ಮಂಗಳೂರು: ಪ್ರಸ್ತುತ ಮುಂಗಾರಿನಲ್ಲಿ ಸಂಭವಿಸಬಹುದಾದ ವಿಪತ್ತುಗಳನ್ನು ಸೂಕ್ತವಾಗಿ ನಿರ್ವಹಿಸಲು ಸಂಬಂಧಿಸಿದ ಅಧಿಕಾರಿ, ಸಿಬ್ಬಂದಿಗಳು ಸದಾ ಎಚ್ಚರಿಕೆ ಹಾಗೂ ಜಾಗರೂಕತೆಯಿಂದ ಇರಬೇಕು, ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರು ಹೇಳಿದರು.
ಅವರು ಜೂ.28ರ ಬುಧವಾರ ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ವಿಪತ್ತು ನಿರ್ವಹಣೆಯ ಪೂರ್ವ ಸಿದ್ಧತೆ ಕುರಿತು ಅಧಿಕಾರಿಗಳೊಂದಿಗೆ
ಹಮ್ಮಿಕೊಂಡಿದ್ದ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮುಂಗಾರಿನಲ್ಲಿ ಉದ್ಬವಿಸಬಹುದಾದ ಪ್ರವಾಹ, ಗುಡ್ಡಕುಸಿತ, ಭೂಕುಸಿತ ಸೇರಿದಂತೆ ಎದುರಾಗುವ ವಿವಿಧ ವಿಪತ್ತುಗಳ ಬಗ್ಗೆ ಸಾರ್ವಜನಿಕರು ಮಾಹಿತಿ ನೀಡಲು ಅನುಕೂಲವಾಗುವಂತೆ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿಯೂ ಕಂಟ್ರೋಲ್ ರೂಂ ರಚಿಸಬೇಕು, ಮಾತ್ರವಲ್ಲ ಅವು 24/7 ನಡಿ ಕಾರ್ಯನಿರ್ವಹಿಸಬೇಕು, ದಿನದ ಮೂರು ಪಾಳಿಯಲ್ಲೂ ಅಗತ್ಯ ಸಿಬ್ಬಂದಿಗಳನ್ನು ನಿಯೋಜಿಸಬೇಕು, ಅವರು ಕರೆಗಳನ್ನು ಸ್ವೀಕರಿಸಬೇಕು.
ಅದೇ ರೀತಿ ನಗರ ಸ್ಥಳೀಯ ಸಂಸ್ಥೆಗಳು ಕೂಡ ಪ್ರತಿ ವಾರ್ಡ್ಗಳಲ್ಲಿ ಕಂಟ್ರೋಲ್ ರೂಮ್ ತೆರೆಯಬೇಕು, ಮೆಸ್ಕಾಂನಿಂದ ಸಾಕಷ್ಟು ಮುಂಜಾಗ್ರತೆ ಕ್ರಮ ಕೈಗೊಳ್ಳಬೇಕು ಈ ದಿಸೆಯಲ್ಲಿ ಜಿಲ್ಲೆಯ ಪೂರ್ವ ಇತಿಹಾಸವನ್ನು ಅವಲೋಕಿಸಿ ಭೂಕುಸಿತ, ಪ್ರವಾಹ ಇತ್ಯಾದಿಗಳು ವರದಿಯಾಗಿರುವ ಸ್ಥಳಗಳಲ್ಲಿ ವಿದ್ಯುತ್ ಕಂಬಗಳು ನೆಲಕುರಳಿದಾಗ ಕೂಡಲೇ ಅವುಗಳನ್ನು ಪುನರ್ ಸ್ಥಾಪಿಸಲು ಆಯಾ ವ್ಯಾಪ್ತಿಯ ಪ್ರದೇಶಗಳಲ್ಲಿ ವಿದ್ಯುತ್ ಕಂಬಗಳನ್ನು ದಾಸ್ತಾನಿರಿಸಿಕೊಳ್ಳಬೇಕು, ಅಲ್ಲಿಗೆ ಅಗತ್ಯ ಸಿಬ್ಬಂದಿಯನ್ನು ನಿಯೋಜಿಸಿರಬೇಕು, ವಾಹನ ಅಗತ್ಯ ಸಾಮಗ್ರಿಗಳು ಸೇರಿದಂತೆ ವಿವಿಧ ರೀತಿಯ ಸಿದ್ದತೆಗಳ ಬಗ್ಗೆ ಖಾತ್ರಿ ಪಡಿಸಬೇಕು ಎಂದು ಮೆಸ್ಕಾಂನ ಕಾರ್ಯನಿರ್ವಾಹಕ ಇಂಜಿನಿಯರ್ಗೆ ಜಿಲ್ಲಾಧಿಕಾರಿಯವರು ನಿರ್ದೇಶನ ನೀಡಿದರು.
ಮೇಘ ಸ್ಪೋಟ, ಭೂಕುಸಿತಗಳಾಗುವ ಕಡೆ ಅವುಗಳನ್ನು ಸೂಕ್ತವಾಗಿ ನಿಭಾಯಿಸಲು ಎಚ್ಚರ ವಹಿಸಬೇಕು, ತಾಲೂಕು, ಗ್ರಾಮ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ವಾರ್ಡ್ ಮಟ್ಟದಲ್ಲಿ ವಿಪತ್ತು ನಿರ್ವಹಣಾ ಯೋಜನೆ ಸಿದ್ಧಪಡಿಸಿಟ್ಟುಕೊಂಡು, ಅದಕ್ಕೆ ಒಬ್ಬರು ನೋಡಲ್ ಅಧಿಕಾರಿಯನ್ನು ನೇಮಿಸಬೇಕು, ಜೆಸಿಬಿ ಇತರೆ ಪರಿಕರಗಳನ್ನು ಸಿದ್ಧಪಡಿಸಿಕೊಳ್ಳಬೇಕು, ಅದರೊಂದಿಗೆ ಮರಗಳನ್ನು ನೆಲಕ್ಕೆ ಉರುಳಿದಾಗ ಅರಣ್ಯ ಇಲಾಖೆಯು ತೆರವುಗೊಳಿಸಲು ಸಜ್ಜಾಗಬೇಕೆಂದರು.
ಸಮುದ್ರ ಕೊರೆತ ಎದುರಾಗುವ ಪ್ರದೇಶಗಳಲ್ಲಿ ಎಚ್ಚರ ವಹಿಸಬೇಕು, ಪ್ರವಾಸಿಗರು ಸಮುದ್ರಕ್ಕೆ ಇಳಿಯದಂತೆ ಮಾಹಿತಿ ನೀಡುವುದು ಹಾಗೂ ಅಲ್ಲಿ ಗೃಹರಕ್ಷಕರ ನಿಯೋಜನೆ ಮತ್ತು ಲೈಫ್ ಗಾರ್ಡ್ಗಳು ಇರಬೇಕು ಎಂದರು.
ಜಿಲ್ಲೆಯಲ್ಲಿ ಕಳೆದ ಮೂರು ವರ್ಷಗಳಿಂದ ಡ್ಯಾಂಗಳು, ನದಿ ಪಾತ್ರಗಳಲ್ಲಿ ಪ್ರವಾಹ ಉಂಟಾದ ಸ್ಥಳದ ಮಾಹಿತಿಯೊಂದಿಗೆ ಜಿಲ್ಲೆಯ ಇಬ್ಬರೂ ಸಹಾಯಕ ಆಯುಕ್ತರು ತಮ್ಮ ವ್ಯಾಪ್ತಿಯ ತಹಶೀಲ್ದಾರರೊಂದಿಗೆ ನಿರಂತರ ಸಂಪರ್ಕದಲ್ಲಿದ್ದುಕೊಂಡು ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ವಹಿಸಬೇಕು ಎಂದು ಸೂಚಿಸಿದರು
ದುಸ್ಥಿತಿಯಲ್ಲಿರುವ ಕಟ್ಟಡಗಳನ್ನು ಗುರುತಿಸುವಂತೆ ಸಂಬಂಧ ಸಂಬಂಧಪಟ್ಟ ಮುಖ್ಯೋಪಾಧ್ಯಾಯರಿಂದಲೇ ಲಿಖಿತವಾಗಿ ಮಾಹಿತಿ ಪಡೆದುಕೊಳ್ಳಬೇಕು, ಶಿಥಿಲ ಕಟ್ಟಡಗಳಿಂದ ಬೇರೆಡೆ ಮಕ್ಕಳನ್ನು ಸ್ಥಳಾಂತರಿಸಬೇಕು, ಅದರಂತೆ ಶಿಥಿಲಿಗೊಂಡ ಅಂಗನವಾಡಿ ಕಟ್ಟಡ ಪತ್ತೆ ಹಚ್ಚಿ, ಅಲ್ಲಿನ ಮಕ್ಕಳನ್ನು ಇತರೆಡೆ ಸ್ಥಳಾಂತರಿಸಬೇಕು ಎಂದು ಸೂಚನೆ ನೀಡಿದರು.
ಚುನಾವಣಾ ಕಾರ್ಯ ನಿಮಿತ್ತ ಜಿಲ್ಲೆಗೆ ಕೆಲವು ತಹಶೀಲ್ದಾರರು ವರ್ಗಾವಣೆಯಾಗಿ ಬಂದಿದ್ದಾರೆ, ಅವರುಗಳು ದೂರದಿಂದ ಬಂದೆ ಎಂಬ ಭಾವನೆ ಬಿಟ್ಟು, ಕೆಲಸ ಮಾಡಬೇಕು. ವಿಪತ್ತು ನಿರ್ವಹಣೆ, ಪ್ರವಾಹ ಸೇರಿದಂತೆ ವಿಪತ್ತುಗಳನ್ನು ಸೂಕ್ತವಾಗಿ ನಿರ್ವಹಿಸಲು ಹೆಚ್ಚಿನ ಸಿದ್ದತೆಗಳನ್ನು ಮಾಡಿಕೊಳ್ಳಬೇಕು, ತಮ್ಮ ವ್ಯಾಪ್ತಿಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಂದ ಹೆಚ್ಚಿನ ಮಾಹಿತಿ ಪಡೆದು ಶ್ರಮ ಹಾಕುವ ಮೂಲಕ ವಿಪತ್ತು ನಿರ್ವಹಣಾ ಕಾರ್ಯವನ್ನು ಗಂಭೀರವಾಗಿ ನಿರ್ವಹಿಸಬೇಕು ಎಂದವರು ಸಲಹೆ ನೀಡಿದರು.
ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ರಿಷ್ಯಂತ್, ಡಿಸಿಪಿ ಅನ್ಶು ಕುಮಾರ್ ಹಾಗೂ ಅಪರ ಜಿಲ್ಲಾಧಿಕಾರಿ ಮಾಣಿಕ್ಯ ವೇದಿಕೆಯಲ್ಲಿದ್ದರು.
ಸಂಬಂಧಪಟ್ಟ ಜಿಲ್ಲಾ ಹಾಗೂ ತಾಲೂಕ ಮಟ್ಟದ ಅಧಿಕಾರಿಗಳು ಸಭೆಯಲ್ಲಿದ್ದರು.