ಸುಳ್ಯ: ಸುಳ್ಯ ಕಾಂಗ್ರೆಸ್ನಲ್ಲಿ ಆಗಿರುವ ಎಲ್ಲಾ ಬೆಳವಣಿಗೆಯ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿ ಅವರ ಗಮನಕ್ಕೆ ತರುತ್ತೇವೆ ಎಂದು ಕೆಪಿಸಿಸಿ ಸದಸ್ಯ ಹೆಚ್.ಎಂ.ನಂದಕುಮಾರ್ ಹೇಳಿದ್ದಾರೆ. ಇದು ತಮಗೆ ಸರಕಾರದಿಂದ ಹುದ್ದೆ ಅಥವಾ ಪಕ್ಷದಲ್ಲಿ ಸ್ಥಾನ ಮಾನ ಸಿಗುವುದನ್ನು ತಪ್ಪಿಸಲು ಕೆಲವರು ನಡೆಸುವ ಷಡ್ಯಂತ್ರದ ಭಾಗ ಎಂದು ಅವರು ಅರೋಪಿಸಿದ್ದಾರೆ. ಸುಳ್ಯ ಹಾಗೂ ಕಡಬ ಬ್ಲಾಕ್ನ
ಪ್ರಮುಖ ನಾಯಕರನ್ನು ಅಮಾನತು ಮಾಡುವ, ನನಗೆ ಹಾಗೂ ಕಾಂಗ್ರೆಸ್ನ ಪ್ರಮುಖ ನಾಯಕರಿಗೆ ಶೋಕಾಸ್ ನೀಡುವ ವಿಚಾರದ ಬಗ್ಗೆ ಕೆಪಿಸಿಸಿ ಅಧ್ಯಕ್ಷರ ಗಮನಕ್ಕೆ ತಂದು ಸುಳ್ಯ ಕಾಂಗ್ರೆಸ್ನಲ್ಲಿ ನಡೆಯುವ ಎಲ್ಲಾ ವಿದ್ಯಮಾನಗಳ ಬಗ್ಗೆ ವಿವರಿಸುತ್ತೇವೆ. ಸುಳ್ಯ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ನನಗೆ ಸಿಗುವುದು ಬಹುತೇಕ ಖಚಿತವಾಗಿತ್ತು.ಆದರೆ ಅದನ್ನು ಕೆಲವರು ಷಡ್ಯಂತ್ರ ಮಾಡಿ ತಪ್ಪಿಸಿದರು, ಈ ಹಿಂದೆ ನನ್ನ ಕಡಬ ಉಸ್ತುವಾರಿಯನ್ನು ಬದಲಾವಣೆ ಮಾಡಲು ಪ್ರಯತ್ನ ನಡೆಸಿ ಸುಳ್ಳು ಪ್ರಚಾರ ನಡೆಸಿದ್ದರು. ಇದೀಗ ಶೋಕಾಸ್ ವಿಷಯ ಕೂಡ ಅಂತದ್ದೇ ಒಂದು ಹುನ್ನಾರ. ಈ ಹಿಂದೆ ಚುನಾವಣಾ ಸಂದರ್ಭದಲ್ಲಿ ವರಿಷ್ಠರು ಭರವಸೆ ನೀಡಿದಂತೆ ಸರಕಾರದ ಹುದ್ದೆಗಳು ಸಿಗದಂತೆ ತಡೆಯುವ ಪ್ರಯತ್ನ ಇದಾಗಿದೆ.
ಚುನಾವಣಾ ಸಂದರ್ಭದಲ್ಲಿಯೇ ಸುಳ್ಯ ಕಾಂಗ್ರೆಸ್ನ ಸ್ಥಿತಿ ವರಿಷ್ಠರಿಗೆ ಅರ್ಥ ಆಗಿದೆ.ಈ ಹಿನ್ನಲೆಯಲ್ಲಿ ಸುಳ್ಯದ ಪಕ್ಷದ ಬ್ಲಾಕ್ ಸಮಿತಿಯನ್ನು ಬದಲಿಸಿ ಹೊಸ ಸಮಿತಿ ರಚಿಸಲು ಕೆಪಿಸಿಸಿ ಅಧ್ಯಕ್ಷರಿಗೆ ಮನವಿ ಮಾಡುತ್ತೇವೆ ಎಂದರು. ಚುನಾವಣೆ ಘೋಷಣೆ ಆದ ಮೇಲೆ ಎರಡು ಬಾರಿ ಮಾತ್ರ ಸುಳ್ಯಕ್ಕೆ ಬಂದಿದ್ದೆ. ಪ್ರೆಸ್ ಮೀಟ್ ಮಾಡಲು ಮತ್ತು ಮತದಾನ ಮಾಡಲು. ಉಳಿದ ಯಾವುದೇ ಪ್ರಕ್ರಿಯೆಯಲ್ಲಿ ನಾನು ಭಾಗವಹಿಸಿಲ್ಲ. ಆದರೂ ಭಾರೀ ಅಂತರದ ಕಾಂಗ್ರೆಸ್ ಅಭ್ಯರ್ಥಿಯ ಸೋಲಿಗೆ ನನ್ನ ಮೇಲೆ ಆರೋಪ ಹೊರಿಸುವುದು, ಶೋಕಾಸ್ ನೀಡುವುದು ಹಾಸ್ಯಾಸ್ಪದ. ಚುನಾವಣಾ ಸಂದರ್ಭದಲ್ಲಿ ಡಿ.ಕೆ.ಶಿವಕುಮಾರ್ ಆದೇಶದ ಮೇರೆಗೆ ಕೊಡಗಿನಲ್ಲಿ ಕೆಲಸ ಮಾಡಿದ್ದೆ. ಸುಳ್ಯದ ಚುನಾವಣೆಯ ಯಾವುದೇ ಪ್ರಕ್ರಿಯೆಯಲ್ಲಿ ಭಾಗವಹಿಸಿಲ್ಲ. ಇಷ್ಟಕ್ಕೂ ನಾನು ಕಡಬ ಬ್ಲಾಕ್ನ ಪಕ್ಷ ಸಂಘಟನೆಯ ಉಸ್ತುವಾರಿ ಅಷ್ಟೇ. ನನ್ನ ಮೇಲೆ ಕ್ರಮ ಕೈಗೊಳ್ಳಲು,ಕ್ರಮಕ್ಕೆ ಶಿಫಾರಸ್ಸು ಮಾಡಲು ಸುಳ್ಯದ ಬ್ಲಾಕ್ ಕಾಂಗ್ರೆಸ್ಗೆ ಯಾವುದೇ ಅಧಿಕಾರ ಇಲ್ಲ. ಮಾತ್ರವಲ್ಲದೆ ಈ ಬಗ್ಗೆ ಕೆಪಿಸಿಸಿಯಿಂದ ಅಧಿಕೃತವಾಗಿ ಯಾವುದೇ ನೋಟಿಸ್ ಬಂದಿಲ್ಲ ಎಂದು ಅವರು ಹೇಳಿದ್ದಾರೆ.