ಬೆಂಗಳೂರು: ನಮ್ಮ ಮೆಟ್ರೊ ‘ಹಳದಿ ಮಾರ್ಗ’ಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು.ಹಳದಿ ಮಾರ್ಗವು ಬೊಮ್ಮಸಂದ್ರದಿಂದ ಆರ್.ವಿ. ರಸ್ತೆಗೆ ಸಂಪರ್ಕ ಕಲ್ಪಿಸಲಿದೆ. ಬೆಂಗಳೂರಿನ ಮಾಹಿತಿ ತಂತ್ರಜ್ಞಾನದ ತಾಣ ಎಂದೇ ಗುರುತಿಸಿಕೊಂಡಿರುವ ಎಲೆಕ್ಟ್ರಾನಿಕ್ ಸಿಟಿಗೆ ಹಳದಿ ಮಾರ್ಗದ ಮೂಲಕ
ಹಾದುಹೋಗಲಿದೆ. 19.15 ಕಿ.ಮೀ ಉದ್ದವಿರುವ ನಮ್ಮ ಮೆಟ್ರೊ ‘ಹಳದಿ ಮಾರ್ಗ’ದಲ್ಲಿ ಒಟ್ಟು 16 ನಿಲ್ದಾಣಗಳಿವೆ.
ಇದೇ ವೇಳೆ ಪ್ರಧಾನಿ ಮೋದಿ ಅವರು ಮೆಟ್ರೊ 3ನೇ ಹಂತದ ಶಂಕುಸ್ಥಾಪನೆ ಕೂಡ ನೆರವೇರಿಸಿದರು. ‘ನಮ್ಮ ಮೆಟ್ರೊ’ ಹಳದಿ ಮಾರ್ಗಕ್ಕೆ ಇಂದು ಹಸಿರು ನಿಶಾನೆ ತೋರಿದ ಪ್ರಧಾನಿ ನರೇಂದ್ರ ಮೋದಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೊಂದಿಗೆ ರೈಲಿನಲ್ಲಿ ಪ್ರಯಾಣಿಸಿದರು.

ಬೊಮ್ಮಸಂದ್ರದಿಂದ ಆರ್.ವಿ. ರಸ್ತೆಗೆ ಸಂಪರ್ಕ ಕಲ್ಪಿಸುವ ಈ ಯೋಜನೆಗೆ ರಾಗಿಗುಡ್ಡ ನಿಲ್ದಾಣದಲ್ಲಿ ಚಾಲನೆ ನೀಡಿದ ಮೋದಿ, ಬಳಿಕ ಎಲೆಕ್ಟ್ರಾನಿಕ್ ಸಿಟಿ ವರೆಗೆ ರೈಲಿನಲ್ಲಿ ಪ್ರಯಾಣಿಸಿದರು. ಈ ವೇಳೆ, ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಅವರು ಅಕ್ಕಪಕ್ಕದಲ್ಲೇ ಕುಳಿತು ಯೋಜನೆ ಕುರಿತು ಮಾತುಕತೆ ನಡೆಸಿದರು.ಈ ವೇಳೆ, ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ರೈಲ್ವೆ ಸಚಿವ ಅಶ್ವಿನಿ ವೈಷ್ಣವ್, ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಮನೋಹರ್ ಲಾಲ್ ಖಟ್ಟರ್, ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ, ಕಾರ್ಮಿಕ ಮತ್ತು ಸಣ್ಣ ಉದ್ಯಮ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಸೇರಿದಂತೆ ಹಲವು ಸಂಸದರು, ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಚಿವರೂ ಇದ್ದರು.
ಹಳದಿ ಮಾರ್ಗವು ಒಟ್ಟು 19.15 ಕಿ.ಮೀ. ಉದ್ದವಿದ್ದು, ಈ ಯೋಜನೆಗಾಗಿ 7,160 ಕೋಟಿ ವ್ಯಯಿಸಲಾಗಿದೆ. ಮೋದಿ ಅವರು, ‘ನಮ್ಮ ಮೆಟ್ರೊ’ 3ನೇ ಹಂತಕ್ಕೂ (ಕಿತ್ತಳೆ ಮಾರ್ಗ) ಇಂದು ಶಂಕುಸ್ಥಾಪನೆ ನೆರವೇರಿಸಿದರು.ಅಂದಾಜು 15,610 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಈ ಮಾರ್ಗವು,ಕೆಂಪಾಪುರ–ಜೆ.ಪಿ.ನಗರ 4ನೇ ಹಂತ ಹಾಗೂ ಹೊಸಹಳ್ಳಿ–ಕಡಬಗೆರೆ ನಡುವೆ ಸಂಪರ್ಕ ಕಲ್ಪಿಸಲಿದೆ.





