ಸುಳ್ಯ:ಪುಟ್ಟ ಮಕ್ಕಳೊಂದಿಗೆ ಟರ್ಪಾಲಿನೊಳಗೆ ವಾಸಿಸುತ್ತಿದ್ದ
ಕುಟುಂಬಕ್ಕೆ ಯುವಕ ಮಂಡಲವೊಂದು ತನ್ನ ಹತ್ತನೇ ವರ್ಷಾಚರಣೆಯ ಪ್ರಯುಕ್ತ ಶ್ರಮದಾನದ ಮೂಲಕವೇ ಮನೆ ನಿರ್ಮಿಸಿ ನೊಂದ ಬಾಳಿಗೆ ಬೆಳಕು ನೀಡಿದ ಧನಾತ್ಮಕ ಕಥೆಯಿದು.ಸುಳ್ಯ ತಾಲೂಕಿನ ಪೆರುವಾಜೆ ಗ್ರಾಮದ ಮುಕ್ಕೂರು ನೇಸರ ಯುವಕ ಮಂಡಲವೂ ಕುಂಡಡ್ಕದ ಅಶಕ್ತ ಕುಟುಂಬಕ್ಕೆ ನೇಸರ ನಿಲಯ ಹಸ್ತಾಂತರಿಸುವ ಮೂಲಕ
ಮಾದರಿ ಹೆಜ್ಜೆ ಇಟ್ಟಿದೆ.ಕುಂಡಡ್ಕದ ಹೊನ್ನಮ್ಮ ಮತ್ತು ಇಬ್ಬರು ಎಳೆಯ ಮಕ್ಕಳು ಕಳೆದ ಐದು ವರ್ಷದಿಂದ ಟರ್ಪಾಲಿನೊಳಗೆ ವಾಸಿಸುತ್ತಿದ್ದರು. ಜಡಿಮಳೆ, ಬಿಸಿಲು, ಚಳಿ ಲೆಕ್ಕಿಸದೆ ಟರ್ಪಾಲು ಒಳಗೆ ಜೀವನ ಸಾಗಿಸಬೇಕಿದ್ದ ಅನಿವಾರ್ಯತೆ ಅವರದ್ದಾಗಿತ್ತು.ಹೊನ್ನಮ್ಮ ಅವರು ಕೂಲಿ ಕೆಲಸ ಮಾಡಿ ತನ್ನಿಬ್ಬರು ಮಕ್ಕಳನ್ನು ಸಾಕಬೇಕಾದ ಅನಿವಾರ್ಯತೆ ಉಂಟಾಯಿತು. ಒಂದೆಡೆ ಬದುಕು ಸಾಗಿಸಲು ಕಷ್ಟವಾದರೆ, ಇನ್ನೊಂದೆಡೆ ನೆಲೆಗೆ ಸೂರು ಇಲ್ಲದ ಸ್ಥಿತಿ. ಪುಟ್ಟ ಮಕ್ಕಳಿಬ್ಬರು ಪ್ರಾಥಮಿಕ ಶಾಲೆಯಲ್ಲಿನ ಕಲಿಯುತ್ತಿದ್ದು ದಿನವಿಡೀ ಟರ್ಪಾಲು ಒಳಗೆ ಜೀವನ ಸಾಗಿಸಬೇಕಾದ ಸ್ಥಿತಿ ಉಂಟಾಗಿತ್ತು.
ಮುಕ್ಕೂರು ನೇಸರ ಯುವಕ ಮಂಡಲವೂ ಈ ಬಾರಿ ತನ್ನ 10 ನೇ ವರ್ಷಾಚರಣೆ ದಶಪ್ರಣತಿ ಪ್ರಯುಕ್ತ ಈ ಅಶಕ್ತ ಕುಟುಂಬಕ್ಕೆ ಮನೆ ನಿರ್ಮಾಣಕ್ಕೆ ಮುಂದಡಿ ಇಟ್ಟಿತ್ತು. ಊರ ದಾನಿಗಳ ಸಹಕಾರ ಪಡೆದು ಸೂರು ನಿರ್ಮಾಣ ಮಾಡಿ ಜ.10 ರಂದು ಹಸ್ತಾಂತರಿಸಿತ್ತು. ತನ್ಮೂಲಕ ಟರ್ಪಾಲು ಮನೆಗೆ ಮುಕ್ತಿ ನೀಡಿ ಹೊಸ ಮನೆಯ ಮೂಲಕ ಬೆಳಕು ನೀಡಿತು. ಅಂದಾಜು ಎರಡು ಲಕ್ಷ ರೂ. ವೆಚ್ಚದಲ್ಲಿ ಹೊಸ ಮನೆ ನಿರ್ಮಾಣಗೊಂಡಿದೆ.

ಶ್ರಮದಾನದ ಮೂಲಕವೇ ಕಟ್ಟಿದರು..!
ಇಡೀ ಮನೆಯನ್ನು ಯುವಕ ಮಂಡಲದ ಸದಸ್ಯರು ಶ್ರಮದಾನದ ಮೂಲಕ ನಿರ್ಮಿಸಿದ್ದು ವಿಶೇಷ. ಪಾಯದಿಂದ ಹಿಡಿದು ಛಾವಣಿ ಸಹಿತ ಎಲ್ಲ ಕೆಲಸಗಳು ಶ್ರಮದಾನದ ಮೂಲಕವೇ ಸಾಗಿತು. ಬೆಳಗ್ಗೆ ತಮ್ಮ ಜೀವನ ನಿರ್ವಹಣೆಗಾಗಿ ಕೂಲಿ ಸಹಿತ ಇನ್ನಿತರ ಕೆಲಸಕ್ಕೆ ತೆರಳುತ್ತಿದ್ದ ಯುವಕ ಮಂಡಲದ ಸದಸ್ಯರು ಸಂಜೆ 7 ಗಂಟೆಯಿಂದ 11 ಗಂಟೆ ತನಕ ವಿದ್ಯುತ್ ದೀಪದ ಬೆಳಕಿನಲ್ಲಿ ಮನೆ ನಿರ್ಮಾಣ ಕಾರ್ಯ ಆರಂಭಿಸಿದರು. ಡಿ.10 ರಂದು ಆರಂಭಗೊಂಡ ಕೆಲಸ ಜ. 7 ರಂದು ಪೂರ್ಣ ಮನೆ ನಿರ್ಮಾಣದ ತನಕ ಸಾಗಿತ್ತು. 27 ದಿನಗಳಲ್ಲಿ ರಾತ್ರಿ ವೇಳೆಯಲ್ಲಿ ನಡೆದ ಶ್ರಮದಾನದಲ್ಲೇ ಇಡೀ ಮನೆ ಎದ್ದು ನಿಂತಿತ್ತು ಎನ್ನುತ್ತಾರೆ ನೇಸರ ದಶಪ್ರಣತಿ ಸಮಿತಿ ಅಧ್ಯಕ್ಷ ಡಾ.ನರಸಿಂಹ ಶರ್ಮ ಕಾನಾವು.

ನೇಸರ ಯುವಕ ಮಂಡಲದ ಕಾರ್ಯ ಇಡೀ ಜಿಲ್ಲೆಗೆ ಮಾದರಿ. ಕಳೆದ ಹತ್ತು ವರ್ಷದಲ್ಲಿ 60 ಕ್ಕೂ ಅಧಿಕ ಸಮಾಜಮುಖಿ ಕಾರ್ಯಗಳನ್ನು ಮಾಡಿದೆ. ಅಶಕ್ತ ಕುಟುಂಬಕ್ಕೆ ಮನೆ ನಿರ್ಮಿಸಿದ ಕಾರ್ಯದಿಂದ ಸಂಘಟನೆ ಇನ್ನಷ್ಟು ಎತ್ತರಕ್ಕೆ ಏರಿದೆ. ತನ್ನ ಸಮಾಜಮುಖಿ ಚಿಂತನೆಯನ್ನು ನಿಜವಾದ ಅರ್ಥದಲ್ಲಿ ಅನುಷ್ಠಾನಿಸಿದೆ ಎನ್ನುತ್ತಾರೆ ದಶಪ್ರಣತಿ ಸಮಿತಿ ಸಂಚಾಲಕ ಕುಂಬ್ರ ದಯಾಕರ ಆಳ್ವ.
ಮನೆ ನಿರ್ಮಾಣದ ಆರಂಭದಿಂದ ದಾನಿಗಳು ವಸ್ತು ರೂಪದಲ್ಲಿಯು ನೆರವು ನೀಡಿದರು. ಊಟ ಉಪಹಾರದ ಮೂಲಕವೂ ಜತೆಯಾದರು. ಹೀಗಾಗಿ ಇಡೀ ಮನೆ ನೇಸರ ಯುವಕ ಮಂಡಲದ ಮೂಲಕ ಅನುಷ್ಠಾನಗೊಂಡು ಅಶಕ್ತ ಕುಟುಂಬಕ್ಕೆ ಸಮರ್ಪಣೆಗೊಂಡಿತ್ತು. ದಶಪ್ರಣತಿ ಪ್ರಯುಕ್ತ ಕೇವಲ ಕಾರ್ಯಕ್ರಮ ಆಯೋಜಿಸುವ ಬದಲು ಶಾಶ್ವತ ಯೋಜನೆ ಅನುಷ್ಠಾನಿಸುವ ಯೋಚನೆ ನಮ್ಮದಾಗಿತ್ತು. ಮನೆ ನಿರ್ಮಾಣದ ಜತೆಗೆ ಅಂಗನವಾಡಿಗೆ ಉದ್ಯಾನವನ ನಿರ್ಮಾಣವನ್ನು ಮಾಡಿದ್ದೇವೆ ಎನ್ನುತ್ತಾರೆ ನೇಸರ ಯುವಕ ಮಂಡಲದ ಗೌರವಾಧ್ಯಕ್ಷ ಜಗನ್ನಾಥ ಪೂಜಾರಿ ಮುಕ್ಕೂರು.
ಯುವಕ ಮಂಡಲದ ಅಧ್ಯಕ್ಷನಾಗಿ ಇತರರ ಕಷ್ಟಕ್ಕೆ ನೆರವಾಗಬೇಕು ಎನ್ನುವ ಯೋಚನೆ ಇತ್ತು. ಇದಕ್ಕೆ ದಶಪ್ರಣತಿ ಒಳ್ಳೆಯ ಅವಕಾಶ ಸಿಕ್ಕಿತ್ತು. ಯುವಕ ಮಂಡಲದ ಸದಸ್ಯರ ಶ್ರಮ, ತ್ಯಾಗ್ಯಕ್ಕೆ ಬೆಲೆ ಕಟ್ಟಲಾಗದು ಎನ್ನುತ್ತಾರೆ ನೇಸರ ಯುವಕ ಮಂಡಲದ ಅಧ್ಯಕ್ಷ ರಮೇಶ್ ಕಾನಾವು.
ಕೂಲಿ ಕೆಲಸ ಮಾಡಿ ಇಬ್ಬರು ಮಕ್ಕಳ ಜತೆಗೆ ದೀಪದ ಬೆಳಕಿನಲ್ಲಿ ಟರ್ಪಾಲಿನೊಳಗೆ ವಾಸವಾಗಿದ್ದೆ, ನೇಸರ ಯುವಕ ಮಂಡಲ, ಊರವರು ನನಗೆ ಹೊಸ ಮನೆ ನೀಡಿದ್ದಾರೆ. ಅವರಿಗೆ ಜೀವನ ಪರ್ಯಾಂತ ಋಣಿಯಾಗಿರುತ್ತೇನೆ ಎನ್ನುತ್ತಾರೆ ಹೊನ್ನಮ್ಮ












