ಬಳ್ಪ: ಕಳೆದ 8 ವರ್ಷದಲ್ಲಿ ಆದರ್ಶ ಗ್ರಾಮವಾಗಿ ಆಯ್ಕೆ ಮಾಡಿದ ಬಳ್ಪದಲ್ಲಿ 57 ಕೋಟಿಗೂ ಮಿಕ್ಕಿ ಅಭಿವೃದ್ಧಿ ಕಾಮಗಾರಿಗಳನ್ನು ನಡೆಸಲಾಗಿದೆ. ನಮ್ಮ ಯೋಜನೆಯ ಹಾಗೂ ಕಲ್ಪನೆಯಂತೆ ಶೇ.90ರಷ್ಟು ಕಾಮಗಾರಿಗಳು ಪೂರ್ತಿಯಾಗಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ. ಗ್ರಾಮವಿಕಾಸ ಪ್ರತಿಷ್ಠಾನ ಬಳ್ಪ – ಕೇನ್ಯ, ಗ್ರಾಮ ಉತ್ಸವ ಸಮಿತಿ ಇದರ ಆಶ್ರಯದಲ್ಲಿ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಸಂಸದರಾದ ನಳಿನ್ ಕುಮಾರ್ ಕಟೀಲ್ ಅವರು ಆದರ್ಶ ಗ್ರಾಮವಾಗಿ
ಆಯ್ಕೆ ಮಾಡಿದ ಬಳ್ಪ ಗ್ರಾಮದ ಸ.ಹಿ.ಪ್ರಾ. ಶಾಲಾ ಆವರಣದಲ್ಲಿ ನಡೆದ ಗ್ರಾಮೋತ್ಸವ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಬಳ್ಪ ಗ್ರಾಮದ ಎಲ್ಲಾ ಜನಪ್ರತಿನಿಧಿಗಳು, ಸಾರ್ವಜನಿಕರು ರಾಜಕೀಯ ಭೇದ ಮರೆತು ಪ್ರೋತ್ಸಾಹ ನೀಡಿದ್ದಾರೆ. ಬಳ್ಪ ಗ್ರಾಮದ ಅಭಿವೃದ್ಧಿಗಾಗಿ ರೂಪಿಸಿದ ಮಾಸ್ಟರ್ ಪ್ಲಾನ್ ಪ್ರಕಾರ ಎಲ್ಲಾ ಅಭಿವೃದ್ಧಿ ಮಾಡಲಾಗಿದೆ. ಎಲ್ಲಾ ಸವಾಲುಗಳನ್ನು, ಟೀಕೆಗಳನ್ನು ಎದುರಿಸಿ ಪ್ರಾಮಾಣಿಕ ಕೆಲಸ ಮಾಡಿದ್ದೇವೆ. ಟೀಕೆಗಳಿಗೆ ಅಭಿವೃದ್ಧಿ ಕೆಲಸದ ಮೂಲಕ ಉತ್ತರ ನೀಡಿದ್ದೇವೆ. ಗ್ರಾಮದಲ್ಲಿ ಪೂರ್ತಿಯಾಗಲು ಇರುವ 6 ಮನೆಗಳನ್ನು ಈ ವರ್ಷ ಪೂರ್ತಿ ಮಾಡುತ್ತೇವೆ ಎಂದರು.
ದಕ್ಷಿಣ ಕನ್ನಡ ಜಿಲ್ಲೆಯ ಅಭಿವೃದ್ಧಿಗೆ 96 ಸಾವಿರ ಕೋಟಿ ಅನುದಾನ ಬಂದಿದೆ ಎಂದು ಅವರು ಹೇಳಿದರು.









