ಸುಳ್ಯ: ನಗರ ಪಂಚಾಯತ್ ಕಚೇರಿಯ ಸುತ್ತವೇ ಕಸದ ರಾಶಿಯನ್ನು ಶೇಖರಿಸಿಟ್ಟು ರಾಜ್ಯದಲ್ಲಿ ಮಟ್ಟದಲ್ಲಿ ಸುದ್ದಿಯಾಗಿ ಹಲವು ವರ್ಷಗಳ ಕಾಲ ವಿವಾದದ ಕೇಂದ್ರವಾಗಿ ಮಾರ್ಪಟ್ಟಿದ್ದ ನಗರ ಪಂಚಾಯತ್ ಪರಿಸರ ಈಗ ತ್ಯಾಜ್ಯವು ಮುಕ್ತ. ಕಳೆದ ಆರು ವರ್ಷಗಳಿಂದ ನಗರ ಪಂಚಾಯತ್ಗೆ ದೊಡ್ಡ ತಲೆ ನೋವಾಗಿದ್ದ ಕಸವನ್ನು ಸಂಪೂರ್ಣ ತೆರವು ಮಾಡಲಾಗಿದೆ. ಕಳೆದ ಒಂದೆರಡು ವರ್ಷಗಳಿಂದ ಕಸ ತೆರವು ಮಾಡುವುದು ನಗರ
ಪಂಚಾಯತ್ಗೆ ದೊಡ್ಡ ತಲೆ ನೋವು ಮತ್ತು ಸವಾಲಾಗಿ ಪರಿಣಮಿಸಿತ್ತು. ಕೊನೆಗೂ ನಗರ ಪಂಚಾಯತ್ ಮುಂಭಾಗದ ವಾಹನ ಪಾರ್ಕಿಂಗ್ ಕಟ್ಟಡ ಹಾಗೂ ನಗರ ಪಂಚಾಯತ್ ಸಮೀಪ, ಹಿಂಭಾಗ ಮತ್ತು ಆವರಣದಲ್ಲಿ ತುಂಬಿಡಲಾಗಿದ್ದ ಸಂಪೂರ್ಣ ಕಸದ ರಾಶಿ ತೆರವು ಮಾಡಲಾಗಿದೆ. ನಗರ ಪಂಚಾಯತ್ ಸುತ್ತಲೂ ತುಂಬಿದ್ದ 900 ಟನ್ಗೂ ಹೆಚ್ಚು ಕಸವನ್ನು ಸಾಗಾಟ ಮಾಡಿ ಪರಿಸರವನ್ನು ಸ್ವಚ್ಛಗೊಳಿಸಲಾಗಿದೆ.ವಿವಿಧ ಹಂತಗಳಲ್ಲಿ 3 ಬಾರಿ ಟೆಂಡರ್ ನಡೆಸಿ ಕಸ ಸಾಗಾಟ ಮಾಡಲಾಗಿದೆ.ಮೊದಲು ಸುಮಾರು 200 ಟನ್ ಕಸ ಸಾಗಾಟ ಮಾಡಲಾಗಿತ್ತು. ಬಳಿಕ ಟೆಂಡರ್ ನಡೆಸಿ ಪೂರ್ತಿ ಕಸವನ್ನು ಸಾಗಾಟ ನಡೆಸಲಾಗಿದೆ.
ನಗರ ಪಂಚಾಯತ್ ಆವರಣದಲ್ಲಿ ತುಂಬಿಡಲಾಗಿದ್ದ ಕಸದ ರಾಶಿ
ಕಲ್ಚರ್ಪೆಯ ತ್ಯಾಜ್ಯ ಸಂಸ್ಕರಣಾ ಘಟಕ ತುಂಬಿ ತುಳುಕಿದ ಕಾರಣ 2017ರಲ್ಲಿ ಕಸವನ್ನು ನಗರ ಪಂಚಾಯತ್ ಮುಂಭಾಗದ ಕಟ್ಟಡದಲ್ಲಿ ಹಾಗೂ ನಗರ ಪಂಚಾಯತ್ ಹಿಂಭಾಗದಲ್ಲಿ ಕಸವನ್ನು ತುಂಬಿಡಲಾಗಿತ್ತು. ಬೆಟ್ಟದಂತೆ ಬೆಳೆದು ದುರ್ನಾತ ಬೀರುತ್ತಿದ್ದ ಕಸ ಭಾರೀ ವಿವಾದಕ್ಕೆ ಕಾರಣವಾಗಿತ್ತು. ವಿನಯ ಕುಮಾರ್ ಕಂದಡ್ಕ ನೇತೃತ್ವದಲ್ಲಿ ನಗರ ಪಂಚಾಯತ್ ನೂತನ ಆಡಳಿತ ಮಂಡಳಿ ಅಧಿಕಾರಕ್ಕೆ ಬಂದ ಬಳಿಕ ನಿರಂತರ ಪ್ರಯತ್ನದ ಮೂಲಕ ಕಸ ಸಾಗಾಟವನ್ನು ನ.ಪಂ. ಆಡಳಿತದ ಮೊದಲ ಅವಧಿ ಮುಗಿಯುವುದಕ್ಕೆ ಮುನ್ನ ಪೂರ್ತಿ ಮಾಡಿದ್ದಾರೆ. ಒಟ್ಟಿನಲ್ಲಿ ಕಸ ತುಂಬಿದ್ದ ಕಟ್ಟಡದಲ್ಲಿ ವಾಹನ ಪಾರ್ಕಿಂಗ್ ಮಾಡಲಾಗುತಿದೆ. ನ.ಪಂ.ನ ಹಿಂಭಾಗ ಕಸ ಇದ್ದ ಜಾಗದಲ್ಲಿ ಈಗ ಗಿಡಗಳು ಬೆಳೆದು ಹಸಿರಾಗಿದೆ.
ಕಸ ತೆರವುಗೊಂಡ ಬಳಿಕ
ಇದೀಗ ಪ್ರತಿ ದಿನ ಸಂಗ್ರಹಿಸುವ ಕಸವನ್ನು ಕಲ್ಚರ್ಪೆಯ ಬರ್ನಿಂಗ್ ಯಂತ್ರದ ಮೂಲಕ ಸಂಸ್ಕರಿಸಲಾಗುತಿದೆ ಎಂದು ನಗರ ಪಂಚಾಯತ್ ಅಧಿಕಾರಿಗಳು ಹೇಳುತ್ತಾರೆ. ಪ್ರತಿ ದಿನ ನಗರದಲ್ಲಿ ಸಂಗ್ರಹಿಸಲಾಗುವ ಸುಮಾರು 500-600 ಕೆಜಿ ಕಸವನ್ನು ಬರ್ನ್ ಮಾಡಲಾಗುತ್ತದೆ. ಎರಡೂವರೆ ವರ್ಷದ ಹಿಂದೆ
ನಗರ ಪಂಚಾಯತ್ ಆಡಳಿತ ಅಧಿಕಾರಕ್ಕೆ ಬಂದಾಗ ನಗರ ಪಂಚಾಯತ್ ಸುತ್ತ ತುಂಬಿದ್ದ ಕಸದ ರಾಶಿ ದೊಡ್ಡ ಸವಾಲಾಗಿತ್ತು. ಜನ ಪ್ರತಿನಿಧಿಗಳ ಹಾಗೂ ಅಧಿಕಾರಿಗಳ ಸಹಕಾರದಲ್ಲಿ ಕಸ ಸಾಗಾಟ ಮಾಡಲಾಗಿದೆ ಎನ್ನುತ್ತಾರೆ ನಗರ ಪಂಚಾಯತ್ ಮಾಜಿ ಅಧ್ಯಕ್ಷ ವಿನಯಕುಮಾರ್ ಕಂದಡ್ಕ.