ಸುಬ್ರಹ್ಮಣ್ಯ: ಸುಬ್ರಹ್ಮಣ್ಯ ಸಮೀಪ ಐನೆಕಿದು ಎಂಬಲ್ಲಿ ಶಂಕಿತ ನಕ್ಸಲ ತಂಡ ಭೇಟಿ ನೀಡಿದ ಹಿನ್ನಲೆಯಲ್ಲಿ ನಕ್ಸಲ್ ನಿಗ್ರಹ ಪಡೆ(ಎಎನ್ಎಫ್ ಕೂಂಬಿಂಗ್ ಚುರುಕುಗೊಳಿಸಿದ್ದಾರೆ. ಪೊಲೀಸರ ತಂಡ ಕೂಡ ಸ್ಥಳಕ್ಕೆ ಆಗಮಿಸಿ ತನಿಖೆ ಆರಂಭಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಸುಬ್ರಹ್ಮಣ್ಯ ಸಮೀಪ ಐನೆಕಿದು ಗ್ರಾಮದ ಅರಣ್ಯದಂಚಿನ ಮನೆಯೊಂದಕ್ಕೆ ಶಂಕಿತ ನಕ್ಸಲರ ತಂಡ ಶನಿವಾರ ಸಂಜೆ ಭೇಟಿ
ನೀಡಿದ್ದಾರೆ ಎಂದು ಹೇಳಲಾಗಿದೆ. ಶನಿವಾರ ಸಂಜೆ 6 ಗಂಟೆ ಸುಮಾರಿಗೆ ಸಣ್ಣದಾಗಿ ಮಳೆಯಾಗುತ್ತಿದ್ದ ಸಂದರ್ಭ ನಾಲ್ಕು ಜನ ಅಪರಿಚಿತರ ತಂಡ ಐನೆಕಿದು ಗ್ರಾಮದ ಕಾಡಂಚಿನ ಮನೆಗೆ ಭೇಟಿ ನೀಡಿದ್ದಾರೆ. ಮನೆಯವರ ಜೊತೆ ಸುಮಾರು ಒಂದು ಗಂಟೆ ಕಾಲ ಮಾತುಕತೆ ನಡೆಸಿ ಆಹಾರ ಸಾಮಾಗ್ರಿಗಳು ಮತ್ತು ಊಟ ಪಡೆದು ತೆರಳಿದ್ದಾರೆ. ಬಂದಿದ್ದವರಲ್ಲಿ ಶಸ್ತ್ರಾಸ್ತ್ರಗಳಿದ್ದವು ಎಂದು ಹೇಳಲಾಗಿದೆ.
ಶಂಕಿತ ನಕ್ಸಲರು,ವಾರದ ಹಿಂದೆ ದಕ್ಷಿಣ ಕನ್ನಡ- ಕೊಡಗು ಗಡಿ ಭಾಗದ ಕೂಜಿಮಲೆಯ ಎಸ್ಟೇಟ್ ಅಂಗಡಿಗೆ ಬಂದಿದ್ದರು. ಕೂಜಿಮಲೆ ಮತ್ತು ಐನೆಕಿದು ನಡುವೆ ಸುಮಾರು 25 ಕಿ.ಮೀ. ಅಂತರವಿದೆ. ಇದೇ ಭಾಗದಲ್ಲಿ ನಕ್ಸಲ್ ನಿಗ್ರಹ ದಳ ನಿರಂತರ ಶೋಧ ಕಾರ್ಯ ನಡೆಸುತ್ತಿದ್ದಾರೆ. ಕಳೆದ ಶಂಕಿತ ನಕ್ಸಲರ ಚಲನವಲನದ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ-ಕೊಡಗು ಗಡಿ ಪ್ರದೇಶಗಳಲ್ಲಿ ನಕ್ಸಲ್ ನಿಗ್ರಹ ಪಡೆ(ಎಎನ್ಎಫ್) ಸಿಬ್ಬಂದಿ ಕೂಂಬಿಂಗ್ ಕಾರ್ಯಾಚರಣೆ ಆರಂಭಿಸಿತ್ತು.ಇದೀಗ ಐನೆಕಿದು ಭಾಗದಲ್ಲಿ ಶಂಕಿತ ನಕ್ಸಲರ ಚಲನ ವಲನ ಪತ್ತೆಯಾದ ಕಾರಣ ಕೂಂಬಿಂಗ್ ಇನ್ನಷ್ಟು ಚುರುಕುಗೊಳಿಸಿದ್ದಾರೆ.ಪೊಲೀಸರು, ಗುಪ್ತಚರ ಇಲಾಖೆಯ ಅಧಿಕಾರಿಗಳು ಆಗಮಿಸಿ ತನಿಖೆ ನಡೆಸುತ್ತಿದ್ದಾರೆ.









