ನವದೆಹಲಿ:ಕೇಂದ್ರ ಸರ್ಕಾರದ ಹಲವು ನೀತಿಗಳನ್ನು ವಿರೋಧಿಸಿ 10ಕ್ಕೂ ಹೆಚ್ಚು ಕಾರ್ಮಿಕ ಸಂಘಗಳು ಇಂದು (ಫೆ.12) ‘ಭಾರತ ಬಂದ್’ಗೆ ಕರೆ ನೀಡಿವೆ. ಪರಿಣಾಮವಾಗಿ ಬ್ಯಾಂಕಿಂಗ್, ಸಾರಿಗೆ ಹಾಗೂ ಇತರ ಕೆಲವು ಸೇವೆಗಳಿಗೆ ಗುರುವಾರ ಅಡಚಣೆ ಉಂಟಾಗುವ ಸಾಧ್ಯತೆ ಇದೆ.
ಕೇಂದ್ರ ಸರ್ಕಾರದ
ಕಾರ್ಮಿಕ, ಕೃಷಿ ಮತ್ತು ಆರ್ಥಿಕ ನೀತಿಗಳನ್ನು ವಿರೋಧಿಸಿ ಈ ಬಂದ್ಗೆ ಕರೆ ನೀಡಲಾಗಿದೆ. ಮುಷ್ಕರವು ದೇಶದಾದ್ಯಂತ ವಿವಿಧ ರಾಜ್ಯಗಳಲ್ಲಿ ಪರಿಣಾಮ ಬೀರುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ. 10 ಕಾರ್ಮಿಕ ಸಂಘಟನೆಗಳ ಜಂಟಿ ವೇದಿಕೆಯು ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಕರೆ ನೀಡಿದೆ.
ಪ್ರಮುಖವಾಗಿ, ಕಳೆದ ವರ್ಷ (2025ರ ನವೆಂಬರ್) ಜಾರಿಗೆ ತಂದ ನಾಲ್ಕು ಹೊಸ ಕಾರ್ಮಿಕ ಸಂಹಿತೆಗಳನ್ನು ರದ್ದುಪಡಿಸುವಂತೆ ಆಗ್ರಹಿಸಿ, ಬಿತ್ತನೆ ಬೀಜಗಳ ಮಸೂದೆ, ವಿದ್ಯುತ್ ತಿದ್ದುಪಡಿ ಸೇರಿ ಕೆಲವು ಮಸೂದೆಯನ್ನು ಹಿಂಪಡೆಯಬೇಕು ಎಂಬ ಬೇಡಿಕೆಗಳು ಸೇರಿವೆ.
ಅಲ್ಲದೇ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಮರುಸ್ಥಾಪನೆ ಮತ್ತಿತರ ಬೇಡಿಕೆ ಮುಂದಿರಿಸಿ ಮುಷ್ಕರ ಘೋಷಿಸಲಾಗಿದೆ.
ಸಾರಿಗೆ, ಬ್ಯಾಂಕಿಂಗ್ ಸೇವೆಗಳಿಗೆ ಬಂದ್ ಬಿಸಿ ತಟ್ಟುವ ಸಾಧ್ಯತೆಯಿದೆ.







