ಸುಳ್ಯ:ಕರ್ನಾಟಕ ರಾಜ್ಯ ಲಗೋರಿ ಅಸೋಸಿಯೇಶನ್ ಆಶ್ರಯದಲ್ಲಿ ನಡೆಯಲಿರುವ ರಾಷ್ಟ್ರೀಯ ಲಗೋರಿ ಪಂದ್ಯಾಟದ ಪೂರ್ವಭಾವಿ ಸಭೆ ನ.30ರಂದು ಸುಳ್ಯ ತಾಲೂಕು ಪಂಚಾಯತ್ ಮಿನಿ ಸಭಾಂಗಣದಲ್ಲಿ ನಡೆಯಿತು. 2024 ಫೆ.10 ಮತ್ತು 11ರಂದು ಸುಳ್ಯದಲ್ಲಿ ರಾಷ್ಟ್ರೀಯ ಲಗೋರಿ ಪಂದ್ಯಾಟ ಆಯೋಜನೆಗೆ ನಿರ್ಧರಿಸಲಾಗಿದೆ.ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ರಾಜ್ಯ ಲಗೋರಿ ಅಸೋಸಿಯೇಶನ್ ಅಧ್ಯಕ್ಷ ದೊಡ್ಡಣ್ಣ ಬರೆಮೇಲು ಪಂದ್ಯಾಟ ಆಯೋಜನೆಯ ಬಗ್ಗೆ ಸಭೆಯಲ್ಲಿ ಮಾಹಿತಿ ನೀಡಿದರು. ಸಭೆಯಲ್ಲಿ
ವಿವಿಧ ವಿಚಾರಗಳ ಬಗ್ಗೆ ಚರ್ಚಿಸಲಾಗಿದ್ದು, ಎರಡು ಪ್ರಮುಖ ಸಮಿತಿ ಹಾಗೂ ಉಪ ಸಮಿತಿ ರಚನೆ ಬಗ್ಗೆ ಚರ್ಚಿಸಲಾಯಿತು.
ಸಮಿತಿ ರಚನೆ;
ಸುಳ್ಯದಲ್ಲಿ ನಡೆಯಲಿರುವ ರಾಷ್ಟ್ರೀಯ ಲಗೋರಿ ಪಂದ್ಯಾಟಕ್ಕಾಗಿ ಸ್ವಾಗತ ಸಮಿತಿ ಮತ್ತು ಸಂಘಟನಾ ಸಮಿತಿ ರಚಿಸಲಾಯಿತು. ಪ್ರಮುಖರನ್ನೊಳಗೊಂಡ ಸಮಿತಿ ರಚಿಸಲಾಗಿದ್ದು, ಸಭೆಗೆ ಆಗಮಿಸಿದವರನ್ನು ಹಾಗೂ ಇನ್ನುಳಿದ ಪ್ರಮುಖರನ್ನು ಸಮಿತಿಗೆ ಸೇರ್ಪಡೆಗೊಳಿಸುವ ಬಗ್ಗೆ ಹಾಗೂ ಮುಂದೆ ಉಪ ಸಮಿತಿ ರಚಿಸುವ ಬಗ್ಗೆ ನಿರ್ಧಾರ ಕೈಗೊಳ್ಳಲಾಯಿತು.
10 ಮತ್ತು 11ರಂದು ಪಂದ್ಯಾಟ;
ಸುಳ್ಯದಲ್ಲಿ 2024ರ ಫೆಬ್ರವರಿ 10 ಮತ್ತು 11 ರಂದು ರಾಷ್ಟ್ರೀಯ ಲಗೋರಿ ಪಂದ್ಯಾಟ ಜರುಗಲಿದ್ದು, ಕೊಡಿಯಾಲ ಬೈಲಿನ ಮಹಾತ್ಮಗಾಂಧಿ ವಿದ್ಯಾಸಂಸ್ಥೆಯ ಮೈದಾನ ಹಾಗೂ ಜೂನಿಯರ್ ಕಾಲೇಜಿನ ಕೆಳಗಿನ ಮೈದಾನದಲ್ಲಿ ಪಂದ್ಯಾಟ ಆಯೋಜನೆಗೆ ನಿರ್ಧರಿಸಲಾಗಿದ್ದು, ಕ್ರೀಡಾಪಟುಗಳಿಗೆ ವಸತಿ ವ್ಯವಸ್ಥೆ ಮತ್ತಿತರ ಸೌಲಭ್ಯ ಕಲ್ಪಿಸುವ ಬಗ್ಗೆಯೂ ಚರ್ಚಿಸಲಾಯಿತು.
ಎಂಟು ರಾಜ್ಯಗಳ ಕ್ರೀಡಾಪಟುಗಳು ಭಾಗವಹಿಸಲಿದ್ದು, 14 ವಯೋಮಾನದ ಕೆಳಗಿನ, 17 ವಯೋಮಾನದ ಕೆಳಗಿನ ಹಾಗೂ ಮುಕ್ತ ಎಂಬ ಮೂರು ವಿಭಾಗದಲ್ಲಿ ಪಂದ್ಯಾಟ ನಡೆಯಲಿದೆ. ಪುರುಷರ 24 ಹಾಗೂ ಮಹಿಳೆಯರ 24 ತಂಡಗಳು ಭಾಗವಹಿಸಿಲಿವೆ ಎಂದು ಮಾಹಿತಿ ನೀಡಿದರು. ಕ್ರೀಡಾಪಟುಗಳು, ಆಫೀಸಿಯಲ್ಸ್ ಸೇರಿದಂತೆ 500 ಕ್ರೀಡಾಳುಗಳು ಭಾಗವಹಿಸಲಿದ್ದಾರೆ ಎಂದು ದೊಡ್ಡಣ್ಣ ಬರೆಮೇಲು ಮಾಹಿತಿ ನೀಡಿದರು. ಕರ್ನಾಟಕ, ಪಾಂಡಿಚೇರಿ, ತಮಿಳುನಾಡು, ಪಂಜಾಬ್, ಉತ್ತರ ಪ್ರದೇಶ, ಮಧ್ಯಪ್ರದೇಶ, ಕೇರಳ, ತೆಲಂಗಾನ ರಾಜ್ಯಗಳಿಂದ ಕ್ರೀಡಾಪಟುಗಳು ಭಾಗವಹಿಸುವರು.
ಸ್ಕೂಲ್ ಗೇಮ್ಸ್ ಹಾಗೂ ಏಷಿಯನ್ ಗೇಮ್ಸ್ನಲ್ಲಿ ಲಗೋರಿ ಸೇರ್ಪಡೆಗೊಳ್ಳಲು ಪ್ರಯತ್ನ ನಡೆಯುತ್ತಿದೆ. ಈ ಬಗ್ಗೆ ರಾಜಕೀಯ ಮುಖಂಡರು, ಜನಪ್ರತಿನಿಧಿಗಳು, ಕ್ರೀಡಾಭಿಮಾನಿಗಳು ಒತ್ತಡ ಹೇರುವ ಕೆಲಸ ಆಗಬೇಕಿದೆ ಎಂದು ಸಭೆಯಲ್ಲಿ ಸಲಹೆ ವ್ಯಕ್ತವಾಯಿತು.ಗ್ರಾಮೀಣ ಕ್ರೀಡೆಯಾಗಿರುವ ಲಗೋರಿಗೆ ಸುಳ್ಯದಿಂದಲೇ ರಾಷ್ಟ್ರೀಯ ಮಟ್ಟದ ಖ್ಯಾತಿ ಲಭಿಸುವಂತಾಗಲು ನಾವೆಲ್ಲ ಶ್ರಮಿಸೋಣ. ಲಗೋರಿ ಎಂದರೆ ಸುಳ್ಯ ಎಂಬಂತಾಗಬೇಕು ಎಂದು ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಯಿತು.
ವೇದಿಕೆಯಲ್ಲಿ ದೊಡ್ಡಣ್ಣ ಬರೆಮೇಲು, ಜಯಪ್ರಕಾಶ್ ರೈ, ಎನ್.ಎ.ರಾಮಚಂದ್ರ, ರವಿ ಮಂಡ್ಯ, ಬಿ.ಕೆ.ಮಾಧವ ಮತ್ತಿತರರು ಉಪಸ್ಥಿತರಿದ್ದರು. ಪ್ರಮುಖರಾದ ಎಸ್.ಎನ್.ಮನ್ಮಥ, ಕೆ.ಗೋಕುಲ್ದಾಸ್, ಎಸ್.ಸಂಶುದ್ದೀನ್, ಕೆ.ಎಂ.ಮುಸ್ತಫ, ಡಾ.ಎನ್.ಎ.ಜ್ಞಾನೇಶ್, ಜಿತೇಂದ್ರ ಎನ್.ಎ. ಮಹೇಶ್ ಕುಮಾರ್ ಮೇನಾಲ, ಶಾಫಿ ಕುತ್ತಮೊಟ್ಟೆ, ಕೆ.ಬಿ.ಇಬ್ರಾಹಿಂ ಗಾಂಧಿನಗರ, ಶರತ್ ಅಡ್ಕಾರ್, ಮಾಧವ ಗೌಡ ಬೆಳ್ಳಾರೆ, ರಾಜು ಪಂಡಿತ್, ಭವಾನಿ ಶಂಕರ ಕಲ್ಮಡ್ಕ, ಜಯಂತ ರೈ, ಚೇತನ್ ಕಜೆಗದ್ದೆ,ಮಧುಸೂಧನ ಮತ್ತಿತರರು ಭಾಗವಹಿಸಿದ್ದರು.
ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಶಿವರಾಮ ಏನೆಕಲ್ಲು ವಂದಿಸಿದರು.