ಸುಳ್ಯ: ಸುಳ್ಯ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆಯನ್ನು ಸುಳ್ಯ ಬ್ಲಾಕ್ ಕಾಂಗ್ರೆಸ್ ಮರುಪರಿಶೀಲನೆ ಮಾಡಬೇಕು. ಕಾಂಗ್ರೆಸ್ ಅಭ್ಯರ್ಥಿಯಾಗಿ ಹೆಚ್.ಎಂ.ನಂದಕುಮಾರ್ ಅವರನ್ನು ಹೈಕಮಾಂಡ್ ಮರು ಘೋಷಣೆ ಮಾಡಬೇಕು ಎಂದು ಸುಳ್ಯ ಯುವಜನ ಸಂಯುಕ್ತ ಮಂಡಳಿ ಸಭಾ ಭವನದಲ್ಲಿ ನಡೆದ ನಂದಕುಮಾರ್ ಅಭಿಮಾನಿಗಳಾದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಒತ್ತಾಯ ಕೇಳಿ ಬಂದಿತ್ತು. ನಂದಕುಮಾರ್ ಅವರನ್ನು ಅಭ್ಯರ್ಥಿಯಾಗಿ ಘೋಷಣೆ ಮಾಡಬೇಕು ಎಂದು ಆಗ್ರಹಿಸಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ಅವರನ್ನು

ಭೇಟಿ ಮಾಡಲು ಸಭೆಯಲ್ಲಿ ನಿರ್ಧರಿಸಲಾಯಿತು.
ಸುಮಾರು ಇನ್ನೂರಕ್ಕೂ ಅಧಿಕ ಕಾಂಗ್ರೆಸ್ ಕಾರ್ಯಕರ್ತರು ಹಾಗು ಮುಖಂಡರು ಸಭೆಯಲ್ಲಿ ಭಾಗವಹಿಸಿದ್ದರು. ಹಲವು ಮಂದಿ ಮಾತನಾಡಿ ಬ್ಲಾಕ್ ಕಾಂಗ್ರೆಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಸುಳ್ಯ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದಿಂದ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದ ಹೆಚ್.ಎಂ ನಂದಕುಮಾರ್ ಅವರಿಗೆ ಟಿಕೆಟ್ ನೀಡದೇ ಇರುವುದನ್ನು ವಿರೋಧಿಸಿ ಅಸಮಾಧಾನಗೊಂಡಿರುವ ಕಾಂಗ್ರೆಸ್ ಕಾರ್ಯಕರ್ತರು ಮತ್ತು ನಂದಕುಮಾರ್ ಅವರ ಅಭಿಮಾನಿ ಬಳಗ ಸಭೆ ನಡೆಸಿತು. ಸಭೆಯುದ್ದಕ್ಕೂ ನಂದಕುಮಾರ್ ಅವರಿಗೆ ಅವಕಾಶ ನೀಡದಿರುವುದಕ್ಕೆ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸುತ್ತಿದ್ದ ದೃಶ್ಯ ಕಂಡು ಬಂತು. ನಾವು ಕಾಂಗ್ರೆಸ್ಸಿಗರು, ನಮಗೆ ಸುಳ್ಯದಲ್ಲಿ ಕಾಂಗ್ರೆಸ್ ಗೆಲ್ಲಬೇಕು ಎನ್ನುವ ಉದ್ದೇಶ ಇದೆ, ಹಾಗಾಗಿ ಜನರೊಂದಿಗೆ ಬೆರೆಯುವ, ಕ್ಷೇತ್ರದಲ್ಲಿ ಅಪಾರ ಜನ ಬೆಂಬಲ ಹೊಂದಿರುವ ನಂದಕುಮಾರ್ ಅವರಿಗೆ ಟಿಕೆಟ್ ನೀಡಬೇಕೆನ್ನುವುದು ನಮ್ಮ ಆಗ್ರಹವಾಗಿದೆ. ಅದನ್ನು ಪರಿಗಣಿಸದೇ ಹೈಕಮಾಂಡ್ ತಪ್ಪು ನಿರ್ಧಾರ ಮಾಡಿದೆ ಎಂದು ಸಭೆಯಲ್ಲಿ ಮಾತನಾಡಿದ ಕಾರ್ಯಕರ್ತರು ಅಸಮಾಧಾನ ಹೊರ ಹಾಕಿದರು.
ನಂದಕುಮಾರ್ ಅವರು ಕಳೆದ ನಾಲ್ಕು ವರ್ಷಗಳಿಂದ ಸುಳ್ಯ ಕ್ಷೇತ್ರದಲ್ಲಿ ನಿರಂತರವಾಗಿ ಓಡಾಡಿ ಕಾರ್ಯಕರ್ತರೊಂದಿಗೆ ಬೆರೆಯುತ್ತಾ ತಳಮಟ್ಟದಿಂದ ಪಕ್ಷ ಸಂಘಟಿಸುತ್ತಿದ್ದಾರೆ. ಕೋವಿಡ್ ಸಮಯದಲ್ಲಿ ಕ್ಷೇತ್ರದ ಬಹುತೇಕ ಕಡೆ ಆಹಾರ ಕಿಟ್ಗಳನ್ನು ವಿತರಿಸಿ ಮನೆ ಮಾತಾಗಿದ್ದಾರೆ.

ಪ್ರಬಲ ಜಾತ್ಯಾತೀತ ಸಿದ್ದಾತಂದೊಂದಿಗೆ ಕ್ಷೇತ್ರದಲ್ಲಿ ಎಲ್ಲರನ್ನು ಒಗ್ಗೂಡಿಸಿಕೊಂಡು ಹೋಗುತ್ತಿದ್ದ ಇವರಿಗೆ ಎಲ್ಲಾ ಜಾತಿ ಧರ್ಮದವರ ಬೆಂಬಲ ಹೊಂದಿದ್ದಾರೆ. ಅಂತಹ ನಾಯಕನನ್ನು ಕಡೆಗಣಿಸಿರುವುದು ಕಾಂಗ್ರೆಸ್ಗೆ ದೊಡ್ಡ ನಷ್ಟ ಉಂಟು ಮಾಡಲಿದೆ ಎಂದು ಸಭೆಯಲ್ಲಿದ್ದವರು ಹೇಳಿಕೊಂಡಿದ್ದಾರೆ. ನಂದಕುಮಾರ್ ಅವರಿಗೆ ಟಿಕೆಟ್ ಸಿಕ್ಕಿದರೆ ಸುಳ್ಯದಲ್ಲಿ ಈ ಬಾರಿ ಕಾಂಗ್ರೆಸ್ ನೂರಕ್ಕೆ ನೂರು ಗೆಲುವು ಸಾಧಿಸುವುದರಲ್ಲಿ ಅನುಮಾನವಿಲ್ಲ. ಸುಳ್ಯ ಕ್ಷೇತ್ರದಲ್ಲಿ ನಂದಕುಮಾರ್ ಪರ ಅಲೆ ಇದೆ. ಕಾರ್ಯಕರ್ತರು ನಂದಕುಮಾರ್ ಪರವಾಗಿದ್ದಾರೆ. ಹಾಗಿದ್ದರೂ ಅವರನ್ನು ಕಡೆಗಣಿಸಿರುವ ಪಕ್ಷದ ವರಿಷ್ಠರ ತೀರ್ಮಾನ ಒಪ್ಪಲು ಸಾಧ್ಯವಿಲ್ಲ ಎಂದು ಸಭೆಯಲ್ಲಿದ್ದ ಅಸಮಾಧಾನಿತರು ಲಹೇಳಿಕೊಂಡಿದ್ದಾರೆ. ಸುಳ್ಯ ಬ್ಲಾಕ್ ಸಮಿತಿಯಾಗಲೀ, ಜಿಲ್ಲಾ ಕಾಂಗ್ರೆಸ್ ಸಮಿತಿಯಾಗಲೀ ಕಾರ್ಯಕರ್ತರಲ್ಲಿ ಯಾವುದೇ ಅಭಿಪ್ರಾಯ ಕೇಳದೇ ಅಭ್ಯರ್ಥಿ ಘೋಷಣೆ ಮಾಡಿದೆ. ಇದು ಸುಳ್ಯ ಕ್ಷೇತ್ರದ ಕಾರ್ಯಕರ್ತರಲ್ಲಿ ನಿರಾಶೆ ಉಂಟು ಮಾಡಿದೆ. ಹಾಗಾಗಿ ನಂದಕುಮಾರ್ ಅವರನ್ನು ಅಭ್ಯರ್ಥಿಯಾಗಿ ಘೋಷಿಸಬೇಕು. ಇಲ್ಲದಿದ್ದರೆ ಸಾವಿರಾರು ಕಾರ್ಯಕರ್ತರು ತಟಸ್ಥರಾಗಿ ಇದ್ದುಕೊಂಡು ಪಕ್ಷದ ಯಾವುದೇ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದಿಲ್ಲ ಎಂದು ಕಾರ್ಯಕರ್ತರು ಅಭಿಪ್ರಾಯ ವ್ಯಕ್ತಪಡಿಸಿದರು.
ನಾವು ಸಭೆ ಸೇರಿರುವುದು ಪಕ್ಷದ ಗೆಲ್ಲುವ ಅಭ್ಯರ್ಥಿ ನಂದಕುಮಾರ್ ಅವರಿಗೆ ಟಿಕೆಟ್ ನೀಡಬೇಕೆನ್ನುವ ಉದ್ದೆಶಕ್ಕೆ ಹೊರತು ಪಕ್ಷ ವಿರೋಧಿಯಾಗಿ ಸಭೆ ನಡೆಸಿದ್ದಲ್ಲ. ನಮ್ಮ ಬೇಡಿಕೆಯನ್ನು ಮನ್ನಿಸದಿದ್ದರೆ ಅದರ ಪರಿಣಾಮ ಮುಂದಕ್ಕೆ ಎದುರಿಸಬೇಕಾದೀತು ಎಂದು ಕಾರ್ಯಕರ್ತರು ಎಚ್ಚರಿಕೆ ನೀಡಿದರು. ಸಂಜೆ 4 ಗಂಟೆಗೆ ಇದೇ ರೀತಿಯ ಕಾರ್ಯಕರ್ತರ ಸಭೆಯನ್ನು ಕಡಬದಲ್ಲಿ ನಡೆಸಲಿದ್ದು ಕಾರ್ಯಕರ್ತರ ಒಮ್ಮತದ ಅಭಿಪ್ರಾಯವನ್ನು ಮನವಿ ಮೂಲಕ ಕಾರ್ಯಕರ್ತರ ಸಮೂಹ ಬೆಂಗಳೂರಿಗೆ ತೆರಳಿ ಪಕ್ಷದ ವರಿಷ್ಠರನ್ನು ಭೇಟಿ ಮಾಡಲಾಗುವುದು ಎಂದು ಮುಖಂಡರು ಹೇಳಿದರು.

ಕಾಂಗ್ರೆಸ್ ಮುಖಂಡ ಕೆ.ಗೋಕುಲ್ದಾಸ್ ಮಾತನಾಡಿ ಕಾರ್ಯಕರ್ತರ ಸಭೆ ಕರೆಯದೆ, ಕಾರ್ಯಕರ್ತರ ಅಭಿಪ್ರಾಯ ಪಡೆಯದೆ ಅಭ್ಯರ್ಥಿ ಆಯ್ಕೆ ಮಾಡಲಾಗಿದೆ. ಬ್ಲಾಕ್ ಕಾಂಗ್ರೆಸ್ ಆಗಲಿ, ಜಿಲ್ಲೆ, ರಾಜ್ಯಮಟ್ಟದ ನಾಯಕರು ಬೂತ್ ಮಟ್ಟದ ಕಾರ್ಯಕರ್ತರ ಅಭಿಪ್ರಾಯ ಪಡೆಯದೆ ಆಯ್ಕೆ ನಡೆದಿದೆ. ಇದನ್ನು ಒಪ್ಪಲು ಸಾಧ್ಯವಿಲ್ಲ. ನಂದಕುಮಾರ್ ಕಾರ್ಯಕರ್ತರ ಅಭ್ಯರ್ಥಿ ಮತ್ತು ಗೆಲುವಿನ ಸಾಧ್ಯತೆ ಇರುವ ಅಭ್ಯರ್ಥಿ ಆದುದರಿಂದ ನಂದಕುಮಾರ್ ಅವರಿಗೆ ಟಿಕೆಟ್ ನೀಡಬೇಕು ಎಂದು ಒತ್ತಾಯಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಭವಾನಿಶಂಕರ ಕಲ್ನಡ್ಕ ಕಳೆದ 35 ವರ್ಷಗಳಿಂದ ಕಾಂಗ್ರೆಸ್ ಶಾಸಕರಿಲ್ಲದೆ ಕಾರ್ಯಕರ್ತರು ಸಾಕಷ್ಟಯ ನೋವು, ತೊಂದರೆ ಅನುಭವಿಸಿದ್ದಾರೆ. ನಂದಕುಮಾರ್ ಅವರಿಗೆ ಟಿಕೆಟ್ ನೀಡಿದರೆ ಗೆಲುವಿನ ಅವಕಾಶ ಇತ್ತು. ಬಡಜನರ, ಕಾರ್ಯಕರ್ತರ ಆಶಾಕಿರಣವಾದ ನಂದಕುಮಾರ್ ಅವರಿಗೆ ಸೀಟ್ ನೀಡಿದರೆ ಗೆಲುವಿನ ಅವಕಾಶ ಇದೆ. ಆದುದರಿಂದ ನಂದಕುಮಾರ್ ಅವರಿಗೆ ಟಿಕೆಟ್ ನೀಡಬೇಕು ಎಂದು ಆಗ್ರಹಿಸಿದರು.
ಸಚಿನ್ರಾಜ್ ಶೆಟ್ಟಿ ಪೆರುವಾಜೆ ಮಾತನಾಡಿ ಕಳೆದ 5 ವರ್ಷಗಳಿಂದ ಸುಳ್ಯ ಕ್ಷೇತ್ರದಲ್ಲಿ ನಂದಕುಮಾರ್ ಉತ್ತಮ ಸಂಘಟನೆ ಮಾಡಿದ್ದಾರೆ. ಪಕ್ಷಕ್ಕೆ ಹೊಸ ವರ್ಚಸ್ಸು, ಕಾರ್ಯಕರ್ತರಿಗೆ ಹೊಸ ಭರವಸೆ ಮೂಡಿಸಿದ್ದಾರೆ ಎಂದು ಹೇಳಿದರು.

ಚೇತನ್ ಕಜೆಗದ್ದೆ ಮಾತನಾಡಿ ನಂದಕುಮಾರ್ ಅವರಿಗೆ ಪಕ್ಷ ಟಿಕೆಟ್ ನೀಡದಿದ್ದರೆ ಎಲ್ಲಾ ಗ್ರಾಮ ಸಮಿತಿ, ಬೂತ್ ಸಮಿತಿ ಪದಾಧಿಕಾರಿಗಳು ರಾಜಿನಾಮೆ ನೀಡಿ ತಟಸ್ಥರಾಗುತ್ತೇವೆ ಎಂದು ಹೇಳಿದರು.
ಸತ್ಯಕುಮಾರ್ ಆಡಿಂಜ ಮಾತನಾಡಿ ಸುಳ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಬಾರದು ಎಂಬ ದುರುದ್ದೇಶದಿಂದ ನಂದಕುಮಾರ್ ಅವರಿಗೆ ಟಿಕೆಟ್ ತಪ್ಪಿಸಿದ್ದಾರೆ ಎಂದು ಹೇಳಿದರು.
ಅಭ್ಯರ್ಥಿ ಆಯ್ಕೆಯಲ್ಲಿ ಬ್ಲಾಕ್ ಕಾಂಗ್ರೆಸ್ ಹಾಗು ಜಿಲ್ಲಾ ನಾಯಕರು ತೀವ್ರ ಎಟವಟ್ಟು ಮಾಡಿದ್ದಾರೆ ಎಂದು ಕಮಲಾಕ್ಷ ಕೊಲ್ಲಮೊಗ್ರ ಹೇಳಿದರು. ಕಾರ್ಯಕರ್ತರ ಹಾಗು ಪಕ್ಷದ ಹಿತದೃಷ್ಟಿಯಿಂದ ನಂದಕುಮಾರ್ ಚುನಾವಣೆಯಲ್ಲಿ ಸ್ಪರ್ಧಿಸಬೇಕು ಎಂದರು.
ಬಶೀರ್ ಬೆಳ್ಳಾರೆ ಮಾತನಾಡಿ ‘ ಸುಳ್ಯದ ಬ್ಲಾಕ್ ಕಾಂಗ್ರೆಸ್ ನಾಯಕರು ಕಾರ್ಯಕರ್ತರ ಅಭಿಪ್ರಾಯ ಪಡೆಯದೆ ಅಭ್ಯರ್ಥಿ ಆಯ್ಕೆ ಮಾಡಿದ್ದಾರೆ. ಈ ನಾಯಕರು ತಮ್ಮ ವ್ಯಾಪ್ತಿಯಲ್ಲಿ ಎಷ್ಟು ಮಂದಿ ಗ್ರಾ.ಪಂ.ಸದಸ್ಯರನ್ನು ಗೆಲ್ಲಿಸಿದ್ದಾರೆ ಮತ್ತು ಪಕ್ಷಕ್ಕೆ ಎಷ್ಟು ಮತ ಗಳಿಸಿ ಕೊಡುತ್ತಾರೆ ಎಂದು ಅವಲೋಕನ ಮಾಡಲಿ ಎಂದರು.
ಅಜ್ಜಾವರದ ಅಬ್ಬಾಸ್ ಎ.ಬಿ.ಮಾತನಾಡಿ ಬ್ಲಾಕ್ ಕಾಂಗ್ರೆಸ್ ಸಭೆ ಕರೆದರೆ ಸೇರುವುದಕ್ಕಿಂತ ಹೆಚ್ಚು ಜನ ಈ ಸಭೆಗೆ ಆಗಮಿಸಿರುವುದು ನಂದಕುಮಾರ್ ಜನಪ್ರಿಯತೆಗೆ ಸಾಕ್ಷಿ ಎಂದರು.

ಪೆರುವಾಜೆ ಗ್ರಾ.ಪಂ.ಅಧ್ಯಕ್ಷ ಜಗನ್ನಾಥ ಪೂಜಾರಿ, ದೇವಿಪ್ರಸಾದ್ ಕುತ್ಪಾಜೆ, ಬಿ ಲಕ್ಷ್ಮಣಗೌಡ ಬೊಳ್ಳಾಜೆ, ಲೋಕೇಶ್ ಅಕ್ರಿಕಟ್ಟೆ, ಮುತ್ತಪ್ಪ ಪೂಜಾರಿ, ಜಂಶೀರ್ ಶಾಲೆಕರ್, ತೇಜ ಕುಮಾರ್ ಬಾಳುಗೋಡು, ಸುರೇಶ್ ಮೊದಲಾದವರು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿ ನಂದಕುಮಾರ್ ರವರಿಗೆ ಕಾಂಗ್ರೆಸ್ ಪಕ್ಷದಿಂದ ಬಿ ಫಾರಂ ನೀಡುವಂತೆ ಆಗ್ರಹಿಸಿದರು.
ಪ್ರಮುಖರಾದ ಅನಿಲ್ ರೈ ಬೆಳ್ಳಾರೆ,ಎಸ್.ಎಂ.ಉಮ್ಮರ್,ಡೇವಿಡ್ ಧೀರಾ ಕ್ರಾಸ್ತಾ, ಅಬ್ದುಲ್ ಕುಂಞಿ, ರಫೀಕ್ ದುಗಲಡ್ಕ, ಹಸೈನಾರ್ ದುಗಲಡ್ಕ, ಉದಯಚಂದ್ರ, ವಿಜಯಕುಮಾರ್ ಆಲೆಟ್ಟಿ, ಶೀನಪ್ಪ ಉಬರಡ್ಕ, ರಂಜಿತ್, ಹಮೀದ್ ಅಜ್ಜಾವರ, ಹಸೈನಾರ್ ಅಜ್ಜಾವರ,ಗಣೇಶ ನಾಗಪಟ್ಟಣ, ಸುಂದರ ನೆಹರೂ ನಗರ ಮತ್ತಿತರರು ಭಾಗವಹಿಸಿದ್ದರು.