ಕಠ್ಮಂಡು: ನೇಪಾಳದ ಪಶ್ಚಿಮ ಭಾಗದಲ್ಲಿ ಶುಕ್ರವಾರ ರಾತ್ರಿ ಪ್ರಬಲ ಭೂಕಂಪ ಸಂಭವಿಸಿದ ಪರಿಣಾಮ 157 ಜನರು ಮೃತಪಟ್ಟು, 150ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.ರಿಕ್ಟರ್ ಮಾಪಕದಲ್ಲಿ 6.4 ತೀವ್ರತೆ ದಾಖಲಾಗಿದೆ. ಭೂಕಂಪ ಉಂಟಾದ ಪ್ರದೇಶದಲ್ಲಿ ನೂರಾರು
ಮನೆ, ಕಟ್ಟಡಗಳು ನೆಲಸಮವಾಗಿವೆ. ಅಪಾರ ಪ್ರಮಾಣದ ನಷ್ಟ ಸಂಭವಿಸಿದೆ. ಜಾಜರ್ಕೋಟ್ ಮತ್ತು ರುಕುಂ ಜಿಲ್ಲೆಗಳು ಹೆಚ್ಚು ಹಾನಿಗೆ ಒಳಗಾಗಿವೆ. ಕಟ್ಟಡಗಳ ಅವಶೇಷಗಳಡಿ ಸಿಲುಕಿರುವ ಜನರ ರಕ್ಷಣೆಗೆ ಸೇನೆ ಮತ್ತು ಪೊಲೀಸ್ ಸಿಬ್ಬಂದಿ ಅವಿರತ ಶ್ರಮ ಪಡುತ್ತಿವೆ. ಹೆಲಿಕಾಪ್ಟರ್ ಮೂಲಕ ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸಲಾಗುತ್ತಿದೆ.
ಕಠ್ಮಂಡು, ಸುತ್ತಮುತ್ತಲಿನ ಜಿಲ್ಲೆಗಳಲ್ಲಿಯೂ ಭೂಕಂಪದ ಪರಿಣಾಮವಾಗಿ ಭೂಮಿ ಕಂಪಿಸಿದ ಅನುಭವ ಆಗಿದೆ. ಭೂಕಂಪ ಉಂಟಾದ ಸ್ಥಳವು ಅತ್ಯಂತ ದುರ್ಗಮವಾದುದಾಗಿದೆ.





