ದೋಹಾ: ಖತರ್‌ನ ಫಿಫಾ ವಿಶ್ವಕಪ್ ಪಂದ್ಯಾಕೂಟದ ಮೂರನೇ ಪಂದ್ಯಾಟದಲ್ಲಿ ಸೆನೆಗಲ್ ವಿರುದ್ಧ ನೆದರ್ಲೆಂಡ್ಸ್ ಜಯ ಸಾಧಿಸಿದೆ. ಗ್ರೂಪ್- ಎ ವಿಭಾಗದ ಪಂದ್ಯಾಟದಲ್ಲಿ ಕೊನೆ ಕ್ಷಣದಲ್ಲಿ ಗೋಲು ದಾಖಲಿಸಿದ ನೆದರ್ಲೆಂಡ್ಸ್ ತಂಡವು 2-0 ಮೂಲಕ ಜಯಭೇರಿ ಬಾರಿಸಿತು. ಪಂದ್ಯಾಟದ ಕೊನೆಯ ಕ್ಷಣದವರೆಗೆ ಇತ್ತಂಡಗಳಿಂದ ಯಾವುದೇ ಗೋಲು
ದಾಖಲಾಗಿರಲಿಲ್ಲ. 84ನೇ ನಿಮಿಷದಲ್ಲಿ ಕೋಡಿ ಗ್ಯಾಪ್ಕೊ ಆಕರ್ಷಕ ಗೋಲು ಬಾರಿಸಿದರು. ಬಳಿಕ ಹೆಚ್ಚುವರಿ ಸಮಯದಲ್ಲಿ ಡೇವಿ ಕ್ಲಾಸಿನ್ ಗೋಲು ದಾಖಲಿಸುವ ಮೂಲಕ ತಂಡದ ಜಯವನ್ನು ಖಚಿತಪಡಿಸಿದರು. ಇನ್ನೊಂದು ಪಂದ್ಯದಲ್ಲಿ ಗೋಲಿನ ಮಳೆಗರೆದ ಇಂಗ್ಲೆಂಡ್ ತಂಡ, ಫಿಫಾ ವಿಶ್ವಕಪ್ ಫುಟ್‌ಬಾಲ್ ಟೂರ್ನಿಯಲ್ಲಿ ಭರ್ಜರಿ ಆರಂಭ ಪಡೆಯಿತು. ಖಲೀಫಾ ಇಂಟರ್‌ನ್ಯಾಷನಲ್ ಕ್ರೀಡಾಂಗಣದಲ್ಲಿ ನಡೆದ ‘ಬಿ’ ಗುಂಪಿನ ಪಂದ್ಯದಲ್ಲಿ ಆಕ್ರಮಣಕಾರಿ ಆಟ ಪ್ರದರ್ಶಿಸಿದ ಇಂಗ್ಲೆಂಡ್ 6–2 ಗೋಲುಗಳಿಂದ ಇರಾನ್ ತಂಡವನ್ನು ಮಣಿಸಿತು.
ಬುಕಾಯೊ ಸಾಕಾ ಎರಡು ಗೋಲುಗಳನ್ನು ತಂದಿತ್ತರೆ, ಜೂಡ್ ಬೆಲಿಂಗಮ್, ರಹೀಮ್ ಸ್ಟರ್ಲಿಂಗ್, ಮಾರ್ಕಸ್ ರಶ್‌ಫೋರ್ಡ್ ಮತ್ತು ಜಾಕ್ ಗ್ರೀಲಿಶ್ ಅವರು ತಲಾ ಒಂದು ಗೋಲು ತಂದಿತ್ತರು.