*ವಿನಯಕುಮಾರ್ ಕಂದಡ್ಕ.
ಸುಳ್ಯ:ಕಳೆದೆರಡು ವರ್ಷಗಳಿಂದ ಸುಳ್ಯದಲ್ಲಿ ಸ್ವಚ್ಛತೆಯ ಕುರಿತಾದ ಜಾಗೃತಿಯ ಕಾರ್ಯ ಒಂದಿಲ್ಲೊಂದು ರೀತಿಯಲ್ಲಿ ನಡೆಯುತ್ತಲೇ ಇದೆ. ಸುಳ್ಯ ನಗರಕ್ಕೆ ಕಳೆದ ಹತ್ತು ವರ್ಷಗಳಿಂದ ಸವಾಲಾಗಿ ನಿಂತಿದ್ದ ಕಸದ ರಾಶಿಯನ್ನು ತೆರವುಗೊಳಿಸುವಲ್ಲಿ ನಗರ ಪಂಚಾಯತಿ ಸಫಲವಾದರೆ, ನಗರ ಪಂಚಾಯತ್ ನೇತೃತ್ವದಲ್ಲಿ ಅಮರ ಸುಳ್ಯ ರಮಣೀಯ ಸುಳ್ಯ ಎಂಬ ತಂಡ ವತಿಯಿಂದ ಪ್ರತಿ ಗುರುವಾರ ಬೆಳಿಗ್ಗೆ ಏಳರಿಂದ ಎಂಟು ಗಂಟೆಯ ತನಕ ನಗರದ ಬೇರೆ ಬೇರೆ ರಸ್ತೆಗಳಲ್ಲಿ ಸ್ವಚ್ಛತೆ ಹಾಗೂ ಜಾಗೃತಿಯ ಅರಿವು
ಮೂಡಿಸುವ ಕೆಲಸ ನಿರಂತರವಾಗಿ ನಡೆಯುತ್ತಿದೆ.
ಜಾತ್ರೆ ಎಂದರೆ ಅದು ಕಸದ ರಾಶಿ . ಜಾತ್ರೆಯ ಸಂಭ್ರಮದಲ್ಲಿ ಮುಳುಗಿರುವ ಜನ ಎಲ್ಲೆಂದರಲ್ಲಿ ಕಸ ಹಾಕುವುದು ಸರ್ವೇಸಾಮಾನ್ಯ. ಈ ಕಸದ ವಿಲೇವಾರಿ ನಿಜಕ್ಕೂ ಸ್ಥಳಿಯಾಡಳಿತಕ್ಕೆ ಒಂದು ಸವಾಲು. ಕಸದ ಪ್ರಮಾಣವನ್ನು ಕಡಿಮೆಗೊಳಿಸುವುದೇ ಇದಕ್ಕೆ ಸರಿಯಾದ ಪರಿಹಾರ. ಅದಕ್ಕಾಗಿ ಈಗಾಗಲೇ ಜಾತ್ರಾ ನಡೆಯುವ ರಥ ಬೀದಿ ಯುದ್ದಕ್ಕೂ ನಗರ ಪಂಚಾಯತಿ ವತಿಯಿಂದ ಜಾಥಾ ನಡೆಸಿ ಧ್ವನಿವರ್ಧಕದ ಮೂಲಕ ಸ್ವಚ್ಛತೆಯ ಜಾಗೃತಿಯ ಅರಿವು ಮೂಡಿಸಲಾಗಿದೆ.

ಇದೀಗ ಜಾತ್ರೆಯ ದಿನದಂದು ಸುಳ್ಯದ ಸ್ನೇಹ ಶಾಲೆಯ 20ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸ್ವಚ್ಛತೆಯ ಸ್ವಯಂಸೇವಕರಾಗಿ ಸ್ವಚ್ಛತೆಯ ಜಾಗೃತಿಯ ಫಲಕಗಳನ್ನು ಹಿಡಿದು ಜಾತ್ರೆಯ ಬೀದಿ ಯುದ್ದಕ್ಕೂ ಸಂಚರಿಸುತ್ತಿದ್ದಾರೆ . ಸ್ನೇಹ ಶಾಲೆಯ ಸಂಚಾಲಕರಾದ ಚಂದ್ರಶೇಖರ ದಾಮ್ಲೆಯವರ ಕಲ್ಪನೆಯೊಂದಿಗೆ ವಿದ್ಯಾರ್ಥಿಗಳು ಸಾರ್ವಜನಿಕರಲ್ಲಿ ಪ್ಲಾಸ್ಟಿಕ್ ಕುರಿತ ಜಾಗೃತಿ, ಕಸವನ್ನ ಹಾಕದಿರುವಂತೆ ಎಚ್ಚರಿಕೆಯ ಫಲಕಗಳನ್ನು ಹಿಡಿಯುವ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಈ ವಿಶಿಷ್ಟ ಕಾರ್ಯಕ್ರಮದ ಮೂಲಕವಾದರೂ ಕಸದ ಪ್ರಮಾಣ ಕಡಿಮೆಯಾದಿತ್ಯ ಎನ್ನುವುದನ್ನು ನೋಡಬೇಕಾಗಿದೆ. ಕಳೆದ ವರ್ಷ ಕಾಯರ್ತೋಡಿಯ ಮಹಾವಿಷ್ಣು ದೇವಸ್ಥಾನದ

ಬ್ರಹ್ಮಕಲಶೋತ್ಸವದ ಸಂದರ್ಭದಲ್ಲಿಯೂ ಈ ಮಕ್ಕಳು ಏಳು ದಿನಗಳ ಕಾಲ ಸ್ವಚ್ಛತೆಯ ಅರಿವು ಮೂಡಿಸುವ ಕಾರ್ಯವನ್ನು ಯಶಸ್ವಿಯಾಗಿ ಮಾಡಿದ್ದರು. ಮಕ್ಕಳ ಈ ನಡೆಯಿಂದ ಹಿರಿಯರು ಪ್ರೇರಣೆ ಪಡೆದು ಜಾತ್ರೆಯಲ್ಲಿ ಕಸವನ್ನು ಕಡಿಮೆ ಮಾಡುವ ಮೂಲಕ, ಪ್ಲಾಸ್ಟಿಕ್ ಚೀಲಗಳ ಬದಲಾಗಿ ಬಟ್ಟೆ ಚೀಲಗಳನ್ನು ಬಳಕೆ ಮಾಡುವ ಮೂಲಕ ನಗರದ ಸ್ವಚ್ಛತೆಗೆ ಕೈಜೋಡಿಸಿದಲ್ಲಿ ಮಕ್ಕಳ ಈ ಪ್ರಯತ್ನ ಸಾರ್ಥಕ.

(ವಿನಯಕುಮಾರ್ ಕಂದಡ್ಕ ನಗರ ಪಂಚಾಯತ್ ಮಾಜಿ ಅಧ್ಯಕ್ಷರು)









