ಕಠ್ಮಂಡು: ನೇಪಾಳದಲ್ಲಿ ಮಧ್ಯಂತರ ಸರ್ಕಾರ ಅಸ್ತಿತ್ವಕ್ಕೆ ಬಂದಿದ್ದು, ಸುಪ್ರೀಂ ಕೋರ್ಟ್ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಸುಶೀಲಾ ಕರ್ಕಿ (73) ಅವರು ನೂತನ ಪ್ರಧಾನಿಯಾಗಿ ಶುಕ್ರವಾರ ಪ್ರಮಾಣವಚನ ಸ್ವೀಕರಿಸಿದ್ದಾರೆ.’ಜೆನ್–ಝಿ’ ಪ್ರತಿಭಟನೆಯಿಂದಾಗಿ ಈ ವಾರದ ಆರಂಭದಲ್ಲಿ ಪ್ರಧಾನಿ ಕೆ.ಪಿ. ಶರ್ಮಾ ಓಲಿ ಅವರ ದಿಢೀರ್ ರಾಜೀನಾಮೆಯ ನಂತರ ನೇಪಾಳದಲ್ಲಿ ತಲೆತೋರಿದ್ದ
ರಾಜಕೀಯ ಅನಿಶ್ಚಿತತೆಗೆ ಇದರೊಂದಿಗೆ ತೆರೆಬಿದ್ದಂತಾಗಿದೆ.ಅಧ್ಯಕ್ಷ ರಾಮಚಂದ್ರ ಪೌದೆಲ್ ಉಪಾಧ್ಯಕ್ಷ ರಾಮ ಸಹಾಯ್ ಯಾದವ್, ಸುಪ್ರೀಂ ಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಪ್ರಕಾಶ್ ಮಾನ್ ಸಿಂಗ್ ರಾವತ್ ಅವರು ಶುಕ್ರವಾರ ರಾತ್ರಿ ನಡೆದ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಇದ್ದರು.
ನೇಪಾಳ ಸಂಸತ್ತನ್ನು ಶುಕ್ರವಾರ ತಡರಾತ್ರಿ ವಿಸರ್ಜಿಸಲಾಯಿತು. ‘ಪ್ರಧಾನ ಮಂತ್ರಿಯ ಶಿಫಾರಸಿನ ಮೇರೆಗೆ ಸಂಸತ್ತನ್ನು ವಿಸರ್ಜಿಸಲಾಗಿದೆ. 2026ರ ಮಾರ್ಚ್ನಲ್ಲಿ ಸಾರ್ವತ್ರಿಕ ಚುನಾವಣೆ ನಡೆಯಲಿದೆ ಎಂದು ಅಧ್ಯಕ್ಷರ ಕಚೇರಿ ತಿಳಿಸಿದೆ. ನಿರ್ಬಂಧಗಳನ್ನು ಸಡಿಲಗೊಳಿಸಿದ ಬೆನ್ನಲ್ಲೇ ನೇಪಾಳ ರಾಜಧಾನಿ ಕಠ್ಮಂಡುವಿನಲ್ಲಿ ವ್ಯಾಪಾರ ಮತ್ತು ವಾಣಿಜ್ಯ ಚಟುವಟಿಕೆಗಳು ನಿಧಾನವಾಗಿ ಪುನರಾರಂಭಗೊಂಡಿವೆ.
ಇಲ್ಲಿನ ಸುಪ್ರೀಂಕೋರ್ಟ್ ಮತ್ತು ಬ್ಯಾಂಕ್ಗಳು ಕಾರ್ಯಾರಂಭಿಸಲು ಸಿದ್ಧವಾಗಿವೆ. ಸರ್ಕಾರದ ವಿರುದ್ಧದ ಪ್ರತಿಭಟನೆ ವೇಳೆ ಸಂಸತ್ ಕಟ್ಟಡ ಸೇರಿದಂತೆ ಪ್ರಮುಖ ಕಟ್ಟಡಗಳು, ಹತ್ತಾರು ಪೊಲೀಸ್ ಠಾಣೆಗಳು, ಚೆಕ್ಪೋಸ್ಟ್ಗಳ ಮೇಲೆ ಪ್ರತಿಭಟನ ಕಾರರು ದಾಳಿ ಮಾಡಿ ಹಾನಿ ಗೊಳಿಸಿದ್ದರು.’ಜೆನ್–ಝಿ’ ಪ್ರತಿಭಟನೆಯಿಂದಾಗಿ ನೇಪಾಳದ ಹೋಟೆಲ್ ಉದ್ಯಮಕ್ಕೆ 25 ಶತಕೋಟಿ ರೂಪಾಯಿಯಷ್ಟು ನಷ್ಟ ಉಂಟಾಗಿದೆ ಎಂದು ಹೋಟೆಲ್ ಅಸೋಸಿಯೇಷನ್ ನೇಪಾಳ ಹೇಳಿದೆ












