ಸುಳ್ಯ: ಕಳೆದ ಎರಡು ಮೂರು ದಿನಗಳಿಂದ ಸುರಿಯುತ್ತಿರುವ ನಿರಂತರ ಮಳೆಗೆ ಸುಳ್ಯ ನಗರ ಪಂಚಾಯತ್ ವ್ಯಾಪ್ತಿಯ ೧೧ ಕಡೆಗಳಲ್ಲಿ ವಿವಿಧ ರೀತಿಯಲ್ಲಿ ಹಾನಿಯಾಗಿದೆ. ಈ ಬಗ್ಗೆ ಪರಿಶೀಲನೆ ನಡೆಸಿ ಮುಂಜಾಗ್ರತೆ ವಹಿಸಲು ಸೂಚಿಸಲಾಗಿದೆ ಎಂದು ಸುಳ್ಯ ನ.ಪಂ. ಮುಖ್ಯಾಧಿಕಾರಿ ಸುಧಾಕರ್ ತಿಳಿಸಿದರು. ಅವರು ಸುಳ್ಯ ನಗರ ಪಂಚಾಯತ್ ಸಭಾಂಗಣದಲ್ಲಿ ಪ್ರಾಕೃತಿಕ ವಿಕೋಪದ ಮುಂಜಾಗ್ರತಾ ಕ್ರಮಗಳಿಗಾಗಿ
ನಡೆದ ಸಭೆಯಲ್ಲಿ ಮಾತನಾಡಿದರು. ನ.ಪಂ. ಆಡಳಿತಾಧಿಕಾರಿ ಮಂಜುನಾಥ್ ಅಧ್ಯಕ್ಷತೆ ವಹಿಸಿದ್ದರು. ಬಾರೀ ಮಳೆಗೆ ಮನೆ ಬಳಿ ಧರೆ ಕುಸಿತ, ಕಂಪೌAಡ್ ಕುಸಿತ, ಮೇಲ್ಛಾವಣಿಗೆ ಹಾನಿ, ಸೇರಿದಂತೆ ಹಲವು ರೀತಿಯಲ್ಲಿ ಹಾನಿ ಸಂಭವಿಸಿದೆ. ಘಟನಾ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಲಾಗಿದೆ. ಡಿವೈಎಸ್ಪಿ, ಎಸಿ ಅವರೂ ಭೇಟಿ ನೀಡಿ ಪರಿಶೀನೆ ನಡೆಸಿದ್ದಾರೆ. ಗುರುಂಪು ಬಳಿ ಸಂಭವಿಸಿದ ಕುಸಿತ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಗಣಿ, ಭೂ ವಿಜ್ಞಾನ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಿ ಪರಿಶೀಲನೆಗೆ ಸೂಚಿಸಲಾಗಿದೆ ಎಂದರು. ಯಾವುದೇ ಅಪಾಯ ಸಂಭವಿಸದಂತೆ ಮುಂಜಾಗ್ರತೆ ವಹಿಸಲಾಗಿದೆ, ಪರಿಹಾರ ಕಾರ್ಯದ ಕೆಲಸವೂ ನಡೆಯುತ್ತಿದೆ ಎಂದರು.
ಜೆಸಿಬಿಯಿಂದ ಅಸಾಧ್ಯ;
ರಸ್ತೆ ಬದಿಯ ಚರಂಡಿಗಳ ದುರಸ್ತಿ ಜೇಸಿಬಿಯಿಂದಲೇ ಸಮರ್ಪಕ ನಡೆಸುವುದು ಅಸಾಧ್ಯ. ಅಂತಹ ಕಡೆಗಳಲ್ಲಿ ಮನುಷ್ಯರೇ ಹಾರೆಯಿಂದ ಚರಂಡಿ ದುರಸ್ತಿ ಕೆಲಸ ಮಾಡಿದಲ್ಲಿ ಸಮರ್ಪಕವಾಗಿ ದುರಸ್ತಿ ಕೆಲಸ ಆಗಲಿದೆ ಎಂದು ಸದಸ್ಯರು ಸಲಹೆ ನೀಡಿದರು. ಮರ ತೆರವಿಗೆ ಪಟ್ಟಿ ಸಲ್ಲಿಸಿದ್ದರೂ ತೆರವು ನಡೆಸಿಲ್ಲ ಎಂದು ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.ಸಭೆಯಲ್ಲಿ ಬಂದು ಆರೋಪ ಮಾಡಲು ಬರುವುದು ಬೇಡ ಎಂದು ವಿನಯಕುಮಾರ್ ಕಂದಡ್ಕ ಹೇಳಿದರು. ಪ್ರವಾಹ ವೇಳೆ ಹೇಗೆ ಎದುರಿಸಬೇಕು ಎಂಬ ಬಗ್ಗೆ ಕೆಲಸ ಮಾಡಬೇಕು. ಅಧಿಕಾರಿಗಳು ಇಲ್ಲದೆ ಕೆಲಸ ಮಾಡಲು ಸಾಧ್ಯವೇ ಎಂದ ಅವರು, ಎಲ್ಲ ಆರೋಪಗಳನ್ನು ನೀವೆ ಮಾಡುತ್ತಾ ಇದ್ದರೆ ನಮ್ಮ ಸಮಸ್ಯೆಗಳ ಬಗ್ಗೆ ನಾವು ಯಾವಾಗ ತಿಳಿಸುವುದು ಎಂದು ಅವರು ಪ್ರಶ್ನಿಸಿದರು. ಈ ವೇಳೆ ಸದಸ್ಯರ ಮಧ್ಯೆ ಬಾರೀ ವಾಗ್ವಾದ ನಡೆಯಿತು.
ಗುರುಂಪು ಬಳಿ ನ.ಪಂ.ನ ಕುಡಿಯುವ ನೀರಿನ ಟ್ಯಾಂಕ್ ಅಪಾಯದ ಸ್ಥಿತಿಯಲ್ಲಿದೆ. ಟ್ಯಾಂಕ್ ಕುಸಿದಲ್ಲಿ ಬಾರೀ ಅನಾಹುತ ಸಂಭವಿಸುವ ಭೀತಿಯೂ ಇದೆ ಎಂದು ವಿನಯಕುಮಾರ್ ಹೇಳಿದರು. ಸಾಕು ನಾಯಿಗಳನ್ನು ಬೀದಿಗೆ ಬಿಡದಂತೆ ಸೂಚಿಸುವಂತೆ ಹಾಗೂ ಬೀದಿ ನಾಯಿಗಳ ನಿಯಂತ್ರಿಸುವಂತೆ, ವಿವಿಧ ಇಲಾಖೆ ಅಧಿಕಾರಿಗಳ ಗೈರಿಗೆ ಆಕ್ರೋಶ ಸೇರಿದಂತೆ ವಿವಿಧ ವಿಚಾರಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು. ಸುಳ್ಯದಲ್ಲಿ ಒಳಚರಂಡಿ ವ್ಯವಸ್ಥೆ ಸಮರ್ಪಕವಾಗಿಲ್ಲ. ಚರಂಡಿ, ಮ್ಯಾನ್ಹೋಲ್ ಸರಿಯಾಗಿಲ್ಲ. ಇದರಿಂದ ಸಮಸ್ಯೆಗಳು ನಿರಂತರವಾಗಿ ಉಂಟಾಗುತ್ತಿದೆ ಎಂದು ಎಂ.ವೆಂಕಪ್ಪ ಗೌಡ ತಿಳಿಸಿದರು. ಕೆಯುಡಬ್ಲ್ಯುಎಸ್ನ ಇಂಜೀನಿಯರ್ಗಳು ಸುಳ್ಯದ ಒಳಚರಂಡಿ ವ್ಯವಸ್ಥೆ, ಕಾಮಗಾರಿ ನಡೆದ ಬಗ್ಗೆ ಸಭೆಯಲ್ಲಿ ಮಾಹಿತಿ ನೀಡಿದರು.
ನನ್ನ ವಾರ್ಡ್ನಲ್ಲಿ ಚರಂಡಿ ದುರಸ್ತಿ, ಮರ ತೆರವು ಕೆಲಸ ನಡೆದಿಲ್ಲ ಎಂದು ದೂರಿದ ವೆಂಕಪ್ಪ ಗೌಡ ಅವರ ಆದ್ದರಿಂದ ನನ್ನ ಕೆಲಸ ಆಗುವುದಿಲ್ಲವಾದರೆ ನನಗೆ ಸಭೆಯಲ್ಲಿ ಚಹಾ-ತಿಂಡಿ ಬೇಡ ಎಂದು ನಿರಾಕರಿಸಿ, ಸಭೆಯಲ್ಲಿ ಚಹಾ-ತಿಂಡಿ ಸೇವಿಸಲಿಲ್ಲ.
ಸುಳ್ಯ ತಾಲೂಕು ಆರೋಗ್ಯಾಧಿಕಾರಿ ಡಾ.ನಂದಕುಮಾರ್, ತಾಲೂಕು ಆಸ್ಪತ್ರೆ ವೈದ್ಯಾಧಿಕಾರಿ ಡಾ,ಕರುಣಾಕರ್, ನ.ಪಂ. ಇಂಜಿನಿಯರ್ ಶ್ರೀಧರ್, ಸುಳ್ಯ ಗ್ರಾಮ ಲೆಕ್ಕಾಧಿಕಾರಿ ತಿಪ್ಪೇಶ್, ಸುಳ್ಯ ವಲಯ ಅರಣ್ಯಾಧಿಕಾರಿ ಎನ್. ಮಂಜುನಾಥ್, ನ.ಪಂ. ಸದಸ್ಯರಾದ ಎಂ.ವೆಂಕಪ್ಪ ಗೌಡ, ವಿನಯಕುಮಾರ್ ಕಂದಡ್ಕ, ಬಾಲಕೃಷ್ಣ ಭಟ್, ಉಮ್ಮರ್ ಕೆ.ಎಸ್., ಡೇವಿಡ್ ಧೀರಾ ಕ್ರಾಸ್ತಾ, ಬುದ್ಧ ನಾಯ್ಕ, ಸುಧಾಕರ, ಬಾಲಕೃಷ್ಣ ರೈ, ಪ್ರವೀತಾ ಪ್ರಶಾಂತ್, ಸುಶೀಲ ಜಿನ್ನಪ್ಪ, ಸರೋಜಿನಿ ಪೆಲ್ತಡ್ಕ, ಶೀಲಾ ಕುರುಂಜಿ, ಕಿಶೋರಿ ಶೇಟ್, ಶಶಿಕಲಾ ನೀರಬಿದಿರೆ ಮತ್ತಿತರರು ಸಭೆಯಲ್ಲಿ ಭಾಗವಹಿಸಿದ್ದರು.