ಸುಳ್ಯ: ಅರಂತೋಡು- ಎಲಿಮಲೆ ರಸ್ತೆಯಲ್ಲಿ ಅರಂತೋಡಿನಿಂದ ಅಡ್ತಲೆ ತನಕ ರಸ್ತೆ ಸಂಪೂರ್ಣ ಅಭಿವೃದ್ಧಿ ಆಗದಿದ್ದರೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಅಡ್ತಲೆ ಭಾಗದ ಜನರು ಯಾವುದೇ ಪಕ್ಷವನ್ನೂ ಬೆಂಬಲಿಸುವುದಿಲ್ಲ. ನೋಟಾಕ್ಕೆ ಮತ ಚಲಾಯಿಸಲು ನಿರ್ಧರಿಸಲಾಗಿದ್ದು ನೋಟಾ ಅಭಿಯಾನ ನಡೆಸುವುದಾಗಿ ಅಡ್ತಲೆ ನಾಗರಿಕ ಹಿತರಕ್ಷಣಾ ವೇದಿಕೆ ಹೇಳಿದೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಾಗರಿಕ ಹಿತರಕ್ಷಣಾ ವೇದಿಕೆಯ ಅಧ್ಯಕ್ಷ ಹರಿಪ್ರಸಾದ್ ಎ.ಕೆ.ಅಡ್ತಲೆ ಅರಂತೋಡು-ಎಲಿಮಲೆ ರಸ್ತೆಗೆ
ಮೂರು ಕೋಟಿ ಅನುದಾನ ಮಂಜೂರುಗೊಂಡಿದೆ ಎಂದು ಹೇಳಲಾಗಿದ್ದರೂ ಕೇವಲ ಒಂದು ಕೋಟಿ ರೂ ಅನುದಾನದಲ್ಲಿ 1,357 ಮೀಟರ್ ರಸ್ತೆ ಪೂರ್ಣಗೊಂಡಿದೆ. ಉಳಿದ ಎರಡು ಕೋಟಿ ರೂಗಳಿಗೆ ಟೆಂಡರ್ ಪ್ರಕ್ರಿಯೆ ಆಗಿಲ್ಲ. ಟೆಂಡರ್ ಆಗದೆ ಕಾಮಗಾರಿ ಕೈಗೆತ್ತಿಕೊಳ್ಳವುದಿಲ್ಲಾ ಎಂದು ಗುತ್ತಿಗೆದಾರರು ಕೆಲಸ ನಿಲ್ಲಿಸಿದ್ದಾರೆ. ಕನಿಷ್ಠ ಅಡ್ತಲೆ ತನಕ ರಸ್ತೆ ಅಭಿವೃದ್ಧಿ ಆಗಬೇಕು ಎಂಬುದು ನಾಗರಿಕ ಹಿತರಕ್ಷಣಾ ವೇದಿಕೆಯ ಆಗ್ರಹವಾಗಿತ್ತು. ಆದರೆ ಕಾಮಗಾರಿ ಅರ್ಧಕ್ಕೆ ನಿಂತಲ್ಲಿ ಮೊದಲು ನಿರ್ಧಾರ ಮಾಡಿದಂತೆ ಪ್ರತಿಭಟನೆ ಮುಂದುವರಿಸುತ್ತೇವೆ. ಒಂದು ವಾರದಲ್ಲಿ ರಸ್ತೆ ಕಾಮಗಾರಿ ಪ್ರಾರಂಭ ಮಾಡದಿದ್ದರೆ ನೋಟ ಮತದಾನದ ಬಗ್ಗೆ ಮನೆ ಮನೆ ಭೇಟಿ ಅಭಿಯಾನ ಪ್ರಾರಂಭಿಸುವುದಾಗಿ ಹರಿಪ್ರಸಾದ್ ಅಡ್ತಲೆ ಹೇಳಿದ್ದಾರೆ. ಅರಂತೋಡಿನಿಂದ ಎಲಿಮಲೆ ತನಕ
13.8 ಕಿ.ಮಿ. ಸಂಪೂರ್ಣ ಡಾಮರೀಕರಣ ಆಗದೆ ಮೂರು ದಶಕಗಳೇ ಕಳೆದಿದೆ. ಇದರಲ್ಲಿ ಅರಂತೋಡಿನಿಂದ ಅಡ್ತಲೆ ತನಕ 4.5 ಕಿ.ಮಿ.ರಸ್ತೆ ಆಗಬೇಕು ಎಂಬುದು ನಮ್ಮ ಬೇಡಿಕೆ. ಇದರಲ್ಲಿ 1357 ಮೀಟರ್ ರಸ್ತೆ ಆಗಿದೆ. ಉಳಿದ ರಸ್ತೆ ಕೂಡಲೇ ಅಭಿವೃದ್ಧಿ ಆಗಬೇಕು. ಅಡ್ತಲೆ ತನಕ ಸಂಪೂರ್ಣ ರಸ್ತೆ ಅಭಿವೃದ್ಧಿ ಮಾಡುತ್ತೇವೆ ಎಂದು ರಸ್ತೆ ಗುದ್ದಲಿ ಪೂಜೆ ದಿನ ಬಿಜೆಪಿ ಮುಖಂಡರು ಘೋಷಿಸಿದ್ದರು. ಬಿಜೆಪಿ ಮುಖಂಡರು ನುಡಿದಂತೆ ನಡೆಯಬೇಕು ಎಂದ ಅವರು ಈ ಭಾಗದ ಶೇ.85ರಷ್ಟು ಮಂದಿ ಬಿಜೆಪಿ ಮತದಾರರು, ಆದರೆ ರಸ್ತೆ ಅಭಿವೃದ್ಧಿ ಆಗದಿದ್ದರೆ ಬಿಜೆಪಿಯನ್ನು ಬೆಂಬಲಿಸುವುದಿಲ್ಲ ಎಂದು ಹೇಳಿದರು.
ಜಲಜೀವನ್ ಮಿಷನ್ ಪ್ರಕಾರ ಅಡ್ತಲೆ ವಾರ್ಡ್ನಲ್ಲಿ ಟ್ಯಾಂಕ್, ಕೊಳವೆ, ಬಾವಿ ನಿರ್ಮಾಣ ಆಗಿದ್ದರೂ ಸಂಪರ್ಕ ನೀಡಿಲ್ಲ. ಕೂಡಲೇ ನೀರಿನ ಸಂಪರ್ಕ ಒದಗಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಅಡ್ತಲೆ ನಾಗರಿಕ ಹಿತರಕ್ಷಣಾ ವೇದಿಕೆಯ ಖಜಾಂಜಿ ಓಂಪ್ರಸಾದ್ ಪಿಂಡಿಮನೆ, ಸದಸ್ಯರಾದ ಮೋಹನ್ ಪಂಜದಬೈಲು ಅಡ್ತಲೆ,ಗಿರೀಶ್ ಅಡ್ಕ, ಸದಸ್ಯರಾದ ಕೇಶವ ಮೇಲಡ್ತಲೆ, ಸುಧಾಕರ ಪಿಂಡಿಮನೆ,ಗೌರವ ಸಲಹೆಗಾರ ಶಶಿಕುಮಾರ್ ಉಳುವಾರು ಉಪಸ್ಥಿತರಿದ್ದರು.