ಕೋಲ್ಕತ್ತ: ವಿಶ್ವಕಪ್ ಪಂದ್ಯದಲ್ಲಿ ನೆದರ್ಲೆಂಡ್ಸ್ ತಂಡವು ಬಾಂಗ್ಲಾದೇಶದ ವಿರುದ್ಧ ಗೆದ್ದು ಬೀಗಿತು. ಈಡನ್ ಗಾರ್ಡನ್ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಡಚ್ ಬಳಗವು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. 50 ಓವರ್ಗಳಲ್ಲಿ 229 ರನ್ ಗಳಿಸಿ ಆಲೌಟ್ ಆಯಿತು. ಅದಕ್ಕುತ್ತರವಾಗಿ ಬಾಂಗ್ಲಾ
ತಂಡಕ್ಕೆ 42.2 ಓವರ್ಗಳಲ್ಲಿ 142 ರನ್ ಗಳಿಸಲು ಮಾತ್ರ ಸಾಧ್ಯವಾಯಿತು.ಮೆಹದಿ ಹಸನ್ 35, ಮಹಮುದುಲ್ಲಾ 20, ಮುಸ್ತಫಿಜುರ್ ರೆಹಮಾನ್ 20 ರನ್ ಗಳಿಸಿದರು. ನೆದರ್ಲ್ಯಾಂಡ್ಸ್ ಪರ ಪಾಲ್ ವ್ಯಾನ್ ಮಿಕರನ್ 23ಕ್ಕೆ4 ವಿಕೆಟ್ ಪಡೆದರು. ಮೊದಲು ಬ್ಯಾಟ್ ಮಾಡಿದ ನೆದರ್ಲ್ಯಾಂಡ್ಸ್ ಪರ ವೆಸ್ಲಿ ಬರೆಸಿ 41, ಸ್ಕಾಟ್ ಎಡ್ವರ್ಡ್ಸ್ 68, ಸೈಬ್ರಾಂಡ್ ಎಂಗೆಲ್ಬ್ರೆಚ್ಟ್ 35, ವ್ಯಾನ್ ಬೀಕ್ ಔಟಾಗದೆ 23 ಬಾಂಗ್ಲಾದ ಶೊರಿಫುಲ್ ಇಸ್ಲಾಂ 51ಕ್ಕೆ2, ತಸ್ಕಿನ್ ಅಹಮದ್ 43ಕ್ಕೆ2, ಮುಸ್ತಫಿಜುರ್ ರೆಹಮಾನ್ 36ಕ್ಕೆ2, ಮೆಹದಿ ಹಸನ್ 40ಕ್ಕೆ2 ವಿಕೆಟ್ ಪಡೆದರು. ಆರನೇ ಪಂದ್ಯವಾಡಿದ ನೆದರ್ಲೆಂಡ್ಸ್ ತಂಡಕ್ಕೆ ಇದು ಎರಡನೇ ಜಯ. ಈ ಹಿಂದೆ ಬಲಿಷ್ಠ ದಕ್ಷಿಣ ಆಫ್ರಿಕಾ ತಂಡವನ್ನು ಡಚ್ಚರ ಪಡೆ ಮಣಿಸಿತ್ತು.ಬಾಂಗ್ಲಾ ತಂಡಕ್ಕೆ ಇದು ಸತತ ಐದನೇ ಸೋಲು. ಇದರೊಂದಿಗೆ ಸೆಮಿಫೈನಲ್ ಪ್ರವೇಶಿಸುವ ತಂಡದ ಆಸೆ ಕಮರಿತು.