*ಗಂಗಾಧರ ಕಲ್ಲಪಳ್ಳಿ.
ಸುಳ್ಯ:ಕಬಡ್ಡಿ ಅಂಕಣದಲ್ಲಿ ಕಬಡ್ಡಿ ಆಟಗಾರರು ಮುನ್ನುಗ್ಗುವ ಅದೇ ವೇಗದಲ್ಲಿ, ಅದೇ ಆವೇಶದಲ್ಲಿ ತಮ್ಮ ವೀಕ್ಷಕ ವಿವರಣೆಯ ಮೂಲಕ ಕಬಡ್ಡಿ ಆಟದ ರಸಾಸ್ವಾದನೆಯನ್ನು ನೆರೆದ ಪ್ರೇಕ್ಷಕರ ಮನದಾಳಕ್ಕೆ ಮುಟ್ಟಿಸುತ್ತಿರುವ ದಿವಾಕರ ಉಪ್ಪಳ ಹಾಗೂ ವಿಜಯ್ ಗೌಡ ಅತ್ತಾಜೆ ವೀಕ್ಷಕ ವಿವರಣೆ ಸುಳ್ಯದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಕಬಡ್ಡಿ ಪಂದ್ಯಾಟದಲ್ಲಿ ವಿಶೇಷ ಗಮನ ಸೆಳೆದಿದೆ. ವಿವಿಧ ಭಾಷೆ, ವೈವಿಧ್ಯಮಯ ಶೈಲಿಯ ಮೂಲಕ ಕ್ರೀಡೆಯ ಆಳಕ್ಕೆ ಇಳಿದು ಪ್ರತಿ ಪಂದ್ಯವನ್ನು ವರ್ಣಿಸುವ ಇವರ ‘ಕಮೆಂಟ್ರಿಯ ಜುಗಲ್ಬಂದಿ’ ಪಂದ್ಯಾಟದ

ಹೈಲೈಟ್ಸ್ಗಳಲ್ಲೊಂದು. ಕನ್ನಡ, ಮಲಯಾಳಂ, ತುಳು, ಹಿಂದಿ, ಇಂಗ್ಲೀಷ್ ಹೀಗೆ ವಿವಿಧ ಭಾಷೆಗಳ ಮೂಲಕ ವೀಕ್ಷಕ ವಿವರಣೆ ನೀಡುವ ದಿವಾಕರ ಉಪ್ಪಳ ಹಾಗು ವಿಜಯ್ ಅತ್ತಾಜೆ ತಮ್ಮ ಕಂಚಿನ ಕಂಠದ ಕಮೆಂಟ್ರಿ ಮೂಲಕ ಪ್ರೇಕ್ಷಕರಿಗೆ ರಸದೌತಣ ನೀಡುತ್ತಿದ್ದಾರೆ.
ದಿವಾಕರ ಉಪ್ಪಳ:
ಕಳೆದ 21 ವರ್ಷಗಳಿಂದ ಕ್ರೀಡಾ ವೀಕ್ಷಕ ವಿವರಣೆಯ ಮೂಲಕ ಪ್ರಸಿದ್ಧರಾದವರು ಕಾಸರಗೋಡು ಜಿಲ್ಲೆಯ ಮಂಗಲ್ಪಾಡಿ ಗ್ರಾಮದ ಪ್ರತಾಪ ನಗರದ ದಿವಾಕರ ಉಪ್ಪಳ. ಗಡಿನಾಡಿನ ಇವರು ಸಪ್ತಭಾಷಾ ಪ್ರವೀಣರು. ಮಲಯಾಳ, ಕನ್ನಡ, ತುಳು, ಇಂಗ್ಲೀಷ್, ಹಿಂದಿ, ಮರಾಟಿ, ತಮಿಳು ಭಾಷೆಗಳಲ್ಲಿ ನಿರ್ಗಳವಾಗಿ ಗಂಟೆ ಗಟ್ಟಲೆ ಇವರು ವೀಕ್ಷಕ ವಿವರಣೆ ನೀಡುತ್ತಾರೆ. ಕಬಡ್ಡಿ, ಕ್ರಿಕೆಟ್, ವಾಲಿಬಾಲ್, ಹಗ್ಗ ಜಗ್ಗಾಟ ಸೇರಿದಂತೆ ಹಲವು ಕ್ರೀಡಾಕೂಟಗಳ ವೀಕ್ಷಕ ವಿವರಣೆ ನೀಡುತ್ತಾರೆ. ಕೇರಳ, ಕರ್ನಾಟಕ, ಮಹಾರಾಷ್ಟ್ರ ಸೇರಿ ವಿವಿಧ ರಾಜ್ಯಗಳಲ್ಲಿ ಹಾಗೂ ದುಬೈ ಸೇರಿದಂತೆ ನೂರಾರು ಪಂದ್ಯಾಕೂಟಗಳ ವೀಕ್ಷಕ ವಿವರಣೆ ನೀಡಿದ್ದಾರೆ. ಹಲವು ರಾಷ್ಟ್ರೀಯ ಪಂದ್ಯಕೂಟಗಳ ವೀಕ್ಷಕ ವಿವರಣೆ ನೀಡಿರುವ ದಿವಾಕರರು ಸುಳ್ಯ ಸೇರಿ 14 ರಾಷ್ಟ್ರೀಯ ಎ ಗ್ರೇಡ್ ಪಂದ್ಯಾಟಗಳ ಕಮೆಂಟ್ರಿ ನೀಡಿದ್ದಾರೆ. ವಿವಿಧ ಖಾಸಗೀ ಚಾನೆಲ್ಗಳಿಗೂ

ವಿಜಯ್ ಗೌಡ ಅತ್ತಾಜೆ ಮತ್ತು ದಿವಾಕರ ಉಪ್ಪಳ
ವೀಕ್ಷಕ ವಿವರಣೆಗಾರರಾಗಿ ಕಾರ್ಯ ನಿರ್ವಹಿಸಿದ್ದಾರೆ.
ವಿಜಯ್ ಗೌಡ ಅತ್ತಾಜೆ:
ತನ್ನ ಗಂಭೀರ ಸ್ಚರದ ಮೂಲಕ ಕನ್ನಡ ಮತ್ತು ತುಳುವಿನಲ್ಲಿ ಲೀಲಾಜಾಲವಾಗಿ ಪಂದ್ಯಾಟದ ವೀಕ್ಷಕ ವಿವರಣೆಯನ್ನು ನೀಡುತ್ತಿರುವವರು ವಿಜಯ್ ಗೌಡ ಅತ್ತಾಜೆ. ಬೆಳ್ತಂಗಡಿ ತಾಲೂಕಿನ ಉಜಿರೆಯವರಾದ ವಿಜಯ್ ಅತ್ತಾಜೆ 21 ವರ್ಷಗಳಿಂದ ವಿವಿಧ ಪಂದ್ಯಾಕೂಟಗಳ ವೀಕ್ಷಕ ವಿವರಣೆ ನೀಡುವ ಮೂಲಕ ಜನಪ್ರಿಯರಾಗಿದ್ದಾರೆ. ಕಳೆದ ಒಂಭತ್ತು ವರ್ಷಗಳಿಂದ ಕಬಡ್ಡಿ ಕಮೆಂಟ್ರಿಯಲ್ಲಿ ಸ್ಪೆಷಲಿಸ್ಟ್ ಆಗಿದ್ದಾರೆ. ತನ್ನ ಸ್ವರದ ಏರಿಳಿತಗಳ ಮೂಲಕ ಅಂಕಣದಲ್ಲಿನ ಕಬಡ್ಡಿಯ ಆವೇಶವನ್ನು ಅದೇ ಅಬ್ಬರ, ಆವೇಶದೊಂದಿಗೆ ಪ್ರೇಕ್ಷರಿಗೆ ಮುಟ್ಟಿಸುವುದು ವಿಜಯ್ ಅತ್ತಾಜೆಯವರ ವಿಶೇಷತೆ.
ಒಟ್ಟಿನಲ್ಲಿ ಸುಳ್ಯದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಕಬಡ್ಡಿಯ ರಂಗನ್ನು ಮನ ಮೋಹಕವಾಗಿ ನೆರೆದ ಪ್ರೇಕ್ಷಕರಿಗೆ ಮುಟ್ಟಿಸುತ್ತಿದ್ದಾರೆ ಈ ಇಬ್ಬರು ವೀಕ್ಷಕ ವಿವರಣೆಗಾರರು. ಸುಳ್ಯದ ಕಬಡ್ಡಿ ಉತ್ಸವ ಮನಸ್ಸಿನಲ್ಲಿ ಅಚ್ಚೊತ್ತಿರುವಂತೆ ಇವರ ಕಮೆಂಟ್ರಿಯ ಅಲೆ ಕಿವಿಗಳಲ್ಲಿ ಬಹುಕಾಲ ಉಳಿಯಬಹುದು.







