ಸುಳ್ಯ:ಸಭೆಗೆ ಅಧಿಕಾರಿಗಳು ಗೈರಾದ ಹಿನ್ನಲೆಯಲ್ಲಿ ಸುಳ್ಯ ನಗರ ಪಂಚಾಯತ್ ಸಾಮಾನ್ಯ ಸಭೆಯನ್ನು ರದ್ದುಪಡಿಸಿದ ಘಟನೆ ನಡೆದಿದೆ. ಸುಳ್ಯ ನಗರ ಪಂಚಾಯತ್ ಅಧ್ಯಕ್ಷೆ ಶಶಿಕಲಾ ನೀರಬಿದಿರೆ ಅಧ್ಯಕ್ಷತೆಯಲ್ಲಿ ನಗರ ಪಂಚಾಯತ್ ಸಭೆ ಫೆ.27ರಂದು ಆಯೋಜಿಸಲಾಗಿತ್ತು. ಎಲ್ಲಾ ಸದಸ್ಯರು ಭಾಗವಹಿಸಿದ್ದರು. ಆದರೆ ಹಿರಿಯ ಆರೋಗ್ಯ ಅಧಿಕಾರಿ ಸೇರಿದಂತೆ ಕೆಲವು ಅಧಿಕಾರಿಗಳು ಗೈರು ಹಾಜರಾದ ಕಾರಣ ಮತ್ತು
ನಗರ ಪಂಚಾಯತ್ ಸಭೆಯಲ್ಲಿ ಆದ ನಿರ್ಣಯಗಳು ಅನುಷ್ಠಾನ ಆಗುತ್ತಿಲ್ಲ, ಸಾರ್ವಜನಿಕ ಕೆಲಸಗಳು ನಡೆಯುತ್ತಿಲ್ಲ ಎಂದು ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಹಿನ್ನಲೆಯಲ್ಲಿ ಸಭೆಯನ್ನು ರದ್ದುಪಡಿಸಲಾಯಿತು. ಸಭೆ ಆರಂಭದಲ್ಲಿ ಈ ಕುರಿತು ಚರ್ಚೆ ನಡೆದು ಅಧಿಕಾರಿಗಳು ಇಲ್ಲದೆ ಸಭೆ ನಡೆಸುವುದರಲ್ಲಿ ಅರ್ಥ ಇಲ್ಲಾ ಎಂದು ಸದಸ್ಯರು ಹೇಳಿದರು. ಈ ಹಿನ್ನಲೆಯಲ್ಲಿ ಸಭೆಯನ್ನು ರದ್ದುಪಡಿಸಲಾಗುವುದು ಎಂದು ಅಧ್ಯಕ್ಷರು ಘೋಷಿಸಿದರು. ಸಭೆಗೆ ಹಾಜರಾಗದ ಅಧಿಕಾರಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾದಿಕಾರಿಗಳಿಗೆ ಬರೆಯಲು ನಿರ್ಧರಿಸಲಾಯುತು. ಸುಮಾರು ಆರು ಅಜೆಂಡಾಗಳಿಗೆ ಉತ್ತರಿಸಬೇಕಾದ ಆರೋಗ್ಯಾಧಿಕಾರಿ ಹಾಗೂ ವಿವಿಧ ವಿಚಾರಗಳಿಗೆ ಉತ್ತರಿಸಬೇಕಾದ ಅಧಿಕಾರಿಗಳು ಇಲ್ಲದೆ ಸಭೆ ಭಣಗುಟ್ಟುತ್ತಿತ್ತು.

ಗಣರಾಜ್ಯೋತ್ಸವದಲ್ಲಿ ಜನಪ್ರತಿನಿಧಿಗಳ ಕಡೆಗಣನೆ ಮಾಡಲಾಗಿದರುವುದಕ್ಕೆ ಕ್ರಮಕ್ಕೆ ಆಗ್ರಹಿಸಿ ಕಳೆದ ಸಭೆಯಲ್ಲಿ ನಿರ್ಣಯ ಕೈಗೊಂಡಿದ್ದರೂ ಅಧಿಕಾರಿಗಳು ಜನಪ್ರತಿನಿಧಿಗಳ ವಿರುದ್ಧವಾಗಿ ಬರೆದಿದ್ದಾರೆ ಎಂದು ಎಂ.ವೆಂಕಪ್ಪ ಗೌಡ ಹೇಳಿದರು. ತೀವ್ರ ಅಸಮಾಶಾನ ವ್ಯಕ್ತಪಡಿಸಿದ ಅವರು ಈ ರೀತಿ ಅಧಿಕಾರಿಗಳು ಬೇಜವಾಬ್ದಾರಿಯಿಂದ ವರ್ತಿಸುವುದಿದ್ದರೆ ಸಭೆ ನಡೆಸುವುದೇ ಬೇಡ,ಆ ರೀತಿ ನೀಡಿರುವ ವರದಿಯನ್ನು ಕೂಡಲೇ ಹಿಂಪಡೆಯಬೇಕು ಎಂದು ವೆಂಕಪ್ಪ ಗೌಡ ಒತ್ತಾಯಿಸಿದರು.
ಇದಕ್ಕೆ ಸದಸ್ಯರಾದ ವಿನಯಕುಮಾರ್ ಕಂದಡ್ಕ ಧ್ವನಿಗೂಡಿಸಿದರು. ನಗರ ಪಂಚಾಯತ್ ವ್ಯಾಪ್ತಿಯಲ್ಲಿ ಯಾವುದೇ ಸಾರ್ವಜನಿಕ ಕೆಲಸಗಳು ಆಗುತ್ತಿಲ್ಲ ಎಂದು ವಿನಯ ಕಂದಡ್ಕ ಹಾಗೂ ವೆಂಕಪ್ಪ ಗೌಡ ಹೇಳಿದರು. ಖಾಸಗೀ ಬಸ್ ನಿಲ್ದಾಣಕ್ಕೆ ವಾಹನಗಳು ಹೋಗಲು ಆಗುತ್ತಿಲ್ಲ, ಅಲ್ಲಿ ಕಾಂಕ್ರೀಟ್ ಮಾಡಲು ಕಳೆದ ಸಭೆಯಲ್ಲಿ ಒತ್ತಾಯಿಸಿದರೂ, ಮನವಿ ಮಾಡಿದರೂ ಮಾಡಿಲ್ಲ ಎಂದು ಕಂದಡ್ಕ ಬೊಟ್ಟು ಮಾಡಿದರು.
ರಸ್ತೆ ಕಡಿದು ಆವಾಂತರ:
ಕುಡಿಯುವ ನೀರಿನ ಪೈಪ್ ಅಳವಡಿಕೆಗೆಂದು ರಸ್ತೆ ಕಡಿದು ಹಾಕಿ ಸರಿಯಾಗಿ ಮುಚ್ಚದೆ ಸಮಸ್ಯೆ ಆಗಿರುವ ಕುರಿತು ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.ವಿವಿಧ ಕಡೆ ಜನರಿಗೆ ತೀವ್ರ ಸಮಸ್ಯೆ ಉಂಟಾಗಿದೆ, ಕಾಂಕ್ರೀಟ್, ಡಾಮರು ರಸ್ತೆಯನ್ನು ಕಡಿದು ಹಾಕಿ ಸರಿಯಾಗಿ ಮುಚ್ಚದೆ ಸಮಸ್ಯೆ ಉಂಟಾಗಿದೆ. ಈ ಕುರಿತು ಶಾಸಕರು,ಸಂಸದರ ಉಪಸ್ಥಿತಿಯಲ್ಲಿ

ಸಭೆ ನಡೆಸಿ ಪರಿಹಾರ ಹುಡುಕಬೇಕು ಎಂದು ಸದಸ್ಯರು ಆಗ್ರಹಿಸಿದರು. ಸಂಸದರು, ಶಾಸಕರ ದಿನಾಂಕ ಗೊತ್ತುಪಡಿಸಿ ವಿಶೇಷ ಸಭೆ ನಡೆಸಲು ನಿರ್ಧರಿಸಲಾಯಿತು.
ಸಭೆ ಮುಂದೂಡಿದ ಬಗ್ಗೆ ವಾಗ್ಯುದ್ಧ:
ನಗರ ಪಂಚಾಯತ್ ಸಭೆ ಮುಂದೂಡಿದ ಬಳಿಕ ನಗರ ಪಂಚಾಯತ್ ಅಧ್ಯಕ್ಷರು ಹಾಗೂ ವಿಪಕ್ಷ ಸದಸ್ಯರ ಮಧ್ಯೆ ವಾಕ್ಸರಮಕ್ಕೂ ಸಭೆ ವೇದಿಕೆಯಾಯಿತು. ಅಧಿಕಾರಿಗಳನ್ನು ಸಭೆಗೆ ಕರೆಸಬೇಕಾದ ಜವಾಬ್ದಾರಿ ನಗರ ಪಂಚಾಯತ್ ಆಡಳಿತಕ್ಕೆ ಇದೆ ಎಂದು ಕೆ.ಎಸ್.ಉಮ್ಮರ್ ಹೇಳಿದರು. ಈ ರೀತಿ ಸಭೆ ಮುಂದೂಡಿದರೆ ಏನು ಪ್ರಯೋಜನ, ಸಭೆ ಮುಂದೂಡುವುದಲ್ಲ, ಅಧಿಕಾರಿಗಳನ್ನು ಸಭೆಗೆ ಬರುವಂತೆ ಮಾಡಬೇಕು ಎಂದು ಉಮ್ಮರ್ ಹೇಳಿದರು. ವಿಪಕ್ಷ ಸದಸ್ಯರಾದ ಶರೀಫ್ ಕಂಠಿ, ರಾಜು ಪಂಡಿತ್ ಇದಕ್ಕೆ ಧ್ವನಿಗೂಡಿಸಿರು.ವಿಷಯವನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗಿದ್ದು ಸೂಕ್ತ ಕ್ರಮಕ್ಕೆ ಆಗ್ರಹಿಸಿ ನಿರ್ಣಯ ಕೈಗೊಳ್ಳಲಾಗಿದೆ ಎಂದು ಅಧ್ಯಕ್ಷೆ ಶಶಿಕಲಾ ನೀರಬಿದಿರೆ ಹೇಳಿದರು.
ಅಧಿಕಾರಿಗಳು ಸಭೆಗೆ ಬಾರದೆ ಸಭೆ ಮುಂದೂಡಿರುವುದು ಆಡಳಿತದ ವೈಫಲ್ಯ, ಅಧ್ಯಕ್ಷರು ಅಧಿಕಾರ ಬಿಡಿ ಎಂದು ನಾಮನಿರ್ದೇಶಿತ ಸದಸ್ಯ ಸಿದ್ದಿಕ್ ಕೊಕ್ಕೊ ಹೇಳಿದರು. ಇದಕ್ಕೆ ಅಧ್ಯಕ್ಷರು ಹಾಗೂ ಆಡಳಿತ ಸದಸ್ಯರು ತೀಕ್ಷ್ಣವಾಗಿ ಪ್ರತಿಕ್ರಿಸಿದರು. ಈ ಸಂದರ್ಭದಲ್ಲಿ ಆಡಳಿತ, ವಿಪಕ್ಷ ಸದಸ್ಯರ ಮಧ್ಯೆ ತೀವ್ರ ಮಾತಿನ ಚಕಮಕಿ ನಡೆಯಿತು.
ಉಪಾಧ್ಯಕ್ಷ ಬುದ್ಧ ನಾಯ್ಕ್, ಸ್ಥಾಯಿ ಸಮಿತಿ ಅಧ್ಯಕ್ಷೆ ಕಿಶೋರಿ ಶೇಠ್, ಮುಖ್ಯಾಧಿಕಾರಿ ಸುಧಾಕರ ಎಂ.ಎಚ್. ಉಪಸ್ಥಿತರಿದ್ದರು.