಂದಿದೆ.












